ಬ್ಯಾಂಕ್ ಖಾಖೆ ಎದುರು ರೈತರ ಪ್ರತಿಭಟನೆ

| Published : Jul 25 2025, 12:30 AM IST

ಬ್ಯಾಂಕ್ ಖಾಖೆ ಎದುರು ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲದ ಸೆಟ್ಲ್‌ಮೆಂಟ್‌ಗೆ ಕರೆಸಿಕೊಂಡು ರೈತರಿಗೆ ಶೋಷಣೆಗೀಡು ಮಾಡಲಾಗುತ್ತಿದೆಯೆಂದು ಆರೋಪಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದ ಹರಪನಹಳ್ಳಿ ತಾಲೂಕು ಅಧ್ಯಕ್ಷ ವಿಶ್ವನಾಥ ಭದ್ರಪ್ಪನವರ, ರೈತ ಸಂಘದ ಹಿರಿಯ ಮುಖಂಡ ನಿಟುವಳ್ಳಿ ಪೂಜಾರ ಅಂಜಿನಪ್ಪ ಇತರರ ನೇತೃತ್ವದಲ್ಲಿ ರೈತರು ಪ್ರತಿಭಟಿಸಿದ ಘಟನೆ ನಗರದಲ್ಲಿ ಗುರುವಾರ ನಡೆಯಿತು.

ದಾವಣಗೆರೆ: ಸಾಲದ ಸೆಟ್ಲ್‌ಮೆಂಟ್‌ಗೆ ಕರೆಸಿಕೊಂಡು ರೈತರಿಗೆ ಶೋಷಣೆಗೀಡು ಮಾಡಲಾಗುತ್ತಿದೆಯೆಂದು ಆರೋಪಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದ ಹರಪನಹಳ್ಳಿ ತಾಲೂಕು ಅಧ್ಯಕ್ಷ ವಿಶ್ವನಾಥ ಭದ್ರಪ್ಪನವರ, ರೈತ ಸಂಘದ ಹಿರಿಯ ಮುಖಂಡ ನಿಟುವಳ್ಳಿ ಪೂಜಾರ ಅಂಜಿನಪ್ಪ ಇತರರ ನೇತೃತ್ವದಲ್ಲಿ ರೈತರು ಪ್ರತಿಭಟಿಸಿದ ಘಟನೆ ನಗರದಲ್ಲಿ ಗುರುವಾರ ನಡೆಯಿತು.

ನಗರದ ಕೆಬಿ ಬಡಾವಣೆಯ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಬೆಳಿಗ್ಗೆಯೇ ಹಳ್ಳಿಯಿಂದ ಬಂದಿದ್ದ ರೈತರನ್ನು ಸೆಟ್ಲ್‌ಮೆಂಟ್‌ಗೆಂದು ಮಾತುಕತೆಗೆ ಕರೆದು, ಹೆಚ್ಚುವರಿ ಹಣ, ಬಡ್ಡಿ ಸಮೇತ ಕಟ್ಟುವಂತೆ ಏಕವಚನದಲ್ಲಿ ಬ್ಯಾಂಕ್‌ನ ವಿಭಾಗೀಯ ಆರ್‌ಓ ಹಾಗೂ ವ್ಯವಸ್ಥಾಪಕ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ವಿಶ್ವನಾಥ ಭದ್ರಪ್ಪನವರ ನೇತೃತ್ವದಲ್ಲಿ ಬ್ಯಾಂಕ್ ಎದುರು ರೈತರು ದಿಢೀರ್ ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ವಿಶ್ವನಾಥ, ಕೊರೋನಾ, ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಷ್ಟೇ ಒಂದಿಷ್ಟು ಮಳೆಯಾಗಿದ್ದರಿಂದ ರೈತರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಬಿತ್ತನೆಗೆ ಬೀಜ, ಗೊಬ್ಬರ ಖರೀದಿಯಲ್ಲಿ ಸಾಲುಗಟ್ಟಿ ನಿಲ್ಲಬೇಕಿದ್ದ ರೈತರನ್ನು ಬ್ಯಾಂಕ್ ವ್ಯವಸ್ಥಾಪಕ, ಆರ್‌ಓ ಕಳ್ಳಮಾರ್ಗದಲ್ಲಿ ಫೋನ್‌ ಕರೆ ಮಾಡಿ, ಕರೆಸಿಕೊಂಡಿದ್ದಾರೆ. ನೋಟಿಸ್ ಕೊಟ್ಟರೆ ಸಿಕ್ಕಿ ಬೀಳುತ್ತೇವೆಂದು ಫೋನ್ ಮಾಡಿ, ಕರೆಸಿಕೊಂಡು ಬಲವಂತದ ಸಾಲ ವಸೂಲಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ರೈತರು ಸ್ವಾಭಿಮಾನಿಗಳು, ಯಾರಿಗೂ ಅನ್ಯಾಯ ಮಾಡುವವರಲ್ಲ. ಯೂನಿಯನ್ ಬ್ಯಾಂಕ್‌ಗೆ ಕರೆಸಿಕೊಂಡ ಬ್ಯಾಂಕ್ ಬಳ್ಳಾರಿ ವಿಭಾಗದ ಆರ್‌ಓ ಹಾಗೂ ವ್ಯವಸ್ಥಾಪಕ ಇಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಕುಳಿತಿದ್ದ ರೈತರಿಗೆ ಕೂಪನ್ ಕೊಟ್ಟು, ಕಾಯುವಂತೆ ಕೂಡಿಸಿದ್ದಾರೆ. ಆದರೆ, ರೈತರು ಹೊಲದಲ್ಲಿ ಕೆಲಸ ಮಾಡುವುದನ್ನು ಬಿಟ್ಟು, ಬೀಜ, ಗೊಬ್ಬರ ಖರೀದಿಸಲಾಗದೇ ಬ್ಯಾಂಕ್ ಬಳಿ ಬಂದರೆ, ಏಕವಚನದಲ್ಲೇ ಆರ್‌ಓ, ವ್ಯವಸ್ಥಾಪಕ ರೈತರೊಂದಿಗೆ ಅಸಡ್ಡೆಯಿಂದ ವರ್ತಿಸುತ್ತಿದ್ದಾರೆ. ಈ ಇಬ್ಬರ ವಿರುದ್ಧವೂ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಬೆಳೆ ವಿಮೆ ಪರಿಹಾರ, ಪಿಎಂ ಕಿಸಾನ್ ಬಿಮಾ, ಗೃಹಲಕ್ಷ್ಮಿ, ವೃದ್ಧಾಪ್ಯ ವೇತನ, ವಿಧವಾ ವೇತನವನ್ನು ರೈತನ ಕುಟುಂಬಕ್ಕೆ ಬರಬೇಕಾದ ಹಣವನ್ನು ಲಾಕ್ ಮಾಡಿ, ಸಾಲ, ಬಡ್ಡಿ ಕಟ್ಟುವಂತೆ ಪೀಡಿಸುವ ಕೆಲಸ ಮಾಡಲಾಗುತ್ತಿದೆ. ರೈತರ ಕುಟುಂಬದ ಹ‍ಣ ತಡೆ ಹಿಡಿದು, ಸಾಲ, ಬಡ್ಡಿ ಕಟ್ಟುವಂತೆ ಪೀಡಿಸುವುದು ಯಾವ ನ್ಯಾಯ? 2-3 ಕಂತುಗಳನ್ನ ರೈತರು ಕಟ್ಟಿದ್ದರೂ ಮತ್ತೆ 5 ಲಕ್ಷ ರು. ಮೂಲ ಅಸಲಿಗೆ ಬಡ್ಡಿ ಹಾಕುತ್ತಿದ್ದು, ರೈತರನ್ನು ಬ್ಯಾಂಕ್‌ನಲ್ಲಿ ಹಗಲು ದರೋಡ ಮಾಡಲಾಗುತ್ತಿದೆ. ಆರ್‌ಓ, ವ್ಯವಸ್ಥಾಪಕ ರೈತರನ್ನು ಏಕವಚನದಲ್ಲಿ ಮಾತನಾಡಿಸಿ, ಕೇವಲವಾಗಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಪಹಣಿ ಮೇಲೆ, ಮನೆ ಮೇಲೆ, ಮಾಡ್ಗೇಜ್‌ ಮಾಡಿ, ರೈತರು ಸಾಲ ಪಡೆದಿದ್ದಾರೆ. ಸ್ವಾಭಿಮಾನಿ ರೈತರು ಸಾಲ ಕಟ್ಟುವುದಿಲ್ಲ ಎಂದು ಹೇಳುತ್ತಿಲ್ಲ. ಬೆಳೆ ಬೆಳೆಯುವ ಕಾಲದಲ್ಲಿ. ಸಾಲ ಕಟ್ಟುವಂತೆ ಹೇಳುವುದು ಯಾರ ನ್ಯಾಯ? ಇದನ್ನು ಪ್ರಶ್ನಿಸಿದ ರೈತರ ಮೇಲೆ ದೌರ್ಜನ್ಯ ಮಾಡುವುದು ಯಾವ ಪುರುಷಾರ್ಥಕ್ಕೆ? ತಕ್ಷಣವೇ ಜಿಲ್ಲಾಡಳಿತ, ಲೀಡ್ ಬ್ಯಾಂಕ್, ರಾಜ್ಯ, ಕೇಂದ್ರ ಸರ್ಕಾರಗಳು ಸೂಕ್ತ ನಿರ್ದೇಶನ ನೀಡಿ, ರೈತರಿಗೆ ಶೋಷಣೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಕೂಡಲೇ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿ, ನೋಟಿಸ್ ಜಾರಿ ಮಾಡಬೇಕು. ಬ್ಯಾಂಕ್‌ಗಳಿಗೆ ರೈತರನ್ನು ಅಲೆದಾಡಿಸುವುದು ನಿಲ್ಲಿಸಬೇಕು. ಸೆಟ್ಲ್‌ಮೆಂಟ್‌ಗೆ ಅಂತಾ ದೂರವಾಣಿ, ಮೊಬೈಲ್ ಕರೆ ಮಾಡಿ, ಬ್ಯಾಂಕ್‌ಗೆ ಕರೆಸಿಕೊಂಡು, ಟೋಕನ್ ಕೊಟ್ಟು, ಸೆಟ್ಲ್‌ಮೆಂಟ್‌ಗೆ ಕರೆಯುತ್ತೇವೆಂಬ ಉಡಾಫೆ ವರ್ತನೆಗೆ ಕಡಿವಾಣ ಹಾಕಬೇಕು. ರೈತರ ಬಗ್ಗೆ ಸರ್ಕಾರಕ್ಕೆ ನಿಜವಾದ ಕಳಕಳಿ ಇದ್ದರೆ ಇಂತಹ ಆರ್‌ಓ, ವ್ಯವಸ್ಥಾಪಕನ ವಿರುದ್ಧ ಕ್ರಮ ಕೈಗೊಂಡು, ರೈತರಿಗೆ ಆಗುವ ಅವಮಾನ, ತೊಂದರೆ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಯೂರಿಯಾ ಗೊಬ್ಬರ ಇಲ್ಲವೆಂದು, ನೀರಿಲ್ಲವೆಂದು ರೈತರು ಪರದಾಡುತ್ತಿದ್ದಾರೆ. ಬಿತ್ತನೆ ಬೀಜಕ್ಕೆ, ಗೊಬ್ಬರಕ್ಕೆ ಹಣ ಹೊಂದಿಸಲಾಗದೇ ರೈತರು ಸಂಕಷ್ಟದಲ್ಲಿದ್ದಾರೆ. ವಾಸ್ತವ ಹೀಗಿರುವಾಗ ಬೆಳಿಗ್ಗೆನೇ ಹಳ್ಳಿಯಿಂದ ರೈತರನ್ನು ಇಲ್ಲಿಗೆ ಕರೆಸಿಕೊಂಡು, ಇಲ್ಲಿಗೆ ಬಂದ ರೈತರಿಗೆ ಸಂಜೆಯಾದರೂ ಸ್ಪಂದಿಸದೇ, ಬೇಜವಾಬ್ದಾರಿಯಿಂದ ವರ್ತಿಸಲಾಗುತ್ತಿದೆ . ಕಳ್ಳ ಮಾರ್ಗದಲ್ಲಿ ಯೂನಿಯನ್ ಬ್ಯಾಂಕ್‌ನ ಬಳ್ಳಾರಿ ವಿಭಾಗದ ಆರ್‌ಓ, ವ್ಯವಸ್ಥಾಪಕರು ವಸೂಲಿಗೆ ಇಳಿದಿದ್ದಾರೆ. ಇಂತಹವರ ವಿರುದ್ಧ ಮೊದಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.