ತ್ಯಾಜ್ಯ ವಸ್ತುಗಳು ಹಾಗೂ ಕಾಲುವೆಯಲ್ಲಿ ಗಿಡಗಳು ಬೆಳೆದು ಕಾಲುವೆ ಸಂಪೂರ್ಣ ತುಂಬಿ ಕೊನೆಯ ಭಾಗದ ರೈತರಿಗೆ ನೀರು ದೊರೆಯುತ್ತಿಲ್ಲ. ತಕ್ಷಣವೇ ಕಾಲುವೆ ಸ್ವಚ್ಛಗೊಳಿಸಬೇಕು.
ಹೊಸಪೇಟೆ: ವಿಜಯನಗರ ಕಾಲದ ಐತಿಹಾಸಿಕ ಬಸವಣ್ಣ ಕಾಲುವೆಯಲ್ಲಿ ಹೂಳು, ಪ್ರಾಸ್ಟಿಕ್, ಕಸ-ಕಡ್ಡಿ ಸೇರಿದಂತೆ ತ್ಯಾಜ್ಯ ವಸ್ತುಗಳು ಹಾಗೂ ಕಾಲುವೆಯಲ್ಲಿ ಗಿಡಗಳು ಬೆಳೆದು ಕಾಲುವೆ ಸಂಪೂರ್ಣ ತುಂಬಿ ಕೊನೆಯ ಭಾಗದ ರೈತರಿಗೆ ನೀರು ದೊರೆಯುತ್ತಿಲ್ಲ. ತಕ್ಷಣವೇ ಕಾಲುವೆ ಸ್ವಚ್ಛಗೊಳಿಸಬೇಕು. ಇಲ್ಲವಾದರೆ ಹಂಪಿ ಉತ್ಸವಕ್ಕೆ ಬರುವ ಜನಪ್ರತಿನಿಧಿಗಳಿಗೆ ಕಪ್ಪುಪಟ್ಟಿ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸ್ಥಳೀಯ ರೈತರು ಮಲಪನಗುಡಿ ಗ್ರಾಮದ ಸಮೀಪ ಬುಧವಾರ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದರು.
ಬಸವಣ್ಣ ಕಾಲುವೆಯು ನಾಗೇನಹಳ್ಳಿ, ಮಲಪನಗುಡಿ, ಹೊಸಮಲಪನಗುಡಿ, ಗಾಳೆಮ್ಮನಗುಡಿ ಮತ್ತು ಕಮಲಾಪುರ ಭಾಗದ ರೈತರು ವ್ಯವಸಾಯದಿಂದ ಜೀವನ ನಡೆಸುತ್ತಿದ್ದು, ವಿಜಯನಗರ ಕಾಲದ ಬಸವಣ್ಣ ಕಾಲುವೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕಾಲುವೆಯಲ್ಲಿ ತ್ಯಾಜ್ಯವಸ್ತುಗಳು, ಹಾಸಿಗೆ, ದಿಂಬುಗಳಿಂದ ತುಂಬಿ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ದೊರೆಯುತ್ತಿಲ್ಲ. ಈ ಸಮಸ್ಯೆಯನ್ನು ನೀರಾವರಿ ಇಲಾಖೆಯವರಿಗೆ ಮತ್ತು ಕ್ಷೇತ್ರದ ಜನಪ್ರತಿನಿಧಿಗಳ ಗಮನಕ್ಕೆ ಪ್ರತಿ ವರ್ಷ ತಂದರೂ ಸಹ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗುತ್ತಿಲ್ಲ. ಪ್ರತಿ ವರ್ಷ ಸರ್ಕಾರ ಹಂಪಿ ಉತ್ಸವ ನಡೆಸುತ್ತಾರೆ. ಆದರೆ ರೈತರ ಸಮಸ್ಯೆಗಳನ್ನು ಕೇಳುವರೇ ಇಲ್ಲದಾಗಿದೆ ಎಂದರು.ಸಾಲ ಮಾಡಿ ಬೆಳೆದ ಫಸಲು ಒಣಗಿ ಹೋಗಿ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ಬಂದಿದೆ. ತಕ್ಷಣವೇ ಬಸವಣ್ಣ ಕಾಲುವೆ ಸ್ವಚ್ಛಗೊಳಿಸಿ ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ದೊರೆಯುವಂತೆ ವ್ಯವಸ್ಥೆಗೊಳಿಸಬೇಕು. ಇಲ್ಲವಾದರೆ ಹಂಪಿ ಉತ್ಸವದ ವೇಳೆ ರೈತರು ಕಪ್ಪುಪಟ್ಟಿ ಪ್ರದರ್ಶನ ನೀಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸ್ಥಳೀಯ ರೈತರು ಎಚ್ಚರಿಕೆ ನೀಡಿದ್ದಾರೆ.
ಹೊಸಪೇಟೆ ತಾಲೂಕಿನ ಮಲಪನಗುಡಿ ಗ್ರಾಮದ ಬಳಿ ಬುಧವಾರ ಬಸವಣ್ಣ ಕಾಲುವೆ ಸ್ವಚ್ಛಗೊಳಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು.