ಕನ್ನಡಪ್ರಭ ವಾರ್ತೆ ಇಂಡಿ
ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಚಡಚಣ ತಾಲೂಕಿನ ಕಡೆಯ ಭಾಗದ ರೈತರಿಗೆ ನಾರಾಯಣಪುರ ಎಡದಂಡೆ ಕಾಲುವೆ ಮುಖಾಂತರ ನೀರು ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಝಳಕಿ ಗ್ರಾಮದ ಕೆಬಿಜೆಎನ್ಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಚಡಚಣ ತಾಲೂಕಿನ ನಾರಾಯಣಪುರ ಎಡದಂಡೆ ಕಾಲುವೆ ಡಿಸ್ಟ್ರಿಬ್ಯುಟರ್ 35 ರಿಂದ 46 ರವರೆಗೆ ಕಾಲುವೆ ಮೂಲಕ ದಸೂರ ಗ್ರಾಮದ ಕೊನೆಯವರೆಗೂ ನೀರು ಹರಿಸಬೇಕು. ಏ.12ರ ನಂತರ ನೀರು ಬಿಡದೇ ಹೋದರೆ ಉಗ್ರ ಹೋರಾಟ ಮಾಡಲಾಗುವುದು ಎಚ್ಚರಿಕೆ ನೀಡಿದರು.ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ ಮಾತನಾಡಿ, ಚಡಚಣ ತಾಲೂಕಿನ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಡಿಸ್ಟ್ರಿಬ್ಯುಟರ್ 35 ರಿಂದ 46ರ ಕೊನೆಯ ಭಾಗದ ರೈತರಿಗೆ ಕಾಲುವೆ ನೀರು ಹರಿಸುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ನಾಗಠಾಣ ಮತಕ್ಷೇತ್ರದ ಶಾಸಕರು ಮತ್ತು ಚಡಚಣ ತಾಲೂಕು ಆಡಳಿತ ರೈತರಿಗೆ ಕಾಲುವೆ ನೀರಿನ ಪರಿಹಾರ ಬಗೆಹರಿಸುವಲ್ಲಿ ಮುಂದಾಗುತ್ತಿಲ್ಲ. ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೈತರು ಬೆಳೆದ ಬೆಳೆಗಳು ಒಣಗುತ್ತವೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚಡಚಣ ತಾಲೂಕಿನಲ್ಲಿ ಬರುವ ಕಾಲುವೆ ಕೊನೆಯವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲು ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಹಿಡಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಬಿಜೆಎಲ್‌ಎಲ್ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಮಾತನಾಡಿ, ಏ.1 ರಂದು ಕಾಲುವೆ ಮೂಲಕ ನೀರು ಹರಿಸುತ್ತೇವೆ. ಏ.12 ರವರೆಗೆ ನೀರು ಪೂರೈಕೆ 35 ರಿಂದ 46 ದಿನಗಳವರೆಗೆ ಕ್ರಮ ಕೈಗೊಳ್ಳಲಾಗುವುದು. ರೈತರು ತಮ್ಮ ಮೋಟಾರು ಪಂಪ್ ಒಂದೆರಡು ದಿನ ಕೊನೆ ಭಾಗದ ಜನರಿಗೆ ನೀರು ತಲುಪುವವರೆಗೆ ಬಂದ ಮಾಡುವ ಮೂಲಕ ಸಹಕರಿಸಬೇಕು ಮನವಿ ಮಾಡಿದರು. ತಹಶೀಲ್ದಾರ ಬಿ.ಎಸ್.ಕಡಕಭಾವಿ ಅವರು ಪ್ರತಿಭಟನಾ ನಿರತ ರೈತರ ಮನವೊಲಿಸಲು ಪ್ರಯತ್ನಿಸಿದರು. ತಮ್ಮ ಬೇಡಿಕೆ ಈಡೇರಿಸಲಾಗುತ್ತದೆ. ಪ್ರತಿಭಟನೆ ಕೈಬಿಡಲು ಮನವಿ ಮಾಡಿದರು. ನಂತರ ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ರೈತರಿಗೆ ಹೋರಾಟ ಕೈ ಬಿಡುವಂತೆ ಮನವೊಲಿಸಿದರಿಂದ ರೈತರು ಪ್ರತಿಭಟನೆಯಿಂದ ಹಿಂದೆ ಸರಿದರು. ಚಡಚಣ ತಹಶೀಲ್ದಾರ್ ಸಂಜಯ ಇಂಗಳೆ, ಶ್ರೀಮಂತ ಅಂಗಡಿ, ರೈತ ಮುಖಂಡರಾದ ಗುರುನಾಥ ಬಗಲಿ, ವಸಂತ ಭೈರಮಡಿ, ದಯಾನಂದ ಕುಮಸಳೆ, ಅಲೋಕ ಭೈರಮಡಿ, ಎಂ.ಎಚ್.ಪೂಜಾರಿ, ಖಾಜೀಸಾಹೇಬ ಗುರುನಾಳ, ದಸ್ತಗೀರ ವಾಲಿಕಾರ, ಅಣ್ಣಾರಾಯ ಶಿರನಾಳ, ಸತೀಶ ತಳಕೇರಿ, ದಾನೇಶ ತಳಕೇರಿ, ಸಿದ್ದು ಕೊಟಲಗಿ, ಶಿವಾನಂದ ಬಿರಾದಾರ, ಸತೀಶ ತೊಳನೂರ, ಸಂದೀಪ ಬೆಳ್ಳಿ, ದಯಾನಂದ ಕೊಳಿ ಸೇರಿದಂತೆ ಹಲವು ಗ್ರಾಮಗಳ ರೈತ ಮುಖಂಡರು ಇದ್ದರು.ಹಲವು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ
ನಾಗಠಾಣ ಮತಕ್ಷೇತ್ರದ ಚಡಚಣ ತಾಲೂಕಿನ ಹಲಸಂಗಿ, ಗೋಟ್ಯಾಳ, ಮಣಕಂಲಗಿ, ಏಳಗಿ, ಕೇರೂರ, ಉಮರಾಣಿ, ತದ್ದೇವಾಡಿ, ಕಂಚನಾಳ, ಲೋಣಿ ಬಿಕೆ, ಹಾವಿನಾಳ, ಹತ್ತಳ್ಳಿ, ರೇವತಗಾಂವ,ದಸೂರ, ಉಮರಜ, ನೀವರಗಿ ಸೇರಿದಂತೆ ಹಲವು ಗ್ರಾಮಗಳಿಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಪ್ರತಿ ಬಾರಿ ಅಧಿಕಾರಿಗಳು ಕೊನೆಯ ಭಾಗದವರಿಗೆ ನೀರು ಹರಿಸುತ್ತೇವೆ ಎಂದು ಹೇಳುತ್ತಾ ಬಂದಿದ್ದು, ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ಚಡಚಣ ತಾಲೂಕು ಮುಟ್ಟುವ ಮೊದಲೆ ನೀರಿನ ಹರಿವು ನಿಲ್ಲುತ್ತದೆ ಎಂದು ಹಲವು ರೈತರು ಆಕ್ರೋಶ ವ್ಯಕ್ತಪಡಿಸಿದರು.