ಸಾರಾಂಶ
ಕಬ್ಬು ಬೆಳೆಯುವುದರಿಂದ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶೀಘ್ರ ಸಕ್ಕರೆ ಕಾರ್ಖಾನೆ ಆರಂಭಿಸುವ ಕುರಿತು ಸರ್ಕಾರ ಕ್ರಮ ವಹಿಸಬೇಕು.
ಹೊಸಪೇಟೆ: ಹೊಸಪೇಟೆ ಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುವುದರಿಂದ ಕೂಡಲೇ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ವಾಸುದೇವ ಮೇಟಿ ಬಣ) ವತಿಯಿಂದ ನಗರದ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಗಾಂಧಿ ಚೌಕ್‌ನಿಂದ ಆರಂಭಗೊಂಡ ಮೆರವಣಿಗೆ ನಗರದ ವಿವಿಧ ವೃತ್ತಗಳಲ್ಲಿ ಸಾಗಿ ನಗರದ ಡಾ.ಪುನೀತ್ ರಾಜಕುಮಾರ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿವರೆಗೆ ಬೃಹತ್ ಮೆರವಣಿಗೆ ಸಾಗಿತು.ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಮಾತನಾಡಿ, ಈ ಭಾಗದಲ್ಲಿ ಅತಿ ಹೆಚ್ಚಾಗಿ ಕಬ್ಬು ಬೆಳೆಯುವುದರಿಂದ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶೀಘ್ರ ಸಕ್ಕರೆ ಕಾರ್ಖಾನೆ ಆರಂಭಿಸುವ ಕುರಿತು ಸರ್ಕಾರ ಕ್ರಮ ವಹಿಸಬೇಕು. ಈಗಾಗಲೇ ಈ ಕುರಿತು ಹಲವಾರು ಬಾರಿ ಮನವಿಗಳನ್ನು ಸಲ್ಲಿಸಲಾಗಿದೆ. ಆದರೆ, ಈವರೆಗೂ ಯಾವುದೇ ಸ್ಪಂದನೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರೈತ ಸಂಘಟನೆ ಮುಖಂಡರೊಂದಿಗೆ ಚರ್ಚೆ ಮಾಡಿ ಸ್ಥಳ ನಿಗದಿಗೊಳಿಸಿ, ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಬೇಕು. ಸಕ್ಕರೆ ಕಾರ್ಖಾನೆಯಿಂದ ಈ ಭಾಗದಲ್ಲಿ ಸಾಕಷ್ಟು ರೈತರಿಗೆ ಅನುಕೂಲವಾಗಲಿದೆ. ಉದ್ಯೋಗ ಸೃಷ್ಟಿಯಾಗಲಿದೆ. ಹೊಸಪೇಟೆಯಲ್ಲಿ ರೈತರು ಬೆಳೆಯುತ್ತಿರುವ ಕಬ್ಬು ಹೆಚ್ಚಿನ ಹಣ ಖರ್ಚು ಮಾಡಿ ಬೇರೆ ಜಿಲ್ಲೆಗಳಿಗೆ ರಫ್ತು ಮಾಡುವ ಕಷ್ಟವೂ ತಪ್ಪಲಿದೆ. ಹಾಗಾಗಿ ಮುಂದಿನ ಜನವರಿಯೊಳಗೆ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಬೇಕೆಂದು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ಎಂ.ಎಂ.ಶೃತಿ ಅವರಿಗೆ ಮನವಿ ಸಲ್ಲಿಸಿದರು.ಸಂಘದ ಗೌರವಾಧ್ಯಕ್ಷ ವೆಂಕೋಬಪ್ಪ, ಕಾರ್ಯದರ್ಶಿ ವೆಂಕಟೇಶ್, ಉಪಾಧ್ಯಕ್ಷ ಕುಬೇರ, ಮುಖಂಡರಾದ ರಾಧಾ, ರೂಪಾ, ಮರಿಯಮ್ಮನಹಳ್ಳಿ ಸೋಮಣ್ಣ, ಕಮಲಾಪುರ ಬಸಪ್ಪ, ಎಚ್‌ಬಿಹಳ್ಳಿ ಕೊಟ್ರೇಶ್, ಹರಪನಹಳ್ಳಿ ರತ್ನಮ್ಮ, ಗಿರಿಜಮ್ಮ, ಲಕ್ಷ್ಮೀ, ರೂಪಾ ಮತ್ತಿತರರಿದ್ದರು.
ಹೊಸಪೇಟೆಯಲ್ಲಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ವಾಸುದೇವ ಮೇಟಿ ಬಣ) ವತಿಯಿಂದ ಪ್ರತಿಭಟನೆ ನಡೆಯಿತು.