ಹೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ
KannadaprabhaNewsNetwork | Published : Oct 17 2023, 12:45 AM IST
ಹೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ
ಸಾರಾಂಶ
ಹೆಸ್ಕಾಂ ಕಚೇರಿಗೆ ರೈತರ ಘೇರಾವ್
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ ರೈತರ ಹೊಲ-ಗದ್ದೆಗಳಿಗೆ ಹಗಲು ಹೊತ್ತಿನಲ್ಲಿ ಕನಿಷ್ಠ 5 ಗಂಟೆ ವಿದ್ಯುತ್ ಪೂರೈಸುವಂತೆ ಸಿಎಂ ಸಿದ್ದರಾಮಯ್ಯ ಆದೇಶ ಮಾಡಿದ್ದರೂ ಹೆಸ್ಕಾಂ ಅಧಿಕಾರಿಗಳು ಆ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಆಕ್ರೋಶಗೊಂಡ ತಾಲೂಕಿನ ವಿವಿಧ ಗ್ರಾಮಗಳ ರೈತರು ಪಟ್ಟಣದ ಹೆಸ್ಕಾಂ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಾಲೂಕಿನ ಹಳದೂರು, ಅಲ್ಲೂರು, ಇಂಜಿನವಾರಿ, ಬೂದಿನಗಡ, ಲಾಯದಗುಂದಿ, ಕೋಟೆಕಲ್, ಕೊಟ್ನಳ್ಳಿ, ಪಾರ್ವತಿ ಸೇರಿದಂತೆ ಹಲವು ಗ್ರಾಮಗಳ ರೈತರು ಪಟ್ಟಣದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಲಗದ್ದೆಗಳಿಗೆ ಹಗಲು ಹೊತ್ತಿನಲ್ಲಿ ಕನಿಷ್ಠ 5 ಗಂಟೆ ಕಾಲ ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಪೂರೈಸಲು ಆದೇಶ ಮಾಡಿದ್ದಾರೆ. ಆದರೆ, ಹೆಸ್ಕಾಂ ಅಧಿಕಾರಿಗಳು ಹಗಲು ಹೊತ್ತು ಹೊಲಗಳಿಗೆ ವಿದ್ಯುತ್ ಪೂರೈಕೆ ಮಾಡದೇ, ರೈತರಿಗೆ ಬಹಳಷ್ಟು ತೊಂದರೆ ಉಂಟು ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಆದೇಶಕ್ಕೂ ಬೆಲೆ ಕೊಡದ ಅಧಿಕಾರಿಗಳು ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಇದು ಬಹಳಷ್ಟು ನೋವು ತರಿಸಿದೆ ಎಂದು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹೆಸ್ಕಾಂ ಕಚೇರಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಪೋಚಗುಂಡಿ, ಶಾಖಾಧಿಕಾರಿ ಬಿದರೀಕರ ಅವರು ರೈತರೊಂದಿಗೆ ಮಾತನಾಡಿ, ಸರ್ಕಾರದ ನಿಯಮಾವಳಿಯಂತೆ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಸಮಸ್ಯೆ ಇದೆ. ಹೀಗಾಗಿ, 3 ಹಂತದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರೈತರು ಸಹಕರಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಬಸವರಾಜ ಮುಳ್ಳೂರು, ಮರಿಯಪ್ಪ ತೂಗುಣಸಿ, ಮುದುಕಪ್ಪ ನರಿ, ಪರಸಪ್ಪ ಜೋಗಿನ್, ಬಸವರಾಜ ಮೇಟಿ, ಬಸನಗೌಡ ಗೌಡ್ರು, ರಂಗಪ್ಪ ಗುನ್ನಳ್ಳಿ, ರಾಮಣ್ಣ ಪೂಜಾರಿ, ಸಿದ್ದಪ್ಪ ಆಸಂಗಿ, ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.