ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಹಿರೇಇಂಡಿ ಕೆರೆ ಒತ್ತುವರಿ ತೆರವುಗೊಳಿಸಬೇಕು. ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆಗೆ ಚವಡಿಹಾಳ, ಹಂಜಗಿ ಗ್ರಾಮಗಳವರೆಗೆ ಬರುವಂತೆ ನೀರು ಹರಿಸಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರೈತ ಯುವ ಮುಖಂಡ ಪ್ರಶಾಂತ ಲಾಳಸಂಗಿ ನೇತ್ರತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು.ಪ್ರತಿಭಟನೆ ಪಟ್ಟಣದ ಮಹಾವೀರ ವೃತ್ತದಿಂದ ಆರಂಭಿಸಿ ಅಂಬೇಡ್ಕರ್, ಬಸವೇರ್ಶವರ, ಸಂಗೋಳ್ಳಿ ರಾಯಣ್ಣ ವೃತ್ತದ ಮೂಲಕ ನಡೆದು ಮಿನಿ ವಿಧಾನಸೌಧ ತಲುಪಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಯುವ ಮುಖಂಡ ಪ್ರಶಾಂತ ಲಾಳಸಂಗಿ, ಹಿರೇಇಂಡಿ ಕೆರೆ ಸುಮಾರು 40 ಎಕರೆ ಪ್ರದೇಶವನ್ನು ಹೊಂದಿದ್ದು,ಅದು ಅತಿಕ್ರಮಣಗೊಂಡಿದೆ. ಸದ್ಯ ಕೇವಲ 3 ಎಕರೆದಷ್ಟು ಕೆರೆ ಉಳಿದಿದೆ. ಈ ಕೆರೆ ತುಂಬಿದರೆ ಸುಮಾರು 2 ಸಾವಿರ ಎಕರೆ ಭೂಮಿಗೆ ಅಂತರ್ಜಲಮಟ್ಟ ಹೆಚ್ಚಾಗಿ, ದನ, ಕರುಗಳಿಗೆ ಕುಡಿಯುವ ನೀರಿನ ಅನುಕೂಲವಾಗುತ್ತದೆ. ಕೆರೆ ಒತ್ತುವರಿ ಆಗಿದ್ದರಿಂದ ಕೆರೆಯಲ್ಲಿ ನೀರು ನಿಲ್ಲದೆ ರೈತರು ,ಜಾನುವಾರುಗಳಿಗೆ ತೊಂದರೆಯಾಗಿದೆ ಕೂಡಲೇ ಕೆರೆಯನ್ನು ಅಳತೆ ಮಾಡಿ ಒತ್ತುವರಿ ತೆರವುಗೊಳಿಸಿ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ನಮ್ಮ ಮನವಿಗೆ ಸ್ಪಂದಿಸದಿದ್ದರೇ ಮುಂಬರುವ ದಿನದಲ್ಲಿ ನೂರಾರು ರೈತರು ಮಿನಿ ವಿಧಾನಸೌಧ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ದೇವೆಂದ್ರ ಕುಂಬಾರ ಮಾತನಾಡಿ, ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆಗೆ 15 ದಿನಗಳ ಹಿಂದೆ ನೀರು ಹರಿಸಲಾಗಿತ್ತು. ಆದರೆ, ನೀರು ಚವಡಿಹಾಳ, ಹಂಜಗಿ ಸೇರಿದಂತೆ ಮುಂದಿನ ಗ್ರಾಮಗಳವರೆಗೆ ಇರುವ ಕಾಲುವೆಗೆ ನೀರು ಹರಿದಿರುವುದಿಲ್ಲ ಇದರಿಂದ ಚವಡಿಹಾಳ, ಹಂಜಗಿ, ಚಿಕ್ಕಬೇವನುರ ಸೇರಿದಂತೆ ಇತರೆ ಗ್ರಾಮಗಳ ರೈತರಿಗೆ, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ತಾಂಬಾ, ತೆನ್ನಿಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಇರುವ ಕಾಲುವೆಯ ಗೇಟ್‌ಗಳ ಮುಚ್ಚಿದ್ದರಿಂದ ಕೇಳಗಿನ ಹಳ್ಳಿಗಳಿಗೆ ನೀರು ಹರಿಯುತ್ತಿಲ್ಲ. ಹೀಗಾಗಿ ತಾಂಬಾ, ತೆನ್ನಿಹಳ್ಳಿ ಕಾಲುವೆಯ ಗೇಟ್ ಬಳಿ ಕಾವಲುಗಾರರನ್ನು ನೇಮಿಸಿ, ಕೇಳಗಿನ ಗ್ರಾಮಗಳಿಗೆ ನೀರು ಹರಿಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ತಹಸೀಲ್ದಾರ್ ಬಿ.ಎಸ್.ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು. ಮುತ್ತುಗೌಡ ಬಿರಾದಾರ, ಬಸವರಾಜ ಚವಡಿಹಾಳ, ಕೆಂಚಪ್ಪ ಹೊನ್ನಕೊರೆ, ಶಶಿಗೊಂಡ ಪೂಜಾರಿ, ಚಂದ್ರಾಮ ಪೂಜಾರಿ, ಶ್ರೀಶೈಲ ಪೂಜಾರಿ, ಶಿವಲಿಂಗಪ್ಪ ಮಡಿವಾಳ, ಬಾಬುರಾವ ಹೊಟಗಿ, ಮಹಾಂತೇಶ ಲಾಳಸಂಗಿ, ಪರಶುರಾಮ ಪೂಜಾರಿ, ಮಲ್ಲಪ್ಪ ಲಾಳಸಂಗಿ, ಸುರೇಶ ಲಾಳಸಂಗಿ, ನರಸಪ್ಪ ಲಾಳಸಂಗಿ, ಡಿ.ಕೆ.ಪೂಜಾರಿ, ಜಟ್ಟೆಪ್ಪ ಮಡಿವಾಳ, ಸಿದ್ರಾಮ ತಾಂಬೆ, ಅಶೋಕ ತಾಂಬೆ, ಧರ್ಮಣ್ನ ತಾಂಬೆ, ದಶರಥ ಇಂಗಳೆ, ಪುಂಡಲೀಕ ಇಂಗಳೆ, ಮಧು ಘೋರ್ಪಡೆ, ನಿಂಗಪ್ಪ ಪೂಜಾರಿ, ಸಿದ್ದಪ್ಪ ಗುನ್ನಾಪೂರ, ಹಣಮಂತ ಇಂಗಳೆ, ಯಶವಂತ ಜೋರಾಪೂರ, ಶಾಂತು ಲಾಳಸಂಗಿ ಮೊದಲಾದವರು ಇದ್ದರು.