ಸಾರಾಂಶ
ಹರಪನಹಳ್ಳಿ: ತಾಲೂಕಿನ ಹೊಸಕೋಟೆ ಭಾಗದ ರೈತರು ಪುಣಭಘಟ್ಟ ವಿದ್ಯುತ್ ಪ್ರಸರಣ ಘಟಕಕ್ಕೆ ತೆರಳಿ ಸಮರ್ಪಕ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಹೊಸಕೋಟೆ ಭಾಗದ ರೈತರ ಪಂಪ್‌ಸೆಟ್‌ಗಳಿಗೆ ಎರಡು ಹಂತದಲ್ಲಿ ವಿದ್ಯುತ್ ಪ್ರಸರಣ ಮಾಡಬೇಕು. ವಿದ್ಯುತ್ ಪ್ರಮಾಣ(ವೋಲ್ಟೇಜ್ )ಕಡಿಮೆ ಇರುವುದರಿಂದ ಎರಡು ವರ್ಷಗಳ ಕಾಲ ಈ ಸಮಸ್ಯೆ ಇರುವುದರಿಂದ ಈ ಭಾಗದ ರೈತರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ದಿಢೀರ್ ಪ್ರತಿಭಟನೆಗೆ ಮುಂದಾದರು.ರೈತ ಮುಖಂಡ ಎಸ್. ಜಾತಪ್ಪ ಮಾತನಾಡಿ, ಈ ವರ್ಷ ಬರಗಾಲ ಬಂದಿರುವುದರಿಂದ ಈ ಭಾಗದ ಹಳ್ಳಿಗಳಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಒಂದೇ ಹಂತದಲ್ಲಿ ವಿದ್ಯುತ್ ನೀಡುತ್ತಿರುವುದು ಹಾಗೂ ವೋಲ್ಟೇಜ್ ಕಡಿಮೆ ಇರುವುದರಿಂದ ರೈತರಿಗೆ ಬಹಳ ಸಮಸ್ಯೆ ಆಗಿದೆ. ದನ- ಕರುಗಳಿಗೆ ನೀರು ಹಾಗೂ ಮೇವಿನ ಕೊರತೆಯಾಗಿದೆ. ಬೆಳೆನಾಶವಾಗುತ್ತಿದೆ ಎಂದರು.
ಎರಡು ವರ್ಷದಿಂದ ಅರಸೀಕೆರೆಯಲ್ಲಿ ಹೊಸ ವಿದ್ಯುತ್ ಪ್ರಸರಣ ಘಟಕ ಪ್ರಾರಂಭವಾಗುತ್ತದೆ ಎಂದು ಅಧಿಕಾರಿಗಳು ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ ಎಂದು ದೂರಿದರು.ಸರ್ಕಾರ ಚುನಾಯಿತ ಪ್ರತಿನಿಧಿಗಳು ಈ ನಮ್ಮ ಸಮಸ್ಯೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಎಷ್ಟೋ ಬಾರಿ ಅಧಿಕಾರಿಗಳಿಗೆ ಮನವಿ ಹಾಗೂ ಪ್ರತಿಭಟನೆ ಮಾಡಿದರೂ ಹೊಸ ವಿದ್ಯುತ್ ಪ್ರಸರಣ ಘಟಕ ಪ್ರಾರಂಭವಾಗಿಲ್ಲ. ರೈತರ ಬೆನ್ನೆಲುಬು ಮುರಿದಿದೆ. ಕೂಡಲೇ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಪುಣಭಘಟ್ಟ ವಿದ್ಯುತ್ ಪ್ರಸರಣ ಘಟಕದ ವ್ಯವಸ್ಥಾಪಕಿ ಅಂಜಲಿ ಅವರಿಗೆ ಮನವಿ ಪತ್ರ ಸಲ್ಲಿಸಿ, ನಂತರ ತಾಲೂಕು ವಿದ್ಯುತ್ ಪ್ರಸರಣ ಕೇಂದ್ರಕ್ಕೆ ತೆರಳಿ ಮನವಿ ಸಲ್ಲಿಸಿದರು.ರೈತ ಮುಖಂಡರಾದ ಆನಂದಪ್ಪ, ಎಚ್. ಹನುಮಂತಪ್ಪ, ಗುರುಮೂರ್ತಿ, ಎಚ್. ಭರಮನಗೌಡ, ಎಚ್.ಎಸ್. ಮಹಾಂತೇಶಪ್ಪ, ಪೂಜಾರ್ ಸುರೇಶ್, ಎಚ್. ಕರಿಬಸಪ್ಪ, ಶಂಕರಪ್ಪ, ಶಿವಕುಮಾರ್, ನಾಗರಾಜ್, ಶಾಂತಕುಮಾರ್, ಹಾಲೇಶ್ ಮುಖಂಡರು ಇದ್ದರು.