ಶಹಾಪುರದಲ್ಲಿ ನೀರಿಗಾಗಿ ಆಗ್ರಹಿಸಿ ಕಾವೇರಿದ ರೈತರ ಹೋರಾಟ

| Published : Dec 24 2023, 01:45 AM IST

ಶಹಾಪುರದಲ್ಲಿ ನೀರಿಗಾಗಿ ಆಗ್ರಹಿಸಿ ಕಾವೇರಿದ ರೈತರ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ, ಸಚಿವರು ಹೋರಾಟದಲ್ಲಿ ಭಾಗಿಯಾಗಿ ಎಂದು ರೈತರ ಆಕ್ರೋಶ, ಜಮೀನಿಗೆ ನೀರು ಹರಿಸುವ ಕುರಿತು ಅಧಿಕಾರಿಗಳು ಮಾತನಾಡದೆ ನಿರ್ಲಕ್ಷ್ಯ ಧೋರಣೆ

ಕನ್ನಡಪ್ರಭ ವಾರ್ತೆ ಶಹಾಪುರ

ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಳೆದ ಆರು ದಿನಗಳಿಂದ ತಾಲೂಕಿನ ಭೀಮರಾಯನ ಗುಡಿಯ ಕೆಬಿಜೆಎನ್ಎಲ್ ಆಡಳಿತ ಕಚೇರಿಗೆ ಬೀಗ ಜಡಿದು ಅಹೋರಾತ್ರಿ ಧರಣಿ ನಡೆಯುತ್ತಿದ್ದು, ಪ್ರತಿಭಟನೆ ಸೂಕ್ಷ್ಮತೆಯನ್ನು ಅರಿತು ಅಧಿಕಾರಿಗಳು, ಸಚಿವರು, ಶಾಸಕರು ಧರಣಿ ಸ್ಥಳಕ್ಕೆ ಆಗಮಿಸಿ ಮನವೊಲಿಸಿ, ರೈತರ ಜಮೀನಿಗೆ ನೀರು ಹರಿಸುವ ಬಗ್ಗೆ ಮಾತನಾಡದೆ ಇರುವುದು ರೈತರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿದೆ.

