ಐದಳ್ಳ ಕಾವಲ್ ಭೂಮಿಗಾಗಿ ರೈತರ ಪ್ರತಿಭಟನೆ

| Published : Nov 11 2024, 11:45 PM IST

ಸಾರಾಂಶ

ಹಳೇಬೀಡು ಹೋಬಳಿಯ ಐದಳ್ಳ ಕಾವಲಿನ ಸರ್ವೆ ನಂಬರ್ ೧ರಲ್ಲಿ ಇರುವ ೨೬೮೦ ಎಕರೆ ಭೂಮಿಯನ್ನು ಕೃಷಿಭೂಮಿಗೆಂದು ಅರ್ಜಿ ಸಲ್ಲಿಸಿರುವ ರೈತರಿಗೆ ನೀಡುವುದು ಸೇರಿದಂತೆ ವಿವಿಧ ೪೦ ಬೇಡಿಕೆಗಳಿಗೆ ಒತ್ತಾಯಿಸಿ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಾದಯಾತ್ರೆ ಮೂಲಕ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು. ವಿವಿಧ ೪೦ ಬೇಡಿಕೆಗಳಿಗೆ ಒತ್ತಾಯಿಸಿ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಾದಯಾತ್ರೆ ಮೂಲಕ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಹಳೇಬೀಡು ಹೋಬಳಿಯ ಐದಳ್ಳ ಕಾವಲಿನ ಸರ್ವೆ ನಂಬರ್ ೧ರಲ್ಲಿ ಇರುವ ೨೬೮೦ ಎಕರೆ ಭೂಮಿಯನ್ನು ಕೃಷಿಭೂಮಿಗೆಂದು ಅರ್ಜಿ ಸಲ್ಲಿಸಿರುವ ರೈತರಿಗೆ ನೀಡುವುದು ಸೇರಿದಂತೆ ವಿವಿಧ ೪೦ ಬೇಡಿಕೆಗಳಿಗೆ ಒತ್ತಾಯಿಸಿ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಾದಯಾತ್ರೆ ಮೂಲಕ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಸಕಲೇಶಪುರ ಮಾರ್ಗವಾಗಿ ಪಾದಯಾತ್ರೆಯಲ್ಲಿ ಆಗಮಿಸಿದ ರೈತರು, ಕೆಂಪೇಗೌಡ ವೃತ್ತದ ಬಳಿ ಭೂಮಿ ಕೊಡುವಂತೆ ಆಗ್ರಹಿಸಿ ಘೋಷಣೆ ಕೂಗಿದರು. ಈ ಸಂದರ್ಭ ಮಾತನಾಡಿದ ರಾಜ್ಯ ರೈತ ಸಂಘದ ರಾಷ್ಟ್ರೀಯ ಸಂಚಾಲಕ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನ ಕುಮಾರ್‌, ಐದಳ್ಳ ಕಾವಲಿನ ಸ.ನಂ.೧ರಲ್ಲಿ ಇರುವ ೨೬೮೦ ಎಕರೆ ಭೂಮಿಯನ್ನು ಹಳೇಬೀಡು ಹೋಬಳಿಯ ದೊಡ್ಡಿಕೋಡಿಹಳ್ಳಿ, ಅಪ್ಪಿಹಳ್ಳಿ, ಚಟ್ಟನಹಳ್ಳಿ, ಹಿರೇಹಳ್ಳಿ, ಜಾವಗಲ್ ಹೋಬಳಿ ಬಂದೂರು, ಕಾಳನಕೊಪ್ಪಲು, ಉಂಡಿಗನಾಳು ನಾಯಕನಕೆರೆ ಕಾವಲು ಗ್ರಾಮದ ಈಗಾಗಲೇ ನಿಯಮಬದ್ಧವಾಗಿ ೫೭ನೇ ಅಧಿನಿಯಮದ ಪ್ರಕಾರ ಬಗರ್‌ಹುಕುಂ ಸಾಗುವಳಿ ಅರ್ಜಿ ಸಲ್ಲಿಸಿರುವ ೮೦೦ ಕೃಷಿಕರಿಗೆ ಮಂಜೂರಾತಿ ಮಾಡಬೇಕು ಎಂದರು.

ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಈ ಭೂಮಿಯನ್ನು ಕೃಷಿಕರಿಗೆ ಕೊಡಬಹುದೆಂದು ಆದೇಶ ಸಹ ಮಾಡಿದ್ದಾರೆ. ನಂತರದಲ್ಲಿ ಅಧಿಕಾರಿಗಳು ಸರ್ವೆ ಮಾಡಿ ನಮಗೆ ಭೂಮಿ ಬಿಟ್ಟುಕೊಡುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ, ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಕಾರಣದಿಂದ ೯ನೇ ಹಂತದ ನಮ್ಮ ಪಾದಯಾತ್ರೆ ನಡೆಸುತ್ತಿದ್ದೇವೆ. ನವೆಂಬರ್‌ ೪ರಂದು ಅರಸೀಕೆರೆ ತಾಲೂಕು ಕನಕೆಂಚೇನಹಳ್ಳಿಯಿಂದ ಹೊರಟ ಪಾದಯಾತ್ರೆಯನ್ನು ನವೆಂಬರ್ ೧೨ರಂದು ಐದಳ್ಳಿ ಕಾವಲಿನ ಬಳಿಯ ಹನುಮಂತರಾಯ ದೇಗುಲದ ಬಳಿ ಅಂತ್ಯಗೊಳಿಸುತ್ತೇವೆ ಎಂದು ವಿವರಿಸಿದರು.

ನಮ್ಮ ಬೇಡಿಕೆಗೆ ಸ್ಪಂದನೆ ಸಿಗದಿದ್ದಲ್ಲಿ ಡಿಸೆಂಬರ್ ೨೧ರಂದು ಬೆಳಿಗ್ಗೆ ೮ ಗಂಟೆಯಿಂದ ಬೇಲೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಚಿಕ್ಕಮಗಳೂರು-ಬೆಂಗಳೂರು ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ. ಆ ವೇಳೆ ಯಾವುದೇ ರೀತಿಯ ಅವಘಡ ಸಂಭವಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದ ಕನಕೆಂಚೇನಹಳ್ಳಿ ಪಟೇಲ್ ಪ್ರಸನ್ನಕುಮಾರ್, ನಮ್ಮ ಈ ಹೋರಾಟಕ್ಕೆ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ ಕೃಪಾಶೀರ್ವಾದ ಇದ್ದೇ ಇರುತ್ತದೆ ಎಂದು ತಿಳಿಸಿದರು.ರಸಗೊಬ್ಬರ ಬೆಲೆ ಕಡಿಮೆ ಮಾಡಬೇಕು, ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಬೆಳೆಗೆ ಪರಿಹಾರ ನೀಡಬೇಕು, ಉಚಿತ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಪ್ರಮುಖರಾದ ಏಜಾಸ್‌ಪಾಷ, ಮಹ್ಮದ್‌ದಸ್ತಗೀರ್, ಬೋಜರಾಜು, ಮುಬಾರಕ್ ಅಲಿ, ಅಬ್ರಾಹಂ ಚಿನ್ನಪ್ಪ, ನಂಜಮ್ಮ ಇತರರು ಇದ್ದರು.