ಬೆಳೆ ರಕ್ಷಣೆಗಾಗಿ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಇಂದಿನಿಂದ ರೈತರ ಪ್ರತಿಭಟನೆ: ಪುಟ್ಟೇಗೌಡ

| Published : Feb 28 2025, 12:49 AM IST

ಬೆಳೆ ರಕ್ಷಣೆಗಾಗಿ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಇಂದಿನಿಂದ ರೈತರ ಪ್ರತಿಭಟನೆ: ಪುಟ್ಟೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನೀರು ಹರಿಸಲು ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಹೇಮಾವತಿ ಪ್ರದೇಶದ ಯಾವುದೇ ಜನಪ್ರತಿನಿಧಿಗಳು ರೈತರ ಪರ ಧ್ವನಿ ಎತ್ತಿಲ್ಲ. ಹೇಮಾವತಿ ಜಲಾಶಯದಿಂದ ಮೇ-ಜೂನ್ ತಿಂಗಳಲ್ಲಿ ತಮಿಳುನಾಡಿಗೆ ನೀರು ಹರಿಸುವ ಬದಲು ರಾಜ್ಯದ ರೈತರಿಗೆ ನೀರು ಹರಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬೆಳೆದು ನಿಂತಿರುವ ತಾಲೂಕು ವ್ಯಾಪ್ತಿಯ ಬೆಳೆಗಳ ಸಂರಕ್ಷಣೆಗಾಗಿ ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ಅಗತ್ಯ ನೀರು ಹರಿಸುವಂತೆ ಒತ್ತಾಯಿಸಿ ಇಂದು ಪಟ್ಟಣದಲ್ಲಿ ಬೃಹತ್ ರೈತ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನೀರಾವರಿ ಸಲಹಾ ಸಮಿತಿ ಸಭೆ ಕರೆದು ಕೆಆರ್ ಎಸ್ ಜಲಾಶಯದಿಂದ ನೀರು ಹರಿಸಿದ ಸರ್ಕಾರ ಇದುವೆರಗೂ ಹೇಮಾವತಿ ಜಲಾನಯನ ಪ್ರದೇಶದ ಬೆಳೆಗಳ ಸಂರಕ್ಷಣೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆ ಕರೆದಿಲ್ಲ ಎಂದು ದೂರಿದ್ದಾರೆ.

ಹೇಮಾವತಿ ಜಲಾಶಯ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಸೇರಿದ್ದರೂ ಸರ್ಕಾರ ನೀರು ಹರಿಸುವಲ್ಲಿ ಕೆ.ಆರ್.ಎಸ್ ಜಲಾಶಯದ ರೈತರಿಗೊಂದು, ಹೇಮಾವತಿ ಜಲಾನಯನ ಪ್ರದೇಶದ ರೈತರಿಗೊಂದು ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರು ಹರಿಸಲು ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಹೇಮಾವತಿ ಪ್ರದೇಶದ ಯಾವುದೇ ಜನಪ್ರತಿನಿಧಿಗಳು ರೈತರ ಪರ ಧ್ವನಿ ಎತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಹೇಮಾವತಿ ಜಲಾಶಯದಿಂದ ಮೇ-ಜೂನ್ ತಿಂಗಳಲ್ಲಿ ತಮಿಳುನಾಡಿಗೆ ನೀರು ಹರಿಸುವ ಬದಲು ರಾಜ್ಯದ ರೈತರಿಗೆ ನೀರು ಹರಿಸಬೇಕು. ಕಾಲುವೆಗಳಿಗೆ ನೀರು ಹರಿಸಿ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸುವಂತೆ ಅಗತ್ಯ ಸಭೆ ನಡೆಸುವಂತೆ ತಾಲೂಕು ಆಡಳಿತ ಸೌಧದ ಎದುರು ರೈತಸಂಘ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಮಾ.೩ರಿಂದ ೭ರವರೆಗೆ ಅಹೋರಾತ್ರಿ ಧರಣಿ

ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಸರ್ಕಾರದ ಬಜೆಟ್ ಬಂಡವಾಳ ಶಾಹಿಗಳ ಪರವಾಗಿದ್ದು, ರಾಜ್ಯ ಸರ್ಕಾರವು ಜನಪರ ಆರ್ಥಿಕ ನೀತಿ ಜಾರಿಗೊಳಿಸಿ, ಕಾರ್ಮಿಕ ವರ್ಗದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ವತಿಯಿಂದ ಮಾ.೩ರಿಂದ ೭ರವರೆಗೆ ಅಹೋರಾತ್ರಿ ಧರಣಿಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ತಿಳಿಸಿದರು.

ಮಾರ್ಚ್ ೩ರಿಂದ ಹಂತ ಹಂತವಾಗಿ ನಡೆಸಲಿದ್ದು, ಮೊದಲ ದಿನ ಗ್ರಾಪಂ ಕಾರ್ಮಿಕರು, ಮಾ.೪ರಂದು ಅಕ್ಷರ ದಾಸೋಹ ಕಾರ್ಮಿಕರು, ಮಾ.೫ ರಂದು ಕಟ್ಟಡ ನಿರ್ಮಾಣ ಕಾರ್ಮಿಕರು, ಮಾ.೬ ರಂದು ಅಸಂಘಟಿತ ಕಾರ್ಮಿಕರು, ಮಾ.೭ರಂದು ಅಂಗನವಾಡಿ ಕಾರ್ಮಿಕರು ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಂಡ್ಯ ಜಿಲ್ಲೆಯಿಂದ ಸುಮಾರು ೬೦೦೦ ಮಂದಿಗೂ ಹೆಚ್ಚಿನ ಕಾರ್ಮಿಕರು ಭಾಗವಹಿಸಲಿದ್ದು, ಒಟ್ಟಾರೆಯಾಗಿ ೫೦ ಸಾವಿರ ಕಾರ್ಮಿಕರು ಧರಣಿಯಲ್ಲಿ ತಮ್ಮ ಹಕ್ಕೊತ್ತಾಯ ಮಂಡಿಸುವರು ಎಂದು ಹೇಳಿದರು.

ಗೋಷ್ಠಿಯಲ್ಲಿ ಅಧ್ಯಕ್ಷ ಎಂ.ಎಂ.ಶಿವಕುಮಾರ್, ಉಪಾಧ್ಯಕ್ಷೆ ಪ್ರಮೀಳಾಕುಮಾರಿ, ಕಾರ್ಯದರ್ಶಿಗಳಾದ ಎ.ಬಿ.ಶಶಿಕಲಾ, ಚಂದ್ರಶೇಖರ್ ಇದ್ದರು.