ಸಾರಾಂಶ
ಎನ್‌ಎಸ್ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದ ರೈತರು ಕಬ್ಬಿನ ಕಟಾವು ದರ ಹೆಚ್ಚಳ ಮಾಡಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು. ಆಡಳಿತ ಮಂಡಳಿ ಈ ಹಿಂದೆ ಪ್ರತಿ ಟೆನ್ ಕಬ್ಬಿಗೆ 650 ರು. ಕಟಾವು ದರ ನಿಗದಿ ಮಾಡಿತ್ತು. ಈಗ ಏಕಾಏಕಿ 500 ರು. ಹೆಚ್ಚಳ ಮಾಡಿ 1,150 ರು ನಿಗದಿ ಮಾಡಿದೆ. ಇದರಿಂದ ರೈತರಿಗೆ ಆರ್ಥಿಕವಾಗಿ ಹೊರೆಯಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಕಬ್ಬು ಕಟಾವು ದರ ಹೆಚ್ಚಳ ಹಾಗೂ ಸ್ಥಳೀಯ ಕಬ್ಬಿನ ಸರಬರಾಜಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಒತ್ತಾಯಿಸಿ ಆಬಲವಾಡಿ ಗ್ರಾಮದ ರೈತರು ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.ಗ್ರಾಮದಿಂದ ಆಗಮಿಸಿದ್ದ ರೈತರು ಕಾರ್ಖಾನೆ ಕಬ್ಬು ಅರೆಯವ ವಿಭಾಗದ ಪ್ರವೇಶ ದ್ವಾರಕ್ಕೆ ಬೀಗ ಹಾಕಿ ಧರಣಿ ಆರಂಭಿಸಿದರು. ರೈತರ ದಿಢೀರ್ ಪ್ರತಿಭಟನೆಯಿಂದಾಗಿ ಸಕ್ಕರೆ ಸಾಗಾಣಿಕೆ ಲಾರಿಗಳ ಸಂಚಾರಕ್ಕೆ ಕೆಲಕಾಲ ಅಡ್ಡಿ ಉಂಟಾಗಿತ್ತು.
ಎನ್‌ಎಸ್ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದ ರೈತರು ಕಬ್ಬಿನ ಕಟಾವು ದರ ಹೆಚ್ಚಳ ಮಾಡಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು. ಆಡಳಿತ ಮಂಡಳಿ ಈ ಹಿಂದೆ ಪ್ರತಿ ಟೆನ್ ಕಬ್ಬಿಗೆ 650 ರು. ಕಟಾವು ದರ ನಿಗದಿ ಮಾಡಿತ್ತು. ಈಗ ಏಕಾಏಕಿ 500 ರು. ಹೆಚ್ಚಳ ಮಾಡಿ 1,150 ರು ನಿಗದಿ ಮಾಡಿದೆ. ಇದರಿಂದ ರೈತರಿಗೆ ಆರ್ಥಿಕವಾಗಿ ಹೊರೆಯಾಗಿದೆ ಎಂದು ರೈತರು ಆರೋಪಿಸಿದರು.ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಪ್ರಸ್ತುತ ಸ್ಥಳೀಯ ಕಬ್ಬು ಸರಬರಾಜಿಗೆ ಆದ್ಯತೆ ನೀಡದೆ ಕಾರ್ಖಾನೆ ವ್ಯಾಪ್ತಿಯಿಂದ ಹೊರಗಿನ ಕಬ್ಬನ್ನು ಸರಬರಾಜು ಮಾಡಿಕೊಳ್ಳುತ್ತಿರುವ ಕಾರಣ ಕಬ್ಬಿನ ಇಳುವರಿ ದಿನದಿಂದ ದಿನಕ್ಕೆ ಕಡಿಮೆಯಾಗಿ ರೈತರಿಗೆ ಆರ್ಥಿಕವಾಗಿ ನಷ್ಟ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಸ್ಥಳಕ್ಕೆ ಧಾವಿಸಿದ ಕಾರ್ಖಾನೆ ಅಧಿಕಾರಿಗಳು ಮತ್ತು ಪೊಲೀಸರು ಪ್ರತಿಭಟ ನಿರತರ ರೈತರೊಂದಿಗೆ ಮಾತುಕತೆ ನಡೆಸಿದರು. ಮುಂದಿನ ಮೂರು ದಿನಗಳಲ್ಲಿ ಒಳಗೆ ಸಮಸ್ಯೆ ಬಗೆಹರಿಸಿ ಆಬಲವಾಡಿ ಗ್ರಾಮಗಳು ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳ ಕಬ್ಬು ಕಟಾವಿಗೆ ಹೆಚ್ಚಿನ ಕೂಲಿ ಕಾರ್ಮಿಕರನು ನೇಮಿಸಲಾಗುವುದು. ಕಟಾವು ದರ ಹೆಚ್ಚಳ ಸಂಬಂಧ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಅಂತ್ಯಗೊಳಿಸಿದರು.ಪ್ರತಿಭಟನೆಯಲ್ಲಿ ಆಬಲವಾಡಿ ಅನಿಲ್, ಶಿವರಾಮು, ಕೆಂಪಣ್ಣ, ದೇವರಾಜು, ಪ್ರಮೋದ್, ಪುಟ್ಟಸ್ವಾಮಿ, ಮನು, ಸುದೀಪ್, ಉದಯ್, ಮೋಹನ್ , ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.