ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ರೈತರಿಂದ ಪ್ರತಿಭಟನೆ

| Published : Jan 21 2025, 12:30 AM IST

ಸಾರಾಂಶ

ಕಂಪನಿಯೊಂದರ ಕಳಪೆ ಬಿತ್ತನೆ ಗೋವಿನ ಜೋಳದ ಬೀಜ ರೈತರ ಶ್ರಮವನ್ನು ಹಾಳು ಮಾಡಿದೆ. ಆರ್ಥಿಕ ಸಂಕಷ್ಟಕ್ಕೆ ನೂಕಿದೆ. ರೈತರಿಗೆ 6 ಕೆಜಿ ತೂಕ ಸಾಮರ್ಥ್ಯದ ಪಿವಿಸಿ ಪೈಪ್ ನೀಡುತ್ತಿಲ್ಲ, ರೈತರು ಆಯ್ಕೆ ಮಾಡಿಕೊಳ್ಳುವ ತುಂತುರು ನೀರಾವರಿ ಪೈಪ್ ಸೆಟ್ ವಿತರಿಸುತ್ತಿಲ್ಲ ಎಂದು ಕೃಷಿ ಇಲಾಖೆಗೆ ಮುತ್ತಿಗೆ ಹಾಕಿದ ರೈತ ಸಂಘ ಶೀಘ್ರ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದೆ.

