ಸಾರಾಂಶ
ಸವಣೂರು: ಯೂರಿಯಾ ಗೊಬ್ಬರ ಅಭಾವ ಹೆಚ್ಚಾಗಿದ್ದು, ಗೊಬ್ಬರ ಪೂರೈಸುವಲ್ಲಿ ಅಧಿಕಾರಿಗಳು ಹಾಗೂ ಶಾಸಕರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಶುಕ್ರವಾರ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ರವಿಕುಮಾರ ಕೊರವರ, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಮುಂಭಾಗದಲ್ಲಿ ನಡೆದ ಪ್ರತಿಭಟನೆ ರೈತ ಮುಖಂಡರು ಮಾತನಾಡಿ, ಕಳೆದ 2- 3 ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಾರಿ ಬಿತ್ತನೆ ಪೂರ್ವದಿಂದ ಹಿಡಿದು ಇಲ್ಲಿಯವರೆಗೂ ರೈತ ಸಮೂಹ ಸಂಕಷ್ಟದಲ್ಲಿದೆ. ಈ ಸಮಸ್ಯೆಯ ನಡುವೆ ರಾಜ್ಯ ಸರ್ಕಾರ ಗೊಬ್ಬರದ ಅಭಾವ ಸೃಷ್ಟಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ. ಅವಶ್ಯವಿರುವ ಯೂರಿಯಾ ಗೊಬ್ಬರವನ್ನು ನೀಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಣ್ಮುಚಿ ಕುಳಿತಿವೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಪ್ರತಿವರ್ಷಕ್ಕಿಂತ ಈ ಬಾರಿ ಗೋವಿನಜೋಳ ಬಿತ್ತನೆ ಹೆಚ್ಚಾಗಿದ್ದು, ಜಮೀನುಗಳಿಗೆ ಒಂದು ಬಾರಿಯಾದರೂ ಯೂರಿಯಾ ಗೊಬ್ಬರ ಹಾಕಲು ಸಿಗುತ್ತಿಲ್ಲ. ಈ ಬಾರಿ ಮುಂಗಾರು ಪೂರ್ವದಿಂದ ಜಿಟಿ ಜಿಟಿ ಮಳೆ ಹತ್ತಿರುವುದರಿಂದ 2- 3 ಬಾರಿ ಯೂರಿಯಾ ಹಾಕಬೇಕು. ಆದರೆ ಇಲ್ಲಿನ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಲ್ಲಿಯವರೆಗೂ ಒಂದು ಚೀಲ ಗೊಬ್ಬರವನ್ನು ನೀಡುತ್ತಿಲ್ಲ.ರೈತರು ಬೆಳೆದ ಅಲ್ಪಸ್ವಲ್ಪ ಬೆಳೆಯನ್ನು ನಾಶ ಮಾಡುವ ಹಂತಕ್ಕೆ ತಲುಪಿದೇವೆ. ಕೂಡಲೇ ಶಾಸಕರು ಹಾಗೂ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಎರಡು ದಿನಗಳಲ್ಲಿ ಯೂರಿಯಾ ಗೊಬ್ಬರವನ್ನು ಹಂಚಿಕೆಗೆ ಮುಂದಾಗಬೇಕು. ಇಲ್ಲದಿದ್ದರೆ ಸರ್ಕಾರಿ ಕಾರ್ಯಕ್ರಮಗಳನ್ನು ಬಹಿಷ್ಕರಿಸಿ ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕ ಅಧ್ಯಕ್ಷ ಚನ್ನಪ್ಪ ಮರಡೂರ, ನೂರಹಮದ ಮುಲ್ಲಾ, ಮಾಂತೇಶ ಪರಮ್ಮನವರ, ಪರಶುರಾಮ ಗದಿಗೆಣ್ಣವರ, ಈರಪ್ಪ ಕುರುಬರ, ರಾಜು ಕುಳೆನೂರ, ಮಂಜು ಬಾರ್ಕಿ, ಮಹಮ್ಮದ ಅಲಿ ಶೇಖಸದಿ, ಸುರೇಶ ವಾಲ್ಮೀಕಿ, ಸತೀಶ ದೇವಸೂರ, ಶಶಿ ಆಲದಕಟ್ಟಿ, ಅಬ್ದುಲ್ ಬುಡನ, ನೂರಪ್ಪ ಲಮಾಣಿ, ಈರಪ್ಪ ಕುಂಬಾರ, ರಾಜಣ್ಣ ಶಿರಬಡಿಗಿ, ಶಿವಪುತ್ರಪ್ಪ ಹಡಪದ, ಪರಶು ಗದಿಗೆಟ್ಟಿ ಇತರರು ಪಾಲ್ಗೊಂಡಿದ್ದರು.ಗೊಬ್ಬರಕ್ಕಾಗಿ ಗಲಾಟೆ
ರಾಣಿಬೆನ್ನೂರು: ಗೊಬ್ಬರಕ್ಕಾಗಿ ಗೊಂದಲ ಹಾಗೂ ಗಲಾಟೆ ನಡೆದ ಪ್ರಸಂಗ ಶುಕ್ರವಾರ ತಾಲೂಕಿನ ಹರನಗಿರಿ ಗ್ರಾಮದಲ್ಲಿ ಜರುಗಿದೆ.ಗೊಬ್ಬರದ ಕೊರತೆ ಹಿನ್ನೆಲೆಯಲ್ಲಿ ಗ್ರಾಮದ ಸೊಸೈಟಿ ಮೂಲಕ ಒಬ್ಬರಿಗೆ ಒಂದು ಬ್ಯಾಗ್ ವಿತರಿಸಲಾಗುತ್ತಿತ್ತು. ಹರನಗಿರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ರೈತರು ಮಧ್ಯರಾತ್ರಿಯಿಂದಲೇ ಗೊಬ್ಬರ ಪಡೆಯುವ ಸಲುವಾಗಿ ಜಮಾಯಿಸಿದ್ದರು. ಆಗ ನೂಕುನುಗ್ಗಲು ಉಂಟಾಗಿ ವಿತರಕರು ಮತ್ತು ರೈತರ ನಡುವೆ ಗಲಾಟೆ ಶುರುವಾಗಿ ಜಮಾಯಿಸಿದ್ದ ರೈತರು ಸೊಸೈಟಿ ಒಳಗಡೆ ನುಗ್ಗಿದ್ದಾರೆ. ಪರಿಸ್ಥಿತಿ ಹತೋಟಿಗಾಗಿ ಪೊಲೀಸರು ಮಧ್ಯೆಪ್ರವೇಶಿಸಿದ್ದಾರೆ. ಆದರೂ ಗಲಾಟೆ ನಿಲ್ಲದ ಪರಿಣಾಮ ಗೊಬ್ಬರ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ಶನಿವಾರ ಎಂದಿನಂತೆ ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರತೆಯಿಲ್ಲ: ತಾಲೂಕಿನಲ್ಲಿ ರಸಗೊಬ್ಬರದ ಕೊರತೆಯಿಲ್ಲ. ಹರನಗಿರಿ ಗ್ರಾಮದ ಸೊಸೈಟಿಯಲ್ಲಿ 15 ಟನ್ ಗೊಬ್ಬರವಿದೆ. ರೈತರು ಸರದಿಯಲ್ಲಿ ನಿಂತಾಗ ಮಳೆ ಬಂದು ಎಲ್ಲರೂ ಒಂದು ಕಡೆಗೆ ಸೇರಿ ಗೊಂದಲ ಉಂಟಾಗಿದೆ. ಶನಿವಾರ ಎಲ್ಲರಿಗೂ ಗೊಬ್ಬರ ವಿತರಣೆ ಮಾಡಲಾಗುವುದು. ಇನ್ನೂ 15 ಟನ್ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ತರಿಸಲಾಗುತ್ತಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಶಾಂತಮಣಿ ಜಿ. ತಿಳಿಸಿದರು.ಗಲಾಟೆ ಆಗಿಲ್ಲ: ತಾಲೂಕಿನ ಹರನಗಿರಿ ಗ್ರಾಮದಲ್ಲಿ ಗೊಬ್ಬರಕ್ಕಾಗಿ ಗೊಂದಲ ಉಂಟಾದಾಗ ನಮ್ಮ ಸಿಬ್ಬಂದಿ ಹೋಗಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಯಾವುದೇ ಗಲಾಟೆ ನಡೆದಿಲ್ಲ. ಶನಿವಾರ ಎಲ್ಲರಿಗೂ ಗೊಬ್ಬರ ನೀಡಲಾಗುವುದು ಎಂದು ಹೇಳಿದ್ದರಿಂದ ರೈತರು ಮನೆಗೆ ತೆರಳಿದ್ದಾರೆ ಎಂದು ಡಿವೈಎಸ್‌ಪಿ ಲೋಕೇಶ ತಿಳಿಸಿದರು.