ಪಟ್ಟಣದ ಮಿನಿ ವಿಧಾನಸೌಧ ಎದುರು ಹಮ್ಮಿಕೊಂಡ ಧರಣಿ ಸತ್ಯಾಗ್ರಹಕ್ಕೆ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ಸಿಗದಿದ್ದರಿಂದ ಮಂಗಳವಾರವೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರೆದಿದ್ದು, 3ನೇ ದಿನಕ್ಕೆ ಕಾಲಿಟ್ಟಿದೆ.

ಕನ್ನಡಪ್ರಭ ವಾರ್ತೆ ರೋಣ

ಸಾಲಮನ್ನಾ, ರೋಣ ತಾಲೂಕು ಬರಪೀಡಿತ ಘೋಷಣೆ, ಬೆಳೆ ವಿಮೆ ಬಿಡುಗಡೆ, ಪ್ರಧಾನಮಂತ್ರಿ ಧನ ಧಾನ್ಯ ಯೋಜನೆಯ ಅನುಷ್ಠಾನ, ಕಸ್ತೂರಿ ರಂಗನ್ ವರದಿ ಜಾರಿ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ರೋಣ ಹಾಗೂ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಮಿನಿ ವಿಧಾನಸೌಧ ಎದುರು ಹಮ್ಮಿಕೊಂಡ ಧರಣಿ ಸತ್ಯಾಗ್ರಹಕ್ಕೆ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ಸಿಗದಿದ್ದರಿಂದ ಮಂಗಳವಾರವೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರೆದಿದ್ದು, 3ನೇ ದಿನಕ್ಕೆ ಕಾಲಿಟ್ಟಿದೆ.

ಧರಣಿಯನ್ನುದ್ದೇಶಿಸಿ ರೈತ ಸಂಘ ಜಿಲ್ಲಾಧ್ಯಕ್ಷ ಮುತ್ತಣಗೌಡ ಚೌಡರಡ್ಡಿ, ತಾಲೂಕು ಅಧ್ಯಕ್ಷ ಸಂಗಣ್ಣ ಪವಾಡಶೆಟ್ಟಿ ಮಾತನಾಡಿ, ಸಭಾಧ್ಯಕ್ಷರ ತವರು ಕ್ಷೇತ್ರದಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದು, ರೈತರ ಹಿತ ಕಾಯುವಲ್ಲಿ ಸರ್ಕಾರಕ್ಕೆ ಮನಸ್ಸಿಲ್ಲವಾಗಿದೆ. ಸರ್ಕಾರ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರದಲ್ಲಿ ನಿರತವಾಗಿದೆ. ರೈತರು ಆರ್ಥಿಕವಾಗಿ ಸಬಲರಾಗುವುದು ಸರ್ಕಾರಕ್ಕೆ ಬೇಕಾಗಿಲ್ಲ. ರಾಜ್ಯ ಸರ್ಕಾರಕ್ಕೆ ಕಿಂಚಿತ್ತಾದರು ರೈತರ ಬಗ್ಗೆ ಒಲವಿದ್ದರೆ ತಕ್ಷಣವೇ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ರೈತರ ಬೇಡಿಕೆಗಳು ಈಡೇರುವವರೆಗೂ ಧರಣಿ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.

ರೈತ ಮುಖಂಡ ಮೇಗರಾಜ ಬಾವಿ ಮಾತನಾಡಿ, ಮಳೆ ಕೊರತೆಯಿಂದ ರೋಣ ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಪರಿಹಾರ ಕುರಿತು ಸರ್ಕಾರ ಗಮನ ಹರಿಸಬೇಕು. ಬೆಳೆ ವಿಮೆ ಮಂಜೂರು ಮಾಡುವಲ್ಲಿ ವಿಮೆ ಕಂಪನಿ ರೈತರಿಗೆ ಅನ್ಯಾಯ ಮಾಡುತ್ತಿದೆ. ಈ ಕುರಿತು ಸರ್ಕಾರ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ತಹಸೀಲ್ದಾರ ನಾಗರಾಜ ಕೆ. ಭೇಟಿ ನೀಡಿ ಸರ್ಕಾರದ ಹಂತದಲ್ಲಿ ನಿಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ಸಿಗಲಿದೆ ಎಂದು ಭರವಸೆ ನೀಡಿ, ಧರಣಿ ಹಿಂಪಡೆಯುವಂತೆ ವಿನಂತಿಸಿದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಲಿಖಿತ ಭರವಸೆ ನೀಡಿದರೇ ಮಾತ್ರ ಧರಣಿ ಹಿಂಪಡೆಯುತ್ತೇವೆ ಎಂದು ರೈತರು ಪಟ್ಟುಹಿಡಿದರು.

ಪ್ರತಿಭಟನೆಗೆ ಮಹಿಳಾ ರೈತ ಸಂಘಟನೆ, ದಲಿತಪರ ಸಂಘಟನೆಗಳು, ರೋಣ ಸಂಜೀವಿನಿ ಮಹಿಳಾ ಕಿಸಾನ್ ಪ್ರಡ್ಯುಸರ್ ಕಂಪನಿ ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿದವು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶಿವಲಿಂಗಪ್ಪ ಬೋಪಳಾಪೂರ, ಬಸವರಾಜ ಸಜ್ಜನ, ಶರಣಪ್ಪ ಧರ್ಮಾಯತ, ಸಂಗಣ್ಣ ದಂಡಿನ, ವೀರನಗೌಡರ ಪಾಟೀಲ, ಮೇಘರಾಜ ಭಾವಿ, ನಿಂಗಬಸಪ್ಪ ದೊಡ್ಡಮನಿ, ಮಾಂತೇಶ ಗೆದಗೇರಿ, ಅನಿಲ ಮಂಗಳೂರು, ಶಿವು ಗಣಾಚಾರಿ, ರಾಮನಗೌಡ ಮುಗನೂರ್, ಬಸವರಾಜ ಹದ್ಲಿ, ಉಮೇಶ ಗೆದಗೇರಿ, ರಾಜು ಚಿಕ್ಕನಗೌಡರ್, ಶಂಭು ಮಸಲವಾಡ, ಜಯಾನಂದ್ ಗೆದಗೇರಿ, ಸಂತು ಮುಳಗುಂದ, ಸಂಗಪ್ಪ ಕಂಬಳಿ, ಶಿವು ಕಂಬಳಿ ಸೇರಿದಂತೆ ಅನೇಕ ಗ್ರಾಮಗಳ ರೈತರು ಭಾಗವಹಿಸಿದ್ದರು.