ಜನ ಜಾನುವಾರುಗಳಿಗೆ ಕುಡಿಯುವ ನೀರು ಬಿಡುವಂತೆ ರೈತರ ಪ್ರತಿಭಟನೆ

| Published : May 04 2024, 12:36 AM IST

ಜನ ಜಾನುವಾರುಗಳಿಗೆ ಕುಡಿಯುವ ನೀರು ಬಿಡುವಂತೆ ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ ಇಲ್ಲದೇ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಈಗಾಗಲೇ ಪಟ್ಟಣದ ದೊಡ್ಡಕೆರೆ ಹಾಗೂ ಮಾರೇಹಳ್ಳಿ ಕೆರೆಗಳು ನೀರು ತುಂಬಿದ್ದರೂ ಕೂಡ ಒಣಗುತ್ತಿರುವ ಬೆಳೆಗಳಿಗೆ ಹಾಗೂ ಜಾನುವಾರುಗಳಿಗೆ ನೀರು ಕೊಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನೀರು ಬಿಡಬೇಕೆಂದು ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮಾರೇಹಳ್ಳಿ ಮತ್ತು ಮಳವಳ್ಳಿ ಕೆರೆಗಳಿಂದ ನಾಲ್ಕು ದಿನಗಳ ಕಾಲ ನೀರು ಬಿಡುವಂತೆ ಆಗ್ರಹಿಸಿ ತಾಲೂಕಿನ ಟಿ.ಕಾಗೇಪುರದ ಕಾವೇರಿ ನೀರಾವರಿ ನಿಗಮ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಪಟ್ಟಣದ ರೈತರು ನೀರಾವರಿ ಇಲಾಖೆ ಕಚೇರಿ ಬಳಿ ಆಗಮಿಸಿ ಕೂಡಲೇ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಧಿಕಾರಿಗಳ ಮೂಲಕ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಪೇಟೆ ಬೀದಿ ಮುಖಂಡ ಚಿಕ್ಕರಾಜು ಮಾತನಾಡಿ, ಮಳೆ ಇಲ್ಲದೇ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಈಗಾಗಲೇ ಪಟ್ಟಣದ ದೊಡ್ಡಕೆರೆ ಹಾಗೂ ಮಾರೇಹಳ್ಳಿ ಕೆರೆಗಳು ನೀರು ತುಂಬಿದ್ದರೂ ಕೂಡ ಒಣಗುತ್ತಿರುವ ಬೆಳೆಗಳಿಗೆ ಹಾಗೂ ಜಾನುವಾರುಗಳಿಗೆ ನೀರು ಕೊಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನೀರು ಬಿಡಬೇಕೆಂದು ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆರೆಗಳ ಕೆಳಭಾಗದ ಒಳಗೆರೆ, ಸೆಂಟಗರೆ, ದೊಡ್ಡಕೊಳ, ಚಿಕ್ಕಕೊಳಗಳಿಗೆ ನೀರು ಬಿಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆರೇಳು ಕಿಮೀ ದೂರದಿಂದ ಮಾರೇಹಳ್ಳಿ, ಮಳವಳ್ಳಿ ಕೆರೆಗಳಿಗೆ ಜನ ಜಾನುವಾರುಗಳನ್ನು ಕರೆತಂದು ನೀರು ಕುಡಿಸಲು ಸಾಧ್ಯವೇ ಎನ್ನುವುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ಕೂಡಲೇ ಕೆರೆಗಳಿಂದ ಜಾನುವಾರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀರು ಬಿಡುಗಡೆ ಮಾಡಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಚಿಕ್ಕನಂಜುಂಡೇಗೌಡ, ಶಿವಣ್ಣ, ಸಿದ್ದಲಿಂಗೇಗೌಡ, ಮಹದೇವಯ್ಯ, ಲಿಂಗರಾಜು, ಮರಿಸ್ವಾಮಿ, ಯೋಗ, ವೆಂಕಟೇಶ್ ಇದ್ದರು.

ಪೆನ್ ಡ್ರೈವ್ ಪ್ರಕರಣ ಆರೋಪಿಗಳನ್ನು ಬಂಧಿಸಿ, ಮಹಿಳೆಯರ ಗೌಪ್ಯತೆ ಕಾಪಾಡಿ: ಪಾಪು ಒತ್ತಾಯ

ಮಂಡ್ಯ:ಹಾಸನದ ಪೆನ್‌ಡ್ರೈವ್ ಪ್ರಕರಣದ ಆರೋಪಿಗಳನ್ನು ಬಂಧಿಸಿ ಸಂತ್ರಸ್ತ ಮಹಿಳೆಯರ ಗೌಪ್ಯತೆ ಕಾಪಾಡುವಂತೆ ರೈತ ಮುಖಂಡ ಕಿರಂಗೂರು ಪಾಪು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಯುವ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪೆನ್‌ಡ್ರೈವ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.ಪ್ರಜ್ವಲ್ ರೇವಣ್ಣ ಅವರನ್ನು ದೇವೇಗೌಡರ ಮೇಲೆ ಅಭಿಮಾನವಿಟ್ಟು ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸಲಾಗಿತ್ತು. ಆದರೆ, ಹಾಸನ ಜಿಲ್ಲೆಯ ಜನತೆಗೆ ದ್ರೋಹ ಬಗೆದಿದ್ದಾರೆ. ಸಂಸತ್‌ಗೆ ಕಪ್ಪುಚುಕ್ಕಿ ಇಟ್ಟಿರುವ ಪ್ರಜ್ವಲ್ ರೇವಣ್ಣನಿಗೆ ದೇಶ, ರಾಜ್ಯ, ಜಿಲ್ಲೆಯ ಜನ ಕ್ಷಮಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಲೈಂಗಿಕ ಕಿರುಕುಳ ನೀಡಿರುವುದು ಶೋಭೆ ತರುವುದಿಲ್ಲ. ಈ ಬಗ್ಗೆ ಎಚ್ಚರ ವಹಿಸಬೇಕಾದ ತಂದೆ ರೇವಣ್ಣನೇ ಇಂಥ ನೀಚ ಕೃತ್ಯಕ್ಕೆ ಒಳಗಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.ಪ್ರಕರಣ ತನಿಖೆ ವೇಳೆ ಹೆಣ್ಣುಮಕ್ಕಳ ವಿಚಾರಣೆ ನಡೆಸುವಾಗ ಗೌಪ್ಯತೆ ಕಾಪಾಡಿಕೊಂಡು ಎಲ್ಲೂ ಮಾಹಿತಿಯನ್ನೂ ಎಲ್ಲೂ ಸಾರ್ವಜನಿಕವಾಗಿ ಬಿಡದೆ ಅವರ ಸಂಸಾರಗಳು ಬೀದಿಪಾಲಾಗದಂತೆ ಎಚ್ಚರ ವಹಿಸಬೇಕು. ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು, ಪ್ರಜ್ವಲ್ ಮತ್ತು ರೇವಣ್ಣ ಎಷ್ಟೇ ಪ್ರಭಾವಿಗಳಾದರೂ ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.