ಸಾರಾಂಶ
ಖರೀದಿ ಕೇಂದ್ರಗಳನ್ನು ನಾಳೆಯಿಂದ ಆರಂಭಿಸಿ ರೈತರಿಂದ ಖರೀದಿ ಮಾಡಬೇಕು.
ಕಂಪ್ಲಿ: ಭತ್ತಕ್ಕೆ ಮಾರುಕಟ್ಟೆಯಲ್ಲಿ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆ ಇರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಭತ್ತ ರಸ್ತೆಗೆ ಸುರಿದು ಶನಿವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ನಿರಂತರವಾಗಿ ಹಾಗೂ ಷರತ್ತು ರಹಿತವಾಗಿ ಭತ್ತ ಮತ್ತು ಜೋಳ ಬೆಳೆಗಳನ್ನು ಖರೀದಿ ಮಾಡಲು ಖರೀದಿ ಕೇಂದ್ರಗಳನ್ನು ನಾಳೆಯಿಂದ ಆರಂಭಿಸಿ ರೈತರಿಂದ ಖರೀದಿ ಮಾಡಬೇಕು. ಭತ್ತ ಮತ್ತು ಜೋಳ ಬೆಳೆಗಳ ಖರೀದಿ ಮಾಡಿದ ಕೂಡಲೇ ರೈತರ ಖಾತೆಗೆ ಹಣ ಪಾವತಿಸಬೇಕು. ಬೇರೆ ರಾಜ್ಯದಿಂದ ಭತ್ತ ಆಮದು ಮಾಡುವುದನ್ನು ನಿಲ್ಲಿಸಿ, ನಮ್ಮ ರಾಜ್ಯದಲ್ಲಿಯೇ ಬೆಳೆದ ಭತ್ತವನ್ನು ಖರೀದಿಸಬೇಕು ಹಾಗೂ ಭತ್ತವನ್ನು ರಫ್ತು ಮಾಡಲು ಅವಕಾಶ ಕಲ್ಪಿಸಬೇಕು. ಕಂಪ್ಲಿ ತಾಲೂಕಿನಾದ್ಯಂತ ಕಳಪೆ, ಕಲಬೆರಕೆ ಭತ್ತದ ಬೀಜಗಳನ್ನು ನೀಡುವವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದರು.ರೈತ ಮುಖಂಡರಾದ ಡಾ.ಎ.ಸಿ.ದಾನಪ್ಪ ಮಾತನಾಡಿ, ಕಂಪ್ಲಿ ಎಪಿಎಂಸಿ ಆವರಣದಲ್ಲಿ ರೈತರ ಬೆಳೆಗಳನ್ನು ಹಾಕಲು ಮತ್ತು ಒಣಗಿಸಲು ಸೂಕ್ತ ಸ್ಥಳ ಒದಗಿಸಬೇಕು. ಅನ್ನಭಾಗ್ಯ ಯೋಜನೆಗೆ ಬೇರೆ ರಾಜ್ಯದಿಂದ ಅಕ್ಕಿ ಆಮದು ಮಾಡುವುದನ್ನು ನಿಲ್ಲಿಸಿ, ನಮ್ಮ ರಾಜ್ಯದಲ್ಲಿಯೇ ಬೆಳೆದ ಭತ್ತವನ್ನು ಖರೀದಿಸಿ ಅನ್ನಭಾಗ್ಯ ಯೋಜನೆಗೆ ಬಳಕೆ ಮಾಡಬೇಕು. ರೈತರಿಂದ ನೇರವಾಗಿ ಅಕ್ಕಿಯನ್ನು ಖರೀದಿ ಮಾಡಿ ಅನ್ನಭಾಗ್ಯ ಯೋಜನೆಗೆ ಬಳಕೆ ಮಾಡಬೇಕು ಎಂದು ಆಗ್ರಹಿಸಿದರು.
ಇಲ್ಲಿನ ಸಂಗಾತ್ರಯ ಸಂಸ್ಕೃತ ಪಾಠ ಶಾಲೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ವಿವಿಧ ಮುಖ್ಯ ರಸ್ತೆಗಳ ಮಾರ್ಗವಾಗಿ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಸಮಾವೇಶಗೊಂಡಿತು. ಬಳಿಕ ರೈತರು ಬೆಳೆದ ಭತ್ತವನ್ನು ರಸ್ತೆಗೆ ಸುರಿದು ವಿಶೇಷವಾಗಿ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.ಈ ಕುರಿತು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಶಿವರಾಜ್ ಶಿವಪುರ ಅವರಿಗೆ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರಮರೆಡ್ಡಿ, ತಾಲೂಕು ಅಧ್ಯಕ್ಷ ವೀರೇಶ್, ಕಾರ್ಯಾಧ್ಯಕ್ಷ ಕೆ. ರಮೇಶ್, ಡಿ. ಮುರಾರಿ, ನಗರ ಘಟಕ ಅಧ್ಯಕ್ಷ ತಿಮ್ಮಪ್ಪ ನಾಯಕ, ನಗರ ಘಟಕ ಗೌರವಾಧ್ಯಕ್ಷ ಆದೋನಿ ರಂಗಪ್ಪ, ರೈತ ಮುಖಂಡರಾದ ಚಲ್ಲಾ ವೆಂಕಟ ನಾಯ್ಡು, ಎಮ್ಮಿಗನೂರು, ದೇವಸಮುದ್ರ, ಕೊಟ್ಟಾಲ್, ಚಿಕ್ಕಜಾಯಿಗನೂರು, ಬೆಳಗೋಡ ಹಾಳ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತ ಮುಖಂಡರಿದ್ದರು.