ಬೆಸ್ಕಾಂ ಮುಂದೆ ರೈತರ ಪ್ರತಿಭಟನೆ

| Published : Jan 07 2025, 12:33 AM IST

ಸಾರಾಂಶ

ಯಾವುದೇ ಮುನ್ಸೂಚನೆಯಿಲ್ಲದೇ ವಿದ್ಯುತ್ ಕಡಿತಗೊಳಿಸುತ್ತಿದ್ದಾರೆ. ಇದರಿಂದ ರೈತರು ಸಾಲ ಮಾಡಿ ಇಟ್ಟಂತಹ ಬೆಳೆ ಕೈ ತಪ್ಪುವ ಸಾಧ್ಯತೆ ಇದೆ. ಆದ್ದರಿಂದ ಬೆಸ್ಕಾಂ ಇಲಾಖೆಯವರು ಕೂಡಲೇ ರೈತರ ಪಂಪ್ ಸೆಟ್ ಗಳಿಗೆ 7 ಗಂಟೆಗಳ ವಿದ್ಯುತ್ ಪೂರೈಕೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ಬೆಸ್ಕಾಂ ಕಚೇರಿಯ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಬೆಸ್ಕಾ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಕೆ.ಎನ್.ಸೋಮಶೇಖರ್, ತಾಲೂಕಿನಾದ್ಯಂತ ರೈತರು ಸುಮಾರು 500 ಎಕರೆಗೂ ಹೆಚ್ಚು ಹೂ, ಆಲೂಗಡ್ಡೆ ಸೇರಿದಂತೆ ವಿವಿಧ ಬೆಳೆದಿದ್ದಾರೆ. ಆದರೆ ರೈತರು ತಮ್ಮ ಬೆಳೆಗಳಿಗೆ ಸರಿಯಾಗಿ ನೀರು ಪೂರೈಕೆ ಮಾಡಲು ಆಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬೆಸ್ಕಾಂ ಇಲಾಖೆ ಎಂದು ಆರೋಪಿಸಿದರು.

ಯಾವುದೇ ಮುನ್ಸೂಚನೆಯಿಲ್ಲದೇ ವಿದ್ಯುತ್ ಕಡಿತಗೊಳಿಸುತ್ತಿದ್ದಾರೆ. ಇದರಿಂದ ರೈತರು ಸಾಲ ಮಾಡಿ ಇಟ್ಟಂತಹ ಬೆಳೆ ಕೈಗೆ ಸಿಗುವುದಿಲ್ಲವೇನೋ ಎಂಬ ಆತಂಕದಲ್ಲಿದ್ದಾನೆ. ಆದ್ದರಿಂದ ಬೆಸ್ಕಾಂ ಇಲಾಖೆಯವರು ಕೂಡಲೇ ರೈತರ ಪಂಪ್ ಸೆಟ್ ಗಳಿಗೆ 7 ಗಂಟೆಗಳ ವಿದ್ಯುತ್ ಪೂರೈಕೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ನಂತರ ರೈತ ಮುಖಂಡ ರಾಮರೆಡ್ಡಿ ಮಾತನಾಡಿ, ಬೆಸ್ಕಾಂ ನವರು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದ ಕಾರಣ ಕೃಷಿಗೆ ತೊಂದರೆ ಆಗುತ್ತಿದೆ. ಸೋಲಾರ್ ಪ್ಲಾಂಟ್ ಗಳನ್ನಾದರೂ ಆರಂಭಿಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಬೆಸ್ಕಾ ಇಲಾಖೆಯವರು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಸ್ಕಾ ಇಲಾಖೆಯ ಎಇಇ ವಿಶ್ವಾಸ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಮಯದಲ್ಲಿ ರೈತ ಸಂಘದ ಕಾರ್ಯದರ್ಶಿ ಭೂಪಾಲ್ರೆಡ್ಡಿ, ಜಿಲ್ಲಾ ಘಟಕ ಸದಸ್ಯಬಲ ರಾಮಪ್ಪ. ಗೌರವಾಧ್ಯಕ್ಷ ವೆಂಕಟರೋಣಪ್ಪ, ಮುಖಂಡರಾದ ಚೌಡರೆಡ್ಡಿ, ಬಿ.ಶ್ರೀನಿವಾಸ, ಲಕ್ಷ್ಮೀನಾರಾಯಣಪ್ಪ, ಗಂಗಿರೆಡ್ಡಿ, ರಾಮಾಂಜಿನಪ್ಪ, ಗಂಗಾಧರಪ್ಪ ಸೇರಿದಂತೆ ಹಲವರಿದ್ದರು.