ಸಾರಾಂಶ
ಕೆಆರ್‌ಎಸ್ ಅಣೆಕಟ್ಟೆಯಿಂದ ಕಾಲುವೆಗಳಿಗೆ ನೀರು ಹರಿಸುತ್ತಿದ್ದರೂ ಕೂಡ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ವಿ.ಸಿ.ನಾಲೆ ಕೊನೆಯ ಭಾಗದ ಕಾಲುವೆಗಳಿಗೆ ಸಮರ್ಪಕ ನೀರು ಹರಿಸಬೇಕೆಂದು ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ತಾಲೂಕಿನ ಕಾಗೇಪುರ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ತಾಲೂಕಿನ ಅಂಚೆದೊಡ್ಡಿ, ತಮ್ಮಡಹಳ್ಳಿ, ಅಮೃತೇಶ್ವರನಹಳ್ಳಿ ನೆಲಮಾಕನಹಳ್ಳಿ, ಕಂದೇಗಾಲ ಸೇರಿದಂತೆ ವಿವಿಧ ಭಾಗಗಳ ರೈತರು ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿದರು. ಕೂಡಲೇ 13ನೇ ವಿತರಣಾ ನಾಲೆಗಳಿಗೆ ನೀರು ಕೊಡಬೇಕೆಂದು ಆಗ್ರಹಿಸಿದರು.ಕೆಆರ್‌ಎಸ್ ಅಣೆಕಟ್ಟೆಯಿಂದ ಕಾಲುವೆಗಳಿಗೆ ನೀರು ಹರಿಸುತ್ತಿದ್ದರೂ ಕೂಡ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಈಗಾಗಲೇ ಬೆಳೆದಿರುವ ಕಬ್ಬು, ಭತ್ತ, ರಾಗಿ, ಜೋಳದ ಬೆಳೆಗಳು ಒಣಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಸ್ಥಳಕ್ಕೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ನಂತರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕೂಡಲೇ ವಿ.ಸಿ.ನಾಲೆ ಕೊನೆ ಭಾಗದ ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.ಸೋಮವಾರದವರೆವಿಗೂ ಕಾಲುವೆಗಳಲ್ಲಿ ನೀರು ಹರಿಸಲಾಗುವುದೆಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ದೂರವಾಣಿಯಲ್ಲಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ರೈತರು ವಾಪಸ್ ಪಡೆದುಕೊಂಡರು.ಪ್ರತಿಭಟನೆಯಲ್ಲಿ ವಿವಿಧ ಗ್ರಾಮಗಳ ಹಲವು ರೈತರು ಭಾಗವಹಿಸಿದ್ದರು.
------------17ಕೆಎಂಎನ್ ಡಿ14
ಮಳವಳ್ಳಿ ಕಾಗೇಪುರದ ಕಾವೇರಿ ನೀರಾವರಿ ನಿಗಮದ ಕಚೇರಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.