ಸಾರಾಂಶ
ಸರ್ಕಾರ ರೈತರ ಬೆಳೆಹಾನಿ ಮತ್ತು ಮನೆ ಹಾನಿಗೆ ಪರಿಹಾರ ಘೊಷಣೆ ಮಾಡಬೇಕು. ವಿಮಾ ಕಂಪನಿಗಳಿಂದ ಸೂಕ್ತ ಬೆಳೆ ವಿಮಾ ಪರಿಹಾರ ಒದಗಿಸಬೇಕು
ಹುಬ್ಬಳ್ಳಿ: ನಿರಂತರ ಮಳೆಗೆ ರೈತರ ಬೆಳೆ ಮತ್ತು ಆಸ್ತಿಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಸರ್ಕಾರ ಕೂಡಲೇ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿತು.
ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ರೈತರು ಮಳೆಯಿಂದ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಹೆಸರು, ಶೇಂಗಾ, ಹತ್ತಿ, ಮೆಣಸಿನಕಾಯಿ ಹಾಗೂ ಇತರೆ ಬೆಳೆಗಳಿಗೆ ಹಾನಿಯಾಗಿದೆ. ಅಲ್ಲದೇ ಅನೇಕ ಮನೆಗಳಿಗೆ ಹಾನಿಯಾಗಿದ್ದು, ಕೆಲವೆಡೆ ಮನೆಗಳು ಕುಸಿದಿವೆ. ಕೂಡಲೇ ಸರ್ಕಾರ ರೈತರ ಬೆಳೆಹಾನಿ ಮತ್ತು ಮನೆ ಹಾನಿಗೆ ಪರಿಹಾರ ಘೊಷಣೆ ಮಾಡಬೇಕು. ವಿಮಾ ಕಂಪನಿಗಳಿಂದ ಸೂಕ್ತ ಬೆಳೆ ವಿಮಾ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ ನಿರ್ಲಕ್ಷ್ಯ ಭಾವನೆ ಮುಂದುವರೆಸಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ನಂತರ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸಂಘಟನೆಯ ತಾಲೂಕಾಧ್ಯಕ್ಷ ರಾಮನಗೌಡ ಪರ್ವತಗೌಡ್ರ, ಸಿದ್ದಪ್ಪ ಕೆ., ಈಶ್ವರಪ್ಪ ಜಾಯಿನಗೌಡ್ರ, ರಾಮಪ್ಪ, ನಿಂಗಪ್ಪ ಹೂಗಾರ, ದೊಡ್ಡಪ್ಪ, ಸಿದ್ದಲಿಂಗನಗೌಡ, ಬಸವರಾಜ ರೊಳ್ಳಿ, ಅಣ್ಣಪ್ಪ ಸುಬ್ಬಣ್ಣವರ, ಶಂಕರಗೌಡ ಪಾಟೀಲ, ತಿರಕಪ್ಪ ಬೆಳೆಬಾಳ, ವೀರಣಗೌಡ ಪಾಟೀಲ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.