ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಭತ್ತ ಖರೀದಿ ಕೇಂದ್ರ ತೆರೆಯುವುದು, ಮೈಕ್ರೋ ಫೈನಾನ್ಸ್ ಹಾವಳಿ ತಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ರೈತಸಂಘದ ಕಾರ್ಯಕರ್ತರು ಗುರುವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಪಟ್ಟಣದ ಐದುದೀಪದ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಶ್ರೀರಂಗಪಟ್ಟಣ- ಜೇವರ್ಗಿ ಮುಖ್ಯ ಹೆದ್ದಾರಿ ತಡೆದು ಮಾನವ ಸರಪಳಿ ನಿರ್ಮಿಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ತಹಸೀಲ್ದಾರ್ ಸಂತೋಷ್ ಅವರಿಗೆ ಮನವಿ ಸಲ್ಲಿಸಿದರು.
ರೈತಸಂಘದ ಹಿರಿಯ ಮುಖಂಡ ಕೆ.ಟಿ.ಗೋವಿಂದೇಗೌಡ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತ ವಿರೋಧಿ ಧೋರಣೆ ನೀತಿ ಅನುಸರಿಸುತ್ತಿವೆ. ರೈತನನ್ನು ಜೀತದಾಳುಗಳಂತೆ ನೋಡುತ್ತಿವೆ. ಅಧಿಕಾರದಲ್ಲಿರುವ ಆಡಳಿತ ಪಕ್ಷಗಳು ಅಧಿಕಾರಕ್ಕಾಗಿ ಕಿತ್ತಾಡುತ್ತಿವೆ ಹೊರತು, ದುರ್ಬಲರು, ಬಡವರು, ರೈತರ ಬದುಕು, ಆದಾಯವನ್ನು ಸುಸ್ಥಿತಗೊಳಿಸುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.ರೈತಸಂಘದ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಭತ್ತ ಕಟಾವು ಮುಗಿದರೂ ಸರಕಾರಗಳು ಮಾತ್ರ ಭತ್ತ, ರಾಗಿ ಖರೀದಿ ಕೇಂದ್ರ ಆರಂಭಿಸಿಲ್ಲ. ಇದರಿಂದ ರೈತರು ಬೆಳೆದ ಭತ್ತವನ್ನು ದಲ್ಲಾಳಿಗಳು ಸಿಕ್ಕಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ಆರ್ಥಿಕ ನಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬೆಳೆಗೆ ಎಂಎಸ್ ಪಿ ಶಾಸನಬದ್ಧವಾಗಿ ಜಾರಿಯಾಗಬೇಕು, ರೈತರ ಆರ್ ಟಿಸಿಯಲ್ಲಿ ಆಗಿರುವ ಲೋಪಗಳನ್ನು ಅಧಿಕಾರಿಗಳು ಯಾವುದೇ ಶುಲ್ಕವಿಲ್ಲದೆ ಸರಿಪಡಿಸಬೇಕು. ನಮ್ಮವರೇ ಶಾಸಕರು ಇದ್ದರೂ ಸಹ ಪಟ್ಟಣದ ಸರಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ಮೈಕ್ರೋಫೈನಾನ್ಸ್ ಹಾವಳಿಯಿಂದ ಸಾಕಷ್ಟು ಮಂದಿ ತೊಂದರೆಗೆ ಸಿಲುಕಿ ಊರುಗಳನ್ನೇ ಬಿಡುತ್ತಿದ್ದಾರೆ. ಹಾಗಾಗಿ ಮೈಕ್ರೋ ಫೈನಾನ್ಸ್ ಗಳನ್ನು ಮುಚ್ಚಿಸಬೇಕು, ಕೆಆರ್ ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಬಿಡುವುದಾಗಿ ತಿಳಿಸಿದ್ದಾರೆ. ಜೂನ್, ಜುಲೈ ತಿಂಗಳಲ್ಲಿ ನಾಲೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ ರೈತರಿಗೆ ಒಂದು ಲಕ್ಷದವರೆಗೂ ಸಾಲಮನ್ನಾ ಮಾಡಿದ್ದರು. ಆದರೆ, ಕೆಲವು ರೈತರಿಗೆ ಸಾಲಮನ್ನಾವಾಗಿಲ್ಲ. ಬಾಕಿ ಉಳಿದಿರುವ ಸಾಲವನ್ನು ಮನ್ನಾ ಮಾಡಬೇಕು, ಕೆಆರ್ ಎಸ್ ಅಣೆಕಟ್ಟೆಯಲ್ಲಿ ಆಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣದ ಯೋಜನೆ ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರೈತಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಪ್ರಕಾಶ್, ರಾಘವ, ದಯಾನಂದ, ಕೋಕಿಲ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.