ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಸಕ್ತ ಸಾಲಿನ ಬಾಕಿ ಕಬ್ಬಿನ ಬಿಲ್ ಹಾಗೂ ಈ ಹಿಂದಿನ ಸಾಲಿನ ಬಾಕಿ ಬಿಲ್ ಕಾರ್ಖಾನೆಗಳು ಪಾವತಿಸಬೇಕು ಎಂದು ಆಗ್ರಹಿಸಿ ರ್ನಾಟಕ ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಮಂಗಳವಾರ ಡಿಸಿ ಕಚೇರಿಗೆ ಮುತ್ತಿಗೆ ಹಾಕುವ ಹಾಕಲು ಯತ್ನಿಸಿದರು.ಜಿಲ್ಲೆಯ ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ, ತೇರದಾಳ, ಬೀಳಗಿ, ಹುನಗುಂದ, ಬಾದಾಮಿ, ಗುಳೇದಗುಡ್ಡ ಸೇರಿದಂತೆ ವಿವಿಧ ಭಾಗದಿಂದ ಆಗಮಿಸಿದ್ದ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳು ಸರ್ಕಾರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆ ಒಡ್ಡಿದರು. ಪ್ರತಿಭಟನಾ ಸ್ಥಳಕ್ಕೆ ಡಿಸಿ ಜಾನಕಿ ಕೆ.ಎಂ., ಎಸ್ಪಿ ಅಮರನಾಥ ರೆಡ್ಡಿ ಆಗಮಿಸಿ ರೈತರೊಂದಿಗೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಮುತ್ತಪ್ಪ ಕೋಮಾರ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತರು ತೀವ್ರ ಸಂಕಷ್ಟದಲ್ಲಿ ಬದುಕು ವಂತಾಗಿದೆ. ಸರ್ಕಾರ ಹಾಗೂ ನೌಕರರಿಗೆ ತೆರಿಗೆ ಕಟ್ಟುವ ಮೂಲಕ ಅವರಿಗೆ ಶಕ್ತಿಯಾಗಿ ನಿಂತಿರುವ ರೈತರಿಗೆ ನೋವು ಆದಾಗ ಯಾರೂ ಬರುತ್ತಿಲ್ಲ. ವರ್ಷಪೂರ್ತಿ ಕಷ್ಟ ಪಟ್ಟು ದುಡಿದು ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದರೆ ಸರಿಯಾಗಿ ಬಿಲ್ ಕೊಡುತ್ತಿಲ್ಲ. ನಾಲ್ಕೈದು ತಿಂಗಳಿನಿಂದ ಜಾತಕ ಪಕ್ಷಿಯಂತೆ ಕಾದು ಕುಳಿತಿರುವ ರೈತರು ನಿತ್ಯ ಉಪವಾಸವಿರುವ ಪರಿಸ್ಥಿತಿ ಉಂಟಾಗಿದೆ ಎಂದು ಕಿಡಿಕಾರಿದರು.ಸರ್ಕಾರ, ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಕಿಂಚಿತ್ತೂ ಕರುಣೆ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಚುನಾವಣೆ ಬಂದಾಗ ನೂರಾರು ಭರವಸೆ ನೀಡುವ ಇವರು ಅಧಿಕಾರಕ್ಕೆ ಬಂದ ನಂತರ ತಿರುಗಿ ನೋಡುತ್ತಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ವಕೀಲ ಯಲ್ಲಪ್ಪ ಹೆಗಡೆ ಮಾತನಾಡಿ, ಪ್ರಸಕ್ತ ಹಂಗಾಮಿನಲ್ಲಿ ಬಾಗಲಕೋಟೆ ಜಿಲ್ಲೆಯ 13 ಸಕ್ಕರೆ ಕಾರ್ಖಾನೆಗಳು ₹1040 ಕೋಟಿ ಕಬ್ಬಿನ ಬಾಕಿ ಉಳಿಸಿಕೊಂಡಿದ್ದು, ಇಂತಹ ಸಕ್ಕರೆ ಕಾರ್ಖಾನೆಗಳ ವಿರುದ್ಧ ಯಾವುದೇ ಕ್ರಮ ಆಗುತ್ತಿಲ್ಲ, ಸೂಚನೆ ನೀಡುತ್ತಿಲ್ಲ. ಕಬ್ಬು ಕಳುಹಿಸಿ 4-5 ತಿಂಗಳಾದರೂ ಬಿಡಿಗಾಸು ಕೊಟ್ಟಿಲ್ಲ ಎಂದರೇ ಏನರ್ಥ ? ಇದು ಶೋಷಣೆ ಅಲ್ಲವೇ ?. ಈ ಹಿಂದಿನ ಎಲ್ಲ ಹಂಗಾಮಿನ ಬಾಕಿ ಸೇರಿ ₹4 ಸಾವಿರ ಕೋಟಿಗಿಂತಲು ಹೆಚ್ಚು ಇದೆ. ಆದರೂ ಯಾರೊಬ್ಬರು ಧ್ವನಿ ಎತ್ತುತ್ತಿಲ್ಲ. ಇದೇ ತಿಂಗಳು ಸಿಎಂ ಸಿದ್ದರಾಮಯ್ಯ ಕೂಡಲ ಸಂಗಮಕ್ಕೆ ಆಗಮಿಸಲಿದ್ದಾರೆ. ಅಷ್ಟರೊಳಗೆ ಬಾಕಿ ಬಿಲ್ ಪಾವತಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯ ಆಗಲಿದೆ ಎಂದು ಎಚ್ಚರಿಕೆ ನೀಡಿದರು.ಈರೆಪ್ಪ ಹಂಚಿನಾಳ, ನಾಗೇಶ ಗೋಲಶೆಟ್ಟಿ, ಬಸವರಾಜ ಧರ್ಮಂತಿ, ಮುತ್ತಪ್ಪ ಹಿರೇಕುಂಬಿ, ತಿಪ್ಪಣ್ಣ ಮೇಟಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಜಿಲ್ಲಾಡಳಿತಕ್ಕೆ ಏಪ್ರಿಲ್ 26ರ ಗಡುವು: ಬಾಗಲಕೋಟೆ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಬಾಕಿ ಬಿಲ್ ಪಡೆಯಲು ಬಾಗಲಕೋಟೆ ಜಿಲ್ಲೆಯ ಕಬ್ಬು ಬೆಳೆಗಾರರು ಜಿಲ್ಲಾಡಳಿತಕ್ಕೆ ಏ.26ರ ಗಡುವು ನೀಡಿದ್ದಾರೆ. ಅಷ್ಟರೊಳಗೆ ಸಕ್ಕರೆ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಗೊಳಿಸಬೇಕು. ಸ್ಪಂದಿಸದಿದ್ದರೆ ಏ.30ರಂದು ಜಿಲ್ಲೆಗೆ ಆಗಮಿಸುವ ಸಿಎಂಗೆ ಘೇರಾವ್ ಹಾಕಲು ಕಬ್ಬು ಬೆಳೆಗಾರರು ನಿರ್ಧರಿಸಿದ್ದಾರೆ. ಸಿಎಂ ಪಾಲ್ಗೊಳ್ಳಲಿರುವ ಕೂಡಲಸಂಗಮದಲ್ಲಿನ ಬಸವ ಜಯಂತಿ ಕಾರ್ಯಕ್ರಮದ ಸ್ಥಳದಲ್ಲೇ ಕಬ್ಬು ಬೆಳೆಗಾರರು ಪರ್ಯಾಯ ಬಸವ ಜಯಂತಿಗೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದಾರೆ.