ಸಾರಾಂಶ
ಹಾವೇರಿ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧದ ಎದುರು ಡಿ. 16ರಂದು ರಾಜ್ಯದ ವಿವಿಧ 23 ರೈತ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು, ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘಗಳ ಏಕೀಕರಣ ಹೋರಾಟ ಸಮಿತಿ ರಾಜ್ಯ ಸಂಚಾಲಕ ಎಂ.ಎನ್ ಕೂಕನೂರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ನಾಯಕರಾದ ಶಾಸಕ ದರ್ಶನ ಪುಟ್ಟಣ್ಣಯ್ಯ ಹಾಗೂ ಪಚ್ಚೆ ನಂಜುಂಡಸ್ವಾಮಿ ಉಪಸ್ಥಿತಿಯಲ್ಲಿ ಡಿ. 16ರಂದು ಬೆಳಗ್ಗೆ ಬೆಳಗಾವಿಯ ರೈತ ಸರ್ಕಲ್‌ನಿಂದ ಸುವರ್ಣಸೌಧದ ವರೆಗೆ ಬೃಹತ್ ಪಾದಯಾತ್ರೆ ಮೂಲಕ ಪ್ರತಿಭಟನೆ ಮೆರವಣಿಗೆ ನಡೆಸಲಾಗುವುದು. ಆನಂತರ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳ ಪ್ರದೇಶವಾರು ಬೆಳೆಯುವ ಮೆಕ್ಕೆಜೋಳ, ಸೋಯಾಬೀನ್, ಭತ್ತ, ರಾಗಿ, ಶೇಂಗಾ, ಹತ್ತಿ ಹೀಗೆ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಜತೆಗೆ ಒಂದು ಸಾವಿರ ರು. ಪ್ರೋತ್ಸಾಹಧನ ನೀಡಬೇಕು. ತುಂಗಭದ್ರಾ ಅಣೆಕಟ್ಟು ಗೇಟ್‌ಗಳ ಆಧುನೀಕರಣ ಹಾಗೂ 33 ಟಿಎಂಸಿ ಹೂಳು ತೆಗೆಸಬೇಕು. ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಿ, ರೈತರನ್ನು ಸಾಲ ಮುಕ್ತರೆಂದು ಘೋಷಣೆ ಮಾಡಬೇಕು. ಬಗರ್ ಹುಕುಂ ಸಾಗುವಳಿಯಲ್ಲಿ ನಡೆಯುವ ಭ್ರಷ್ಟಾಚಾರ ನಿಲ್ಲಿಸಬೇಕು. ನೈಜವಾಗಿ ಉಳುಮೆ ಮಾಡುವ ರೈತರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಲಾಗುವುದು. ಅದೇರೀತಿ ನಬಾರ್ಡ್ ಮೂಲಕ ಹೆಚ್ಚಿನ ಸಾಲ ಸೌಲಭ್ಯ ನೀಡಬೇಕು. ಪಹಣಿಗಳಲ್ಲಿರುವ ವಕ್ಫ್, ಇನಾಂ, ಪರಭಾರೆ ಆಸ್ತಿಯನ್ನು ಮುಕ್ತಗೊಳಿಸಬೇಕು. ಎಪಿಎಂಸಿ ಕಾಯಿದೆ ಮಾರಕವಾಗಿದ್ದು, ನ್ಯಾಯಬದ್ಧ ದರ ನಿಗದಿ ಮಾಡಬೇಕು. ಕೇಂದ್ರ ಸರ್ಕಾರ ಹಿಂಪಡೆದಂತೆ ರಾಜ್ಯ ಸರ್ಕಾರ ಕೂಡ ಕರಾಳ ಕೃಷಿಕಾಯಿದೆಗಳನ್ನು ಹಿಂಪಡೆಯಬೇಕು. ವಿದ್ಯುಚ್ಛಕ್ತಿ ಖಾಸಗೀಕರಣ ಮಾಡಬಾರದು. ಟ್ರಾನ್ಸಫಾರ್ಮರ್, ಕಂಬಗಳು, ವಿದ್ಯುತ್ ಲೈನ್‌ಗಳನ್ನು ಪೂರೈಸುವುದನ್ನು ಸರ್ಕಾರ ಸ್ಥಗಿತಗೊಳಿಸಿದ್ದು, ಯೋಜನೆ ಪುನರಾರಂಭಿಸಿ ಪೂರೈಸಬೇಕು. ನಗರ ಪ್ರದೇಶದಲ್ಲಿ ಸಿಗುವ ಶಿಕ್ಷಣ, ಆರೋಗ್ಯ, ರಸ್ತೆ ಹೀಗೆ ಮೂಲ ಸೌಕರ್ಯಗಳನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಬೇಕು. ಸ್ವಾಮಿನಾಥನ್ ವರದಿ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮುತ್ತಿಗೆ ಹಾಕಲಾಗುವುದು. ಆದ್ದರಿಂದ ಜಿಲ್ಲೆಯಲ್ಲಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಿಂಗಪ್ಪ ಓಲೇಕಾರ, ವೆಂಕಟೇಶ ಈಳಗೇರ ಇದ್ದರು.