ಶನಿವಾರ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರೈತರು ಇಲ್ಲಿನ ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿಯನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಜನಪ್ರತಿನಿಧಿಗಳು ಮತ ಕೇಳಲು ಬಂದಾಗ ಜನರ ಕಾಲಿಗೆ ಬಿದ್ದು ಮತ ಕೇಳುತ್ತಾರೆ. ಈಗ ರೈತರ ಬೆಳೆ ಹಾಳಾಗುತ್ತಿದೆ. ರೈತರ ಬಗ್ಗೆ ಕಾಳಜಿ ಇದ್ದರೆ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿ, ಇಲ್ಲವೆ ಕಾಲಿಗೆ ಬಿದ್ದಾದರೂ ನೀರು ಕೊಡಿಸಿರಿ ಎಂದು ಆಗ್ರಹಿಸಿದ ರೈತರು, ಇಲ್ಲದೆ ಹೋದರೆ ಶಾಸಕ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರ ಹೋರಾಟದಲ್ಲಿ ಭಾಗಿಯಾಗಿ, ಇದು ಆಗದಿದ್ದರೆ ಸೀರೆ ಉಟ್ಟು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರ ಎದುರು ಹಾಕಿಕೊಂಡ ಸರ್ಕಾರಕ್ಕೆ ಉಳಿಗಾಲವಿಲ್ಲ: ಸಂಕಷ್ಟದಲ್ಲಿರುವ ರೈತರಿಗೆ ಫೆಬ್ರವರಿ ಅಂತ್ಯದವರಿಗೆ ನೀರು ಬಿಡುವ ಮೂಲಕ ಸಹಾಯ ಹಸ್ತ ಚಾಚುವುದನ್ನು ಬಿಟ್ಟು ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ. ರೈತನನ್ನು ಎದುರು ಹಾಕಿಕೊಂಡರೆ ಸರ್ಕಾರಕ್ಕೆ ಉಳಿಗಾಲವಿಲ್ಲ. ರೈತರ ಜಮೀನಿಗೆ ನೀರು ಹರಿಸುವ ತನಕ ನಮ್ಮ ಹೋರಾಟ ಇನ್ನು ಹೆಚ್ಚಿನ ರೀತಿಯಲ್ಲಿ ತೀವ್ರತೆ ಪಡೆದುಕೊಳ್ಳುತ್ತದೆ. ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳು ಮತ್ತು ಸರ್ಕಾರವೇ ನೇರ ಹೊಣೆ ಎಂದು ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಹೇಶ್ ಗೌಡ ಸುಬೇದಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕಳೆದ ಆರು ದಿನಗಳಿಂದ ರೈತರ ಅಹೋ ರಾತ್ರಿ ಧರಣಿ ಮಾಡಿದರೂ ಕಾಟಾಚಾರಕ್ಕೆ ಜಿಲ್ಲಾಧಿಕಾರಿಗಳು, ಸಚಿವರು, ಶಾಸಕರು ಭೇಟಿ ನೀಡಿದರೆ ವಿನಾ ರೈತರಿಗೆ ನೀರು ಹರಿಸುವ ಬಗ್ಗೆ ಮಾತನಾಡಲಿಲ್ಲ. ಶಾಸಕ, ಸಚಿವರು ನೀರು ಹರಿಸಿ ಇಲ್ಲದಿದ್ದರೆ, ರಾಜೀನಾಮೆ ನೀಡಿ ಎಂದು ಸಂಘದ ಜಿಲ್ಲಾಧ್ಯಕ್ಷ ಶರಣು ಮಂದಾರವಾಡ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಸಂಘದ ಉಪಾಧ್ಯಕ್ಷ ರಾಕೇಶ್ ಗೌಡ ಪಾಟೀಲ್, ಚಂದ್ರಕಲಾ ವಡಿಗೇರ, ಮಲ್ಲಣ್ಣ ಚಿಂತಿ, ಪ್ರಭು ಕೊಂಗಂಡಿ, ಮಲ್ಲಣ್ಣ ನೀಲಹಳ್ಳಿ, ಹಣಮಂತ ಕೊಂಗಂಡಿ, ಗುರಣ್ಣ ದೇಸಾಯಿ, ಶಂಕರ್ ನಾಯಕ್ ಜಾದವ್, ಸಿದ್ದಣ್ಣ ಎಂಕಂಚಿ, ಮುದ್ದಣ್ಣ ಅಮ್ಮಪುರ್, ಬಾಬುರಾವ್ ಹೊಸಮನಿ, ತಿಪ್ಪಣ್ಣ ಬಿರಾದಾರ್, ಭೀಮಣ್ಣ ಮಿಲ್ಟ್ರಿ, ಅನಿಲ್ ಕುಮಾರ್, ಮರೆಪ್ಪ ಲಕ್ಷ್ಮಿಪುರ, ಶ್ರೀಮಂತಗೌಡ, ಬನಶಂಕರ ಗೌಡ, ಸಿದ್ದಣ್ಣ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.

ಪಕ್ಷಕ್ಕಿಂತ ರೈತರ ಹಿತ ಮುಖ್ಯ: ಅಮೀನ್ ರೆಡ್ಡಿ

ಸರ್ಕಾರ ಯಾವುದೇ ಇರಲಿ, ಪಕ್ಷ ಯಾವುದೇ ಇರಲಿ ಕಷ್ಟದಲ್ಲಿರುವ ರೈತರ ಬೇಡಿಕೆ ಈಡೇರಿಸಬೇಕಾಗಿದ್ದು ಆದ್ಯ ಕರ್ತವ್ಯ. ಕುಡಿಯುವ ನೀರಿನ ನೆಪ ಹೇಳಿ ಲಕ್ಷಾಂತರ ರೈತರನ್ನು ಸರ್ಕಾರ ಸಾಯಿಸಲು ಹೊರಟಿದೆ. ಈ ಹೋರಾಟಕ್ಕೆ ನಾನು ಸದಾ ಬೆಂಬಲ ನೀಡಿ ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದು ಬಿಜೆಪಿ ಮುಖಂಡ ಅಮೀನರೆಡ್ಡಿ ಯಾಳಗಿ ಹೇಳಿದರು.ನಾಳೆ ಶಹಾಪುರ ಬಂದ್‌ಗೆ ಕರೆ: ಡಿ.25 ರಂದು ಶಹಾಪುರ ಬಂದ್‌ಗೆ ಕರೆ ನೀಡಿದ್ದು, ಜಿಲ್ಲೆಯ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ರೈತರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ತಿಳಿಸಿದ್ದಾರೆ.