ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ರಸ್ತೆತಡೆ

| Published : Oct 17 2023, 12:45 AM IST

ಸಾರಾಂಶ

ಜಮಖಂಡಿ ತಾಲೂಕಿನ ಸಿದ್ದಾಪೂರ ಗ್ರಾಮದಲ್ಲಿ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ತಡೆದು ರೈತರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ ಹೊಲ-ಗದ್ದೆಗಳಲ್ಲಿರುವ ರೈತರ ಪಂಪಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ 5 ಗಂಟೆ ತ್ರಿಫೇಸ್ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ಸಿದ್ದಾಪೂರ ಗ್ರಾಮದ ರೈತರು ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರಾತ್ರಿ ಹೊತ್ತು 5 ಗಂಟೆ ತ್ರಿಫೇಸ್ ನೀಡುವದಾಗಿ ಹೇಳಿದ್ದು ಸರಿಯಲ್ಲ. ಇದರಿಂದ ರೈತರಿಗೆ ಬೆಳೆಗಳಿಗೆ ನೀರುಣಿಸಲು ಬಹಳಷ್ಟು ತೊಂದರೆ ಉಂಟಾಗುತ್ತದೆ, ಹಗಲು ಹೊತ್ತಿನಲ್ಲೇ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಈ ಸಂದರ್ಭದಲ್ಲಿ ರೈತರು ಆಗ್ರಹಿಸಿದರು. ರೈತರು ರಾತ್ರಿ ಹೊತ್ತು ಹುಳ-ಹುಪ್ಪಡಿಗಳಿಂದ ಕಚ್ಚಿಸಿಕೊಂಡು ಸಾಯಬೇಕಾ. ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡಿದರೆ ಸರ್ಕಾರಕ್ಕೆ ಅದು ಹೇಗೆ ಹೊರೆಯಾಗುತ್ತದೆ. ನಮ್ಮ ಬೇಡಿಕೆ ಈಡೇರಿಸುವರೆಗೂ ನಾವು ಹೆದ್ದಾರಿ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಪಾಟೀಲ, ರಾತ್ರಿ 2 ಗಂಟೆ ಹಾಗೂ ಹಗಲು 3 ಗಂಟೆ ತ್ರಿಫೇಸ್, ಸಂಜೆ 6 ರಿಂದ 10ರವರೆಗೆ ವಿದ್ಯಾರ್ಥಿಗಳಿಗೆ ಓದಿಕೊಳ್ಳಲು ಅನಕೂಲವಾಗುವ ನಿಟ್ಟಿನಲ್ಲಿ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುವುದು. ಇದಕ್ಕೆ ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿ ರೈತರ ಮನವೊಲಿಸಿದರು. ಗ್ರಾಮೀಣ ಪೊಲೀಸ್ ಠಾಣೆ ಠಾಣಾಧಿಕಾರಿ ಮಹೇಶ ಸಂಖ ನೇತೃತ್ವದ ಸಿಬ್ಬಂದಿ ಪ್ರತಿಭಟನೆಗೆ ಸೂಕ್ತ ಬಂದೊಬಸ್ತ್ ಒದಗಿಸಿದ್ದರು. ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ನಾಲ್ಕು ತಾಸು ಕಾಲ ರಾಜ್ಯ ಹೆದ್ದಾರಿ ತಡೆ ನಡೆಸಿದ್ದರಿಂದ ಪ್ರಯಾಣಿಕರು, ವಾಹನ ಸವಾರರು ಪರದಾಡುವಂತಾಯಿತು. ಪ್ರತಿಭಟನೆಯಲ್ಲಿ ದುಂಡಪ್ಪ ಜಿರಗಾಳ, ಬಾಬು ಹಸರಡ್ಡಿ, ಶ್ರೀಶೈಲ ಭುಮಾರ, ಕರೆಪ್ಪ ಜಿರಗಾಳ, ಶೇಖರ ಬೂದಿ, ಶಂಕರ ಜಿರಗಾಳ, ಯಂಕಪ್ಪ ಬೂದಿ, ಸೋಮಲಿಂಗಪ್ಪ ತೆಗ್ಗಿ, ಸಂಗಪ್ಪ ಅಚನೂರ, ಪ್ರಕಾಶ ಅಳ್ಳಿಮಟ್ಟಿ, ಭೀಮಪ್ಪ ಅಳ್ಳಿಮಟ್ಟಿ, ಗುರುಲಿಂಗ ಕಡಪಟ್ಟಿ, ರಾಜು ಕಲಕಂಬ ಹಾಗೂ ಇತರ ರೈತರು ಪಾಲ್ಗೊಂಡಿದ್ದರು.