ಲಕ್ಷ್ಮೇಶ್ವರದಲ್ಲಿ ಯೂರಿಯಾ ಗೊಬ್ಬರಕ್ಕೆ ರೈತರ ಪರದಾಟ

| Published : Jul 25 2025, 12:33 AM IST

ಸಾರಾಂಶ

ಲಕ್ಷ್ಮೇಶ್ವರ ತಾಲೂಕಿನಲ್ಲಿ ಗೋವಿನಜೋಳ ಬೆಳೆಗಾರರಿಂದ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಪೂರೈಕೆ ಕಡಿಮೆ ಇದೆ. ಹೀಗಾಗಿ ಗೊಬ್ಬರ ಅಂಗಡಿಗಳ ಮುಂದೆ ಸರತಿಯಲ್ಲಿ ನಿಂತಿದ್ದರು.

ಲಕ್ಷ್ಮೇಶ್ವರ: ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಯೂರಿಯಾ ಗೊಬ್ಬರಕ್ಕಾಗಿ ಜಡಿ ಮಳೆಯನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯ ಗುರುವಾರ ಕಂಡು ಬಂದಿತು.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 12 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆ ಮಾಡಿದ್ದಾರೆ. ಈಗ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿರುವುದರಿಂದ ರೈತರು ಯೂರಿಯಾ ಗೊಬ್ಬರಕ್ಕೆ ಮುಗಿಬಿದ್ದಿದ್ದಾರೆ. ಗೋವಿನ ಜೋಳದ ಬೆಳೆಗೆ ಯೂರಿಯಾ ಬಳಸುವುದರಿಂದ ಬೆಳೆ ಹೆಚ್ಚು ಎತ್ತರಕ್ಕೆ ಬೆಳೆಯುತ್ತದೆ ಹಾಗೂ ಅತಿಯಾದ ತೇವಾಂಶದಿಂದ ಬೆಳೆಯನ್ನು ರಕ್ಷಣೆ ಮಾಡಲು ಸಾಧ್ಯ ಎನ್ನುವ ವಿಶ್ವಾಸ ರೈತರಲ್ಲಿದ್ದುದರಿಂದ ಯೂರಿಯಾ ಗೊಬ್ಬರಕ್ಕೆ ಎಲ್ಲಿಲ್ಲದ ಬೇಡಿಕೆ ಕಂಡು ಬರುತ್ತಿದೆ.

ಲಕ್ಷ್ಮೇಶ್ವರ ಪಟ್ಟಣದ 2 ಗೊಬ್ಬರ ಮಾರಾಟದ ಅಂಗಡಿಗಳಿಗೆ ಯೂರಿಯಾ ಬಂದಿದೆ ಎನ್ನುವ ಮಾಹಿತಿ ಸಿಕ್ಕ ರೈತರು ಬೆಳಗ್ಗೆಯೇ ಜಿಟಿ ಜಿಟಿ ಮಳೆ ಲೆಕ್ಕಿಸದೆ ಸರತಿ ಸಾಲಿನಲ್ಲಿ ಆಧಾರ್‌ ಕಾರ್ಡ್‌ ಹಿಡಿದು ಕಾಯುತ್ತಿದ್ದರು. ಯೂರಿಯಾ ಗೊಬ್ಬರ ಕಡಿಮೆ ಬಂದಿರುವುದರಿಂದ ಆತಂಕಗೊಂಡರು. ಒಬ್ಬರಿಗೆ 2 ಚೀಲಗಳಂತೆ ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿರುವುದು ಹಲವು ರೈತರನ್ನು ಕೆರಳಿಸಿತು. ರೊಕ್ಕ ಕೊಟ್ಟರೂ ಗೊಬ್ಬರ ಸಿಗದಂತೆ ಮಾಡಿದ್ದಾರೆ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಹೊಂದಾಣಿಕೆ ಮಾಡಿಕೊಂಡು ರೈತರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಗೊಬ್ಬರ ಕಂಪನಿಗಳ ಜತೆ ಮಾತನಾಡಿ, ಹೆಚ್ಚಿನ ಗೊಬ್ಬರ ತರಿಸುವ ಕಾರ್ಯ ಮಾಡಿದಲ್ಲಿ ರೈತರಿಗೆ ನೆರವಾದಂತೆ ಆಗುತ್ತದೆ ಎಂದು ಹಲವು ರೈತರು ಹೇಳಿದರು.ಲಕ್ಷ್ಮೇಶ್ವರ ತಾಲೂಕಿನ ರೈತರಿಗೆ ಮೊದಲು ಗೊಬ್ಬರ ವಿತರಣೆ ಮಾಡಬೇಕು. ಆದರೆ ಅಂಗಡಿಗಳ ಮಾಲೀಕರು ತಮಗೆ ಬೇಕಾದವರಿಗೆ ಹಾಗೂ ಪಕ್ಕದ ತಾಲೂಕಿನ ರೈತರಿಗೆ ಬೇಕಾದಷ್ಟು ಗೊಬ್ಬರ ನೀಡುತ್ತಿದ್ದಾರೆ. ಇದರಿಂದ ನಮ್ಮ ತಾಲೂಕಿನ ರೈತರು ಗೊಬ್ಬರಕ್ಕಾಗಿ ಪರದಾಡುವಂತಾಗಿದೆ. ಅಧಿಕಾರಿಗಳು ವ್ಯವಸ್ಥೆ ಸರಿಪಡಿಸದಿದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತರಾದ ರಾಮಣ್ಣ ಗೌರಿ, ಮುತ್ತಣ್ಣ ಮರೂಡಿ ಹೇಳಿದರು.