ರೋಣ ಹಾಗೂ ಗಜೇಂದ್ರಗಡ ತಾಲೂಕುಗಳು ಬಹುತೇಕ ಮಳೆ ಆಶ್ರಿತ ಕೃಷಿ ಭೂಮಿಯನ್ನು ಹೊಂದಿದ್ದು, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ರೈತರ ಬದುಕು ಸಂಪೂರ್ಣ ವಿನಾಶದ ಹಂಚಿಕೆ ತಲುಪಿದೆ.
ರೋಣ: ಕಡಲೆ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಹಾಗೂ ಅತೀ ಶೀಘ್ರದಲ್ಲಿ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ಅಡಿ ಕಡಲೆ ಖರೀದಿ ಮಾಡಲು ಪ್ರಾರಂಭಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ರೋಣ ಹಾಗೂ ಗಜೇಂದ್ರಗಡ ತಾಲೂಕು ಘಟಕ, ಕಿಸಾನ್ ಮೋರ್ಚಾ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಿತು.
ರೋಣ ಹಾಗೂ ಗಜೇಂದ್ರಗಡ ತಾಲೂಕುಗಳು ಬಹುತೇಕ ಮಳೆ ಆಶ್ರಿತ ಕೃಷಿ ಭೂಮಿಯನ್ನು ಹೊಂದಿದ್ದು, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ರೈತರ ಬದುಕು ಸಂಪೂರ್ಣ ವಿನಾಶದ ಹಂಚಿಕೆ ತಲುಪಿದೆ. ಈ ಭಾಗದ ಪ್ರಮುಖ ಹಿಂಗಾರು ಹಂಗಾಮಿನ ಬೆಳೆಯಾದ ಕಡಲಿಗೆ ಸೂಕ್ತ ಬೆಂಬಲ ಬೆಲೆಯನ್ನು ಘೋಷಣೆ ಮಾಡುವ ಜತೆಗೆ ತಕ್ಷಣದಿಂದಲೇ ಕಡಲೆ ಖರೀದಿ ಕೇಂದ್ರವನ್ನು ಸಂಬಂಧಿಸಿದೆ ಇಲಾಖೆಗಳು ಪ್ರಾರಂಭಿಸಬೇಕು.ಮುಂಗಾರು ಹಂಗಾಮಿನಲ್ಲಿ ಹಾನಿಗೀಡಾದ ಬೆಳೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಬೆಳೆ ಪರಿಹಾರ ನೀಡಿದ್ದು, ರೋಣ ಹಾಗೂ ಗಜೇಂದ್ರಗಡ ತಾಲೂಕುಗಳಲ್ಲಿ ಸಮರ್ಪಕವಾಗಿ ಬೆಳೆ ಪರಿಹಾರ ವಿತರಣೆಯಾಗಿಲ್ಲ. ಇದನ್ನು ತಹಸೀಲ್ದಾರ್ ಹಾಗೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಗಮನಿಸಿ ಪರಿಹಾರ ದೊರಕದೆ ಇರುವ ರೈತರಿಗೆ ತಕ್ಷಣವೇ ಪರಿಹಾರ ಮಂಜೂರು ಮಾಡಬೇಕು.
ಮುಂಗಾರು ಹಂಗಾಮಿನಲ್ಲಿ ಆದ ಅತಿವೃಷ್ಟಿಯಿಂದ ಅನೇಕ ಬೆಳೆಗಳು ಹಾಳಾಗಿದ್ದು, ಎಲ್ಲ ಬೆಳೆಗಳಿಗೂ ವಿಮಾ ಪರಿಹಾರ ಮೊತ್ತವನ್ನು ಶೀಘ್ರವೇ ಘೋಷಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸುವವರೆಗೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಧರಣಿ ನಿರತರು ತಿಳಿಸಿದ್ದಾರೆ.ಈ ವೇಳೆ ರಾಜ್ಯ ರೈತ ಸಂಘ ರೋಣ ತಾಲೂಕು ಘಟಕದ ಅಧ್ಯಕ್ಷ ಸಂಗಪ್ಪ ಪವಾಡಶೆಟ್ಟರ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಲೀಲಾವತಿ ಚಿತ್ರಗಾರ, ಮುಖಂಡರಾದ ಮೇಘರಾಜ ಭಾವಿ, ಸಂಗಪ್ಪ ದಂಡಿನ, ಧರ್ಮಣ್ಣ ಬೂಸಗೌಡ್ರ, ಅಶೋಕ ಹಿರೇಮಠ, ರುದ್ರಯ್ಯ ಸಾಲಿಮಠ, ಗಂಗಣ್ಣ ಕೊಟ್ಟಗಿ, ರಾಮಣ್ಣ ಸೂಡಿ, ಬಾಳಪ್ಪ ಮೊರಬದ, ಈರಮ್ಮ ಸಾಗರದ, ಶಂಕ್ರವ್ವ ರಾಯನಗೌಡ್ರ, ಬಸಮ್ಮ ಶಾಂತಗೇರಿ, ಲಲಿತವ್ವ ಹಿರೇಸಕ್ರಗೌಡ್ರ ಸೇರಿದಂತೆ ಇತರರು ಇದ್ದರು.