ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

| Published : Mar 05 2025, 12:32 AM IST

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಳ್ಳೇಗಾಲ ತಾಲೂಕು ಗುಂಡಾಲ್ ಜಲಾಶಯದ ಹಳೆ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದ ಸದಸ್ಯರು ಕೈಗೊಂಡಿರುವ ಪಾದಯಾತ್ರೆ ಮಂಗಳವಾರ ಪಟ್ಟಣ ತಲುಪಿತು.

ಯಳಂದೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಳ್ಳೇಗಾಲ ತಾಲೂಕು ಗುಂಡಾಲ್ ಜಲಾಶಯದ ಹಳೆ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದ ಸದಸ್ಯರು ಕೈಗೊಂಡಿರುವ ಪಾದಯಾತ್ರೆ ಮಂಗಳವಾರ ಪಟ್ಟಣ ತಲುಪಿತು.

ಪಟ್ಟಣದ ಎಸ್‌ಬಿಐ ವೃತ್ತದಲ್ಲಿ ಜಮಾವಣೆಗೊಂಡ ರೈತರು ರಾಜ್ಯ ಸರ್ಕಾರದ ವಿರುದ್ಧ, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಕರ್ನಾಟಕ ರೈತ ಹಾಗೂ ಹಸಿರುಸೇನೆ ಏಕೀಕರಣದ ಜಿಲ್ಲಾಧ್ಯಕ್ಷ ಗೌಡಹಳ್ಳಿ ಸೋಮಣ್ಣ ಮಾತನಾಡಿ, ಸರ್ಕಾರಿ ಆಸ್ತಿಗಳನ್ನು ಒತ್ತುವರಿ ಮಾಡಲಾಗಿದೆ. ಸಾವಿರಾರು ಎಕರೆ ಭೂಮಿ ಒತ್ತುವರಿಯಾಗಿದ್ದರೂ ಈ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಹರಿಸಿಲ್ಲ. ಇಂತಹ ಆರ್‌ಟಿಸಿ ದಾಖಲಾತಿಗಳನ್ನು ವಜಾಗೊಳಿಸಬೇಕು, ಸರ್ಕಾರಿ ಆಸ್ತಿಗಳನ್ನು ಮೂಲ ದಾಖಲಾತಿಯಂತೆ ಇ-ಸ್ವತ್ತು ಮಾಡಬೇಕು, ಕೊಳ್ಳೇಗಾಲ ತಾಲೂಕು ಟಗರಪುರ ಗ್ರಾಮದಿಂದ ಹನೂರಿನ ಗೋಪಿನಾಥಂ ವರೆಗಿನ ರೈತರ ಜಮೀನುಗಳಿಗೆ ಹಕ್ಕುಪತ್ರ ನೀಡಿ ಇ-ಸ್ವತ್ತನ್ನು ಮಾಡಿಕೊಡಬೇಕು. ರಾಜ್ಯ ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡುತ್ತಿಲ್ಲ. ರಾಜ್ಯದ ರೈತರ ಹಿತದೃಷ್ಟಿಯಿಂದ ಸರ್ಕಾರ ಕೆಲಸ ಮಾಡುತ್ತಿಲ್ಲ. ತಮ್ಮ ಖಜಾನೆ ತುಂಬಿಸಿಕೊಳ್ಳಲು ಜನರನ್ನು ಮದ್ಯದ ದಾಸರಾಗಿ ಮಾಡಲು ಹೊರಟಿದೆ.

ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಸರ್ಕಾರ ಕಡೆಗಣಿಸಿದೆ. ಜಿಲ್ಲೆಗೆ ಹೊಸ ನೀರಾವರಿ ಯೋಜನೆಯನ್ನು ತಂದು ಇಲ್ಲಿನ ರೈತರ ಹಿತ ಕಾಪಾಡಬೇಕು. ಜಿಲ್ಲೆಯ ವಿವಿಯನ್ನು ವಜಾಗೊಳಿಸುವ ನಿರ್ಣಯವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಪಾದಯಾತ್ರೆ ಮಾಡಲಾಗುತ್ತಿದ್ದು ಮಂಗಳವಾರ ಸಂಜೆ ಸಂತೆಮರಹಳ್ಳಿಯಲ್ಲಿ ಪಾದಯಾತ್ರೆ ಮುಗಿಸಿ ಮತ್ತೆ ಬುಧವಾರ ಬೆಳಗ್ಗೆ ಚಾಮರಾಜನಗರಕ್ಕೆ ತಲುಪಿ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.ಆಲ್ಕೆರೆ ಅಗ್ರಹಾರ ನಾಗರಾಜು, ಹಿರಿಯ ಹೋರಾಟಗಾರ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಸೋಮಣ್ಣ, ದಶರಥ, ರಾಮಕೃಷ್ಣ, ವೀರಭದ್ರಸ್ವಾಮಿ ಸೇರಿದಂತೆ ಹಲವರು ಇದ್ದರು.