ಸಾರಾಂಶ
ನರಗುಂದ: ಆಗಸ್ಟ್ ತಿಂಗಳಲ್ಲಿ ಸುರಿದ ಬಾರಿ ಮಳೆಯ ಅತಿವೃಷ್ಟಿಯಿಂದ ರೈತರು ಬೆಳೆದ ಹೆಸರು, ಗೋವಿನ ಜೋಳ, ಹತ್ತಿ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಬೆಳೆನಷ್ಟ ಮಾಡಿಕೊಂಡ ರೈತರಿಗೆ ಕೂಡಲೇ ಬೆಳೆ ಪರಿಹಾರ ನೀಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ್ ಆಗ್ರಹಿಸಿದ್ದಾರೆ.
ತಾಲೂಕಿನ ಕೊಣ್ಣೂರ ಗ್ರಾಮದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಸೇರಿಕೊಂಡು ಬೆಳೆ ಪರಿಹಾರಕ್ಕಾಗಿ ಆಗ್ರಹಿಸಿ ಸೋಮವಾರ ಹೆದ್ದಾರಿ ತಡೆ ನಡೆಸಿ, ತಹಸೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಮನವಿ ಅರ್ಪಿಸಿದ ಬಳಿಕ ಅವರು ಮಾತನಾಡಿದರು.ಅಧಿಕಾರಿಗಳು ಕೊಣ್ಣೂರ ಗ್ರಾಮಕ್ಕೆ ಬಂದು ಸರ್ವೇ ಮಾಡಿದಾಗ ಹೊಳೆಸಾಲುಗಳಲ್ಲಿನ ಜಮೀನುಗಳು ಅಷ್ಟೇ ಹಾನಿಯಾಗಿವೆ. ಎರಿ ಹೊಲಗಳು ಹಾನಿಯಾಗಿಲ್ಲ ಎಂದು ವರದಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ನಮ್ಮ ಗಮನಕ್ಕೆ ಬಂದಿದೆ. ಕೊಣ್ಣೂರ ಭಾಗದ ರೈತರಾದ ನಾವೆಲ್ಲರೂ ಸೇರಿ ತಹಸೀಲ್ದಾರರು, ಸಹಾಯಕ ಕೃಷಿ ನಿರ್ದೇಶಕರು ಅವರನ್ನು ಭೇಟಿ ಮಾಡಿ ಈ ಸರ್ವೇ ಮಾಡಿದ ಬಗ್ಗೆ ಕೇಳಿದರೆ, ಸರಿಯಾದ ಮಾಹಿತಿ ನೀಡುತ್ತಿಲ್ಲ. ಸರ್ಕಾರ ಬೆಳೆಹಾನಿ ಮಾಡಿಕೊಂಡ ಎಲ್ಲ ರೈತರಿಗೆ ಪರಿಹಾರ ನೀಡಬೇಕು ಎಂದು ಹೇಳಿದರು.
ಬೆಳೆ ಪರಿಹಾರ ನೀಡುವ ವಿಷಯವಾಗಿ ಅಧಿಕಾರಿಗಳಿಂದ ಹಾರಿಕೆ ಉತ್ತರ ಕೇಳಿ ಬರುತ್ತಿದೆ. ಬೆಳೆ ಹಾನಿಯಾಗಿರುವ ಜಮೀನುಗಳನ್ನು ಸರಿಯಾಗಿ ಸರ್ವೇ ಮಾಡಲು ಅಧಿಕಾರಿಗಳಿಗೆ ಸೂಚಿಸಬೇಕು. ಸರ್ಕಾರದಿಂದ ಯೋಗ್ಯ ಬೆಳೆಹಾನಿ ಪರಿಹಾರ ನೀಡಲೇಬೇಕು ಎಂದು ಒತ್ತಾಯ ಮಾಡಿದರು.ತಹಸೀಲ್ದಾರ್ ಶ್ರೀಶೈಲ ತಳವಾರ ಮನವಿ ಸ್ವೀಕರಿಸಿದರು. ಮಂಡಲ ಅಧ್ಯಕ್ಷ ನಾಗನಗೌಡ ತಿಮ್ಮನಗೌಡ್ರ, ಎನ್. ಕೆ. ಸೋಮಾಪುರ, ಪ್ರಕಾಶಗೌಡ ತಿರಕನಗೌಡ್ರ, ಶೇಖರಗೌಡ ಸಾಲಿಗೌಡ್ರ, ಶಂಕರಗೌಡ ಯಲ್ಲಪ್ಪಗೌಡ್ರ, ಬಿ.ಬಿ. ಐನಾಪುರ, ಹೇಮರಡ್ಡಿ ಚೌಡರಡ್ಡಿ, ಕೃಷ್ಣಪ್ಪ ಚವ್ಹಾಣ, ಕೊಟ್ರೇಶ ಕೊಟ್ರಶೆಟ್ಟಿ, ಚಂದ್ರು ದಂಡಿನ, ಪರಪ್ಪ ಸಾಹುಕಾರ, ಪ್ರವೀಣ ಯಲಿಗಾರ ಇದ್ದರು.