ಕನ್ನಡಪ್ರಭ ವಾರ್ತೆ ಜಮಖಂಡಿತಾಲೂಕಿನ ಸಾವಳಗಿ-ತುಂಗಳ ಭಾಗದ ಜಮೀನುಗಳಿಗೆ ನೀರು ಪೂರೈಸುವ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಕೊಕಟನೂರು ಪಂಪ್‌ ಹೌಸ್‌ ಎದುರು ರೈತರು ಪ್ರತಿಭಟನೆ ನಡೆಸಿದರು. ಪಂಪ್‌ಹೌಸ್‌ನ ಕಾರ್ಮಿಕರನ್ನು ಹೊರಕ್ಕೆ ಕಳುಹಿಸಿದ ಪ್ರತಿಭಟನಾಕಾರರು ಬೀಗ ಜಡಿದು ಘೋಷಣೆ ಕೂಗಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನ ಸಾವಳಗಿ-ತುಂಗಳ ಭಾಗದ ಜಮೀನುಗಳಿಗೆ ನೀರು ಪೂರೈಸುವ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಕೊಕಟನೂರು ಪಂಪ್‌ ಹೌಸ್‌ ಎದುರು ರೈತರು ಪ್ರತಿಭಟನೆ ನಡೆಸಿದರು. ಪಂಪ್‌ಹೌಸ್‌ನ ಕಾರ್ಮಿಕರನ್ನು ಹೊರಕ್ಕೆ ಕಳುಹಿಸಿದ ಪ್ರತಿಭಟನಾಕಾರರು ಬೀಗ ಜಡಿದು ಘೋಷಣೆ ಕೂಗಿದರು.

ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಕಳೆದ ತಿಂಗಳು 17ರಂದು ಸಾವಳಗಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದ್ದರಲ್ಲದೇ, ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ರೈತರ ಮನವಿಯನ್ನು ಪುರಸ್ಕರಿಸದ ಅಧಿಕಾರಿಗಳು ಇದು ವರೆಗೂ ನೀರು ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ರೈತ ಮುಖಂಡರಾದ ರಾಘವೇಂದ್ರ ವಾಘಾಂಕರ ಮತ್ತು ವೆಂಕಪ್ಪ ಗಿರಡ್ಡಿ ಮಾತನಾಡಿ, ಅಧಿಕಾರಿಗಳು ಸಾವಳಗಿ- ತುಂಗಳ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಸುವ ಕಾಲುವೆಗೆ ನೀರು ಬಿಡಬೇಕು. ಇಲ್ಲದೇ ಹೋದಲ್ಲಿ ಅನಿವಾರ್ಯವಾಗಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು, ಮುಂಗಾರು ಮಳೆಯು ಸಕಾಲಕ್ಕೆ ಆಗದೆ ಇರುವುದರಿಂದ ಸಾವಳಗಿ ಹೋಬಳಿಯ ಕನ್ನೂಳ್ಳಿ, ಗದ್ಯಾಳ, ಹಾಗೂ ಕುರಗೋಡ ಗ್ರಾಮಗಳ ರೈತರು ಜನ ಜಾನುವಾರಗಳಿಗೆ ನೀರಿಲ್ಲ ದಂತಾಗಿದ್ದು, ಬಿತ್ತಿದ ಬೆಳೆಗಳು ಒಣಗುವ ಹಂತ ತಲುಪಿವೆ.ನೀರಾವರಿ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಜಿಪಂ ಮಾಜಿ ಸದಸ್ಯ ಸುರೇಶ ಮಾಳಿ, ಪಂಡಿತ ಗಿರಡ್ಡಿ, ಸದಾಶಿವ ಕಲಾಲ, ಹನಮಂತ ಕರೋಶಿ, ರಾಜು ಮಠಪತಿ, ಸಂಗಪ್ಪ ಗಿರಡ್ಡಿ, ಶ್ರೀಮಂತ ವಾಘಾಂವಕರ, ಹಣಮಂತ ಗಣಿ ಆಗ್ರಹಿಸಿದ್ದಾರೆ.

ಪಕ್ಷಾತೀತವಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಸೋಮವಾರ ದಿಂದ ದಸಂಸ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ ಮಾಜಿ ಜಿ ಪಂ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಗ್ರಾಪಂ ಸದಸ್ಯ ಸುಜೀತಗೌಡ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಸುಭಾಷ ಪಾಟೋಳಿ, ಪಿಕೆಪಿಎಸ್‌ ಅಧ್ಯಕ್ಷ ಬಸವರಾಜ ಪರಮಗೂಂಡ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೆಕರ, ತಾಪಂ ಮಾಜಿ ಸದಸ್ಯ ಬಸವರಾಜ ಮಾಳಿ, ರೈತ ಮುಖಂಡರಾದ ಜನಕರಾಜ ನಾಂದ್ರೇಕರ, ತುಕಾರಾಮ ಬಾಪಕರ ಸೇರಿದಂತೆ ಇನ್ನೂ ಅನೇಕ ಪಕ್ಷದ ಮುಖಂಡರು ಹಾಗೂ ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲ್ಲಿದ್ದಾರೆ ಎಂದು ಮೇಲಿನಕೇರಿ ಪತ್ರಿಕಾ ಪ್ರಕಟನೆ ಮುಖಾಂತರ ತಿಳಿಸಿದ್ದಾರೆ.