ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರೈತರ ಕೃಷಿ ಪಂಪ್ ಸೆಟ್ಟುಗಳಿಗೆ ಸಮರ್ಪಕ ವಿದ್ಯುತ್ , ಪರಿವರ್ತಕಗಳನ್ನು ತ್ವರಿತವಾಗಿ ನೀಡುವಂತೆ ಒತ್ತಾಯಿಸಿ ಪಟ್ಟಣದ ಸೆಸ್ಕಾಂ ವಿಭಾಗೀಯ ಕಚೇರಿ ಎದುರು ಬುಧವಾರ ರೈತ ಸಂಘದ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು.ಸೆಸ್ಕಾಂ ಕಚೇರಿ ಎದುರು ಧರಣಿ ಕುಳಿತ ರೈತರು, ರಾಜ್ಯದಲ್ಲಿ ವಿದ್ಯುತ್ ಅಭಾವ ಇರುವುದರಿಂದ ಕೈಗಾರಿಕೆಗಳಿಗೆ ಶೇ.25 ರಷ್ಟು ವಿದ್ಯುತ್ ಕಡಿತ ಮಾಡಿ ಅದನ್ನು ಕೃಷಿ ಉತ್ಪಾದಕ ರೈತರಿಗೆ ನೀಡಬೇಕು. ವಿದ್ಯುತ್ ಅಪಘಾತದಲ್ಲಿ ಮರಣ ಹೊಂದಿದ ಸಂತ್ರಸ್ಥ ಕುಟುಂಬದವರಿಗೆ ತ್ವರಿತವಾಗಿ ಪರಿಹಾರ ವಿತರಿಸಬೇಕು ಆಗ್ರಹಿಸಿದರು.
ತಾಲೂಕಿನಲ್ಲಿ ಸಾಕಷ್ಟು ರೈತರು ನಿಗಧಿತ ಹಣ ಕಟ್ಟಿ ಟಿಸಿಗಾಗಿ ಕಾಯುತ್ತಿದ್ದಾರೆ. ಆದರೆ, ಸೆಸ್ಕಾಂ ಇದುವರೆಗೂ ರೈತರ ಪಂಪ್ ಸೆಟ್ಟುಗಳಿಗೆ ಅಗತ್ಯ ಟಿಸಿ ಅಳವಡಿಸಿಲ್ಲ. ಸುಟ್ಟುಹೋದ ಟಿಸಿಗಳನ್ನು ಇಲಾಖೆಯ ವೆಚ್ಚದಲ್ಲಿಯೇ ಸರಿಪಡಿಸಿ ಪರ್ಯಾಯ ಟಿ.ಸಿಗಳನ್ನು ಅಳವಡಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಟಿಸಿ ಸಾಗಾಣಿಕೆ ವೆಚ್ಚವನ್ನೂ ರೈತರಿಂದಲೇ ಅನಧಿಕೃತವಾಗಿ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಹತ್ತಾರು ಸಲ ಇಲಾಖೆಯ ಮುಂದೆ ಪ್ರತಿಭಟಿಸಿದರೂ ಕೇವಲ ಆಶ್ವಾಸನೆಗಳು ಮತ್ತು ಹಾರಿಕೆಯ ಉತ್ತರಗಳು ಬರುತ್ತಿವೆಯೇ ಹೊರತು ವ್ಯವಸ್ಥೆಯಲ್ಲಿ ಬದಲಾವಣೆ ಕಾಣುತ್ತಿಲ್ಲ ಎಂದು ದೂರಿದರು.
ಕೈಗಾರಿಕೆಗಳಂತೆಯೇ ಕೃಷಿ ಕೂಡ ಉತ್ಪಾದಕ ಕ್ಷೇತ್ರ. ರೈತರನ್ನು ಉತ್ಪಾದಕರೆಂದು ಪರಿಗಣಿಸಿ ರೈರರಿಗೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಕೈಗಾರಿಕಾ ಕ್ಷೇತ್ರಕ್ಕೂ ಲೋಡ್ ಶೆಡ್ಡಿಂಗ್ ವ್ಯವಸ್ಥೆ ಜಾರಿಗೊಳಿಸಿ ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಡುವಂತೆ ಧರಣಿ ನಿರತ ರೈತರು ಒತ್ತಾಯಿಸಿದರು.ಗ್ರಾಮೀಣ ಪ್ರದೇಶದಲ್ಲಿ ನಿರಂತರ ಜ್ಯೋತಿ ಕಾಮಗಾರಿಯ ಹೆಸರಿನಲ್ಲಿ ಪ್ರತ್ಯೇಕ ವಿದ್ಯುತ್ ಲೈನ್ ಎಳೆಯಲಾಗುತ್ತಿದೆ. ಇದನ್ನು ತಕ್ಷಣ ಕೈಬಿಡಬೇಕು. ನಿರಂತರ ಜ್ಯೋತಿ ಲೈನ್ ಇರುವ ಕಡೆ ಜ್ಯೂಸ್ ವಿದ್ಯುತ್ ಪೂರೈಕೆ ಮಾಡುವುದರಿಂದ ರೈತರು ತಮ್ಮ ಪಂಪ್ ಸೆಟ್ಟುಗಳನ್ನು ಚಾಲನೆ ಮಾಡಿ ಜಮೀನುಗಳು ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ರೈತರಿಗೆ ಉಪಯೋಗವಿಲ್ಲದ ನಿರಂತರ ಜ್ಯೋತಿ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಸೆಸ್ಕಾಂ ಅಧೀಕ್ಷಕ ಎಂಜಿನಿಯರ್ ಸೋಮಶೇಖರ್, ಕಾರ್ಯಪಾಲಕ ಅಭಿಯಂತರೆ ವಿನುತ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸಾಮಿ ಸೇರಿದಂತೆ ಸೆಸ್ಕಾಂ ಅಧಿಕಾರಿಗಳು ಹಾಜರಿದ್ದು ರೈತರ ಸಮಸ್ಯೆ ಆಲಿಸಿ ಪರಿಹಾರಕ್ಕಾಗಿ ಮೇಲಧಿಕಾರಿಗಳೊಂದಿಗೆ ಸಮಾಲೋಚಿಸಿದರು.ಪ್ರತಿಭಟನಾ ಧರಣಿಯಲ್ಲಿ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಹೋರಟಗಾರರಾದ ಕೆ.ಆರ್.ಜಯರಾಂ, ನಾರಾಯಣಸ್ವಾಮಿ, ಮುದ್ದುಕುಮಾರ್, ನಾಗೇಗೌಡ, ಹಿರೀಕಳಲೆ ಬಸವರಾಜು, ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಾಶ್, ನಗರೂರು ಕುಮಾರ್, ನೀತಿಮಂಗಲ ಮಹೇಶ್, ಮಡರಹಳ್ಳಿ ರಾಮೇಗೌಡ, ಶೆಟ್ಟಹಳ್ಳಿ ನರಸಿಂಹೇಗೌಡ, ಕೃಷ್ಣೇಗೌಡ ಸೇರಿದಂತೆ ಹಲವರು ಇದ್ದರು.