ಸಾರಾಂಶ
ಕುಂದಗೋಳ: ಭರದ್ವಾಡ ಗ್ರಾಮದ ಆತ್ಮಹತ್ಯೆ ಮಾಡಿಕೊಂಡ ರೈತ ರವಿರಾಜ ಬಸವರಾಜ ಜಾಡರ ಶವ ಪಂಚನಾಮೆ ವೇಳೆ ರೈತ ಮುಖಂಡರು ಹಾಗೂ ತಹಸೀಲ್ದಾರ್ ರಾಜು ಮಾವರಕರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಬೆಳೆ ಹಾನಿಯಾಗಿ ಪರಿಹಾರವೂ ಬರದಿರುವುದರಿಂದ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ರೈತರು ಶವವಿಟ್ಟು ಪ್ರತಿಭಟನೆಗೆ ಮುಂದಾದರು.ರೈತರಾದ ಮಾರುತಿ ಕಲ್ಲೂರ, ಶೌಕತ್ ಅಲಿ ಮುಲ್ಲಾ, ನಿಂಗಪ್ಪ ಯಲುವಿಗಿ, ಫಕ್ಕೀರಪ್ಪ ಮಾಡೊಳ್ಳಿ, ಮಂಜುನಾಥ ಬಡಿಗೇರ ಎಂಬುವರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಆಕ್ರೋಶ ಹೊರಹಾಕಿದರು. ಮೃತಪಟ್ಟ ರೈತನಿಗೆ ಬೆಳೆ ವಿಮೆ ಬರದೆ ಅನ್ಯಾಯವಾಗಿದೆ. ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿ ವರ್ಗ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಲಂಚ ಪಡೆದು ತಮಗೆ ಬೇಕಾದ ರೈತರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿದ್ದಾರೆ. ಇದರಿಂದ ರೈತರ ಸಾಲದ ಹೊರೆ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿ ಒಳ್ಳೆಯ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ರೈತರು ಆಕ್ರೋಶ ಹೊರಹಾಕಿದರು.
ಈ ವೇಳೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಆರ್ಥಿಕ ಸಹಾಯಧನ ನೀಡಿ ಮಾತನಾಡಿ, ಕೇಂದ್ರ ಸಚಿವರು ಪ್ರಹ್ಲಾದ್ ಜೋಶಿ ಅವರು ಕುಂದಗೋಳ ಹೋಬಳಿಗೆ ಬೆಳೆ ವಿಮೆ ಬಂದಿದೆ ಎನ್ನುತ್ತಾರೆ. ಸಂಶಿ ಹೋಬಳಿಯ ರೈತರಿಗೆ ಯಾಕೆ ಬೆಳೆ ವಿಮೆ ಬಂದಿಲ್ಲ? ಅದು ಬಂದಿದ್ದರೆ ರೈತರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಪ್ರಶ್ನಿಸಿದರು.ತಹಸೀಲ್ದಾರ್ ರಾಜು ಮಾವರಕರ ಮಾತನಾಡಿ, ರೈತರು ಆತ್ಮಹತ್ಯೆಗೆ ಮುಂದಾಗಬಾರದರು. ಘಟನೆ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಮೃತ ರೈತನ ಕುಟುಂಬಕ್ಕೆ ಸರ್ಕಾರದಿಂದ ಬರುವ ಪರಿಹಾರ ಶೀಘ್ರವಾಗಿ ಒದಗಿಸುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ರೈತರು ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಶಿವಾನಂದ ಬೆಂತೂರ, ಗ್ರಾಪಂ ಅಧ್ಯಕ್ಷ ಮಹಾದೇವಪ್ಪ ಮಾಡೊಳ್ಳಿ, ಸುಭಾಷ ಲಿಂಬಣ್ಣವರ, ಮಹೇಶ ಮಾಡೋಳ್ಳಿ, ಹೆಗ್ಗಪ್ಪ ನಿಂಬಣ್ಣವರ, ಮಲ್ಲೇಶಪ್ಪ ಬೇವಿನಕಟ್ಟಿ, ಫಕ್ಕಿರಪ್ಪ ಮಾಡೊಳ್ಳಿ, ಯಲ್ಲಪ್ಪಗೌಡ ಪಾಟೀಲ, ಸಲೀಂ ಕ್ಯಾಲಕೊಂಡ, ಸಲೀಂ ಕಡ್ಲಿ, ಸಚಿನ ಪೂಜಾರಿ, ಗುರು ಚಲವಾದಿ ಸೇರಿದಂತೆ ಅನೇಕರಿದ್ದರು.