ಹಾನಗಲ್ಲ: ಕಂಪನಿಯೊಂದರ ಕಳಪೆ ಬಿತ್ತನೆ ಗೋವಿನ ಜೋಳದ ಬೀಜ ರೈತರ ಶ್ರಮವನ್ನು ಹಾಳು ಮಾಡಿದೆ. ಆರ್ಥಿಕ ಸಂಕಷ್ಟಕ್ಕೆ ನೂಕಿದೆ. ರೈತರಿಗೆ 6 ಕೆಜಿ ತೂಕ ಸಾಮರ್ಥ್ಯದ ಪಿವಿಸಿ ಪೈಪ್ ನೀಡುತ್ತಿಲ್ಲ, ರೈತರು ಆಯ್ಕೆ ಮಾಡಿಕೊಳ್ಳುವ ತುಂತುರು ನೀರಾವರಿ ಪೈಪ್ ಸೆಟ್ ವಿತರಿಸುತ್ತಿಲ್ಲ ಎಂದು ಕೃಷಿ ಇಲಾಖೆಗೆ ಮುತ್ತಿಗೆ ಹಾಕಿದ ರೈತ ಸಂಘ ಶೀಘ್ರ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದೆ. ಸೋಮವಾರ ರೈತರೊಂದಿಗೆ ಕೃಷಿ ಇಲಾಖೆಗೆ ಮುತ್ತಿಗೆ ಹಾಕಿ ರೈತರ ಸಮಸ್ಯೆಗಳಿಗೆ ಇಲಾಖೆ ಸ್ಪಂದಿಸುತ್ತಿಲ್ಲ. ಬಮ್ಮನಹಳ್ಳಿ ಹೋಬಳಿಯ ಹಸನಾಬಾದಿ, ಗಡೆಗುಂಡಿಯಲ್ಲಾಪೂರ, ಬೈಲವಾಳ ಆರೆಗೊಪ್ಪ, ಹುಲ್ಲತ್ತಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿತ್ತಿದ ಒಂದು ಕಂಪನಿಯ ಬಿತ್ತನೆ ಬೀಜ ಬಿತ್ತಿದ್ದರೂ ಮೊಳಕೆಯಾಗಿಲ್ಲ. ಹಿಂಗಾರು ಹಂಗಾಮು ಮೀರುವ ಕಾಲಕ್ಕೆ ಬಂದಿದ್ದೇವೆ. ಬೀಜ, ಗೊಬ್ಬರ ಕೂಲಿ ಹಾಳಾಗಿದೆ. ಬರಬೇಕಾದ ಫಸಲು ಬರದಂತಾಗಿದೆ. ಇದಕ್ಕೆ ಇಲಾಖೆ ಕೂಡಲೆ ಕಳಪೆ ಗೋವಿನ ಜೋಳ ಬಿತ್ತನೆ ಬೀಜ ನೀಡಿದ ಕಂಪನಿ ಮೇಲೆ ಕ್ರಮ ಜರುಗಿಸಿ ರೈತರಿಗೆ ಇಳುವರಿ ಆಧಾರಿತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೃಷಿ ಇಲಾಖೆಯಿಂದ ನೀಡುತ್ತಿರುವ ಪಿವಿಸಿ ಪೈಪ್‌ಗಳು ರೈತರಿಗೆ ಅನುಕೂಲವಾಗುವಂತಿಲ್ಲ. 6 ಕೆಜಿ ಶಕ್ತಿ ಹೊಂದಿರುವ ಪೈಪ್‌ಗಳನ್ನು ನೀಡುವ ಬದಲು 4 ಕೆಜಿ ಒತ್ತಡದ ಪೈಪಗಳನ್ನು ನೀಡಲಾಗುತ್ತಿದೆ. ಇದು ರೈತರಿಗೆ ಬಾರದ ಪೈಪ ಆಗಿದೆ. ಇದನ್ನು ಬದಲಾಯಿಸಿ 6 ಕೆಜಿ ಒತ್ತಡದ ಪೈಪ್‌ ನೀಡಬೇಕು ಎಂದು ಒತ್ತಾಯಿಸಿದರು. ಇದರೊಂದಿಗೆ ತುಂತುರು ಹನಿ ನೀರಾವರಿಗೆ ಬೇಕಾಗುವ ಪೈಪ್ ಹಾಗೂ ಅದರ ಸಾಮಗ್ರಿಗಳನ್ನು ರೈತರು ತಾವು ಬಯಸಿದ ಕಂಪನಿಯಿಂದ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ರೈತರ ಮನವಿಗೆ ಉತ್ತರಿಸಿದ ಸಹಾಯಕ ಕೃಷಿ ಅಧಿಕಾರಿ ಮಾರುತಿ ಅಂಗಾರಗಟ್ಟಿ, ಕಳಪೆ ಎಂದು ರೈತರು ಹೇಳಿರುವ ಕಂಪನಿಯ ಬೀಜ ಬಿತ್ತಿದ ಜಮೀನಿಗೆ ಭೇಟಿ ನೀಡಲಾಗಿದೆ. ಅಲ್ಲದೆ ಆ ಕಂಪನಿಯವರನ್ನು ಕೂಡ ಕೃಷಿ ಜಮೀನಿಗೆ ಆಹ್ವಾನಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೆ ಕೂಡ ವರದಿ ಸಲ್ಲಿಸಲಾಗುವುದು. ಇದನ್ನು ಕೃಷಿ ವಿಶ್ವವಿದ್ಯಾಲಯದ ಮೂಲಕ ಪರಿಶೀಲನೆಗೂ ಅವಕಾಶವಿದೆ. ಈ ಎಲ್ಲ ಕ್ರಮಗಳನ್ನು ವಿಳಂಬವಿಲ್ಲದೆ ಜರುಗಿಸಿ ರೈತರಿಗೆ ನ್ಯಾಯ ಒದಗಿಸಿಕೊಡಲು ಇಲಾಖೆ ಬದ್ಧವಿದೆ. ಪಿವಿಸಿ ಪೈಪ್ ಹಾಗೂ ತುಂತುರು ನೀರಾವರಿ ಸಾಮಗ್ರಿ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿ ಕ್ರಮಕ್ಕೆ ಬರೆಯಲಾಗುವುದು ಎಂದರು. ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಪದಾಧಿಕಾರಿಗಳಾದ ರುದ್ರಪ್ಪ ಹಣ್ಣಿ, ಸೋಮಣ್ಣ ಜಡೆಗೊಂಡರ, ರಾಜೂ ದಾನಪ್ಪನವರ, ಎಂ.ಎಂ.ಬಡಗಿ, ಲೋಕೇಶ ಹುಳ್ಳಿ, ಷಣ್ಮುಖ ಅಂದಲಗಿ, ಶ್ರೀಧರ ಮಲಗುಂದ, ಶಂಭುಗೌಡ ಪಾಟೀಲ, ಪ್ರಶಾಂತಗೌಡ ಪಾಟೀಲ, ಬಸವರಾಜ ದಾನಪ್ಪನವರ, ವಿಷ್ಣು ಮಾಂಗ್ಲೇನವರ, ಮಹಾಲಿಂಗಪ್ಪ ಅಕ್ಕಿವಳ್ಳಿ ಮೊದಲಾದವರು ಇದ್ದರು.

ರೈತರ ಮನವಿಯನ್ನು ಪರಿಗಣಿಸಿ ಸೂಕ್ತ ಕ್ರಮ ಜರುಗಿಸುತ್ತೇವೆ. ಇದರಲ್ಲಿ ಯಾವುದೇ ರಾಜಿ ಅಥವಾ ಮುಲಾಜು ಇಲ್ಲ. ಬಿತ್ತನೆ ಕ್ಷೇತ್ರವನ್ನು ಪರಿಶೀಲಿಸಿ ಅದರ ವರದಿ ಆಧರಿಸಿ ಸೂಕ್ತ ಕ್ರಮಕ್ಕೆ ಮೇಲಧಿಕಾರಿಗಳಿಗೆ ಬರೆಯಲಾಗುತ್ತದೆ. ಅಲ್ಲದೆ ಯಾವುದೇ ವಿಳಂಬಕ್ಕೆ ಅವಕಾಶ ನೀಡುವುದಿಲ್ಲ ಹಾನಗಲ್ಲ ಸಹಾಯಕ ಕೃಷಿ ನಿರ್ದೇಶನಕ ಮಾರುತಿ ಅಂಗಾರಗಟ್ಟಿ ಹೇಳಿದರು.