ಗ್ರಾಮೀಣ ಭಾಗಕ್ಕೆ ವಿದ್ಯುತ್ ಕಡಿತ, ರೊಚ್ಚಿಗೆದ್ದ ರೈತರು

| Published : Oct 18 2023, 01:00 AM IST

ಗ್ರಾಮೀಣ ಭಾಗಕ್ಕೆ ವಿದ್ಯುತ್ ಕಡಿತ, ರೊಚ್ಚಿಗೆದ್ದ ರೈತರು
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಭಾಗಕ್ಕೆ ವಿದ್ಯುತ್ ಕಡಿತ, ರೊಚ್ಚಿಗೆದ್ದ ರೈತರುವಿಷ ಕುಡಿದು ರೈತ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಗೆ ದಾಖಲು । 10 ತಾಸು ವಿದ್ಯುತ್‌ ಭರವಸೆ ನಂತರ ಹೋರಾಟ ವಾಪಸ್ಹೋರಾಟದಲ್ಲಿ ಒಣಗಿದ ಭತ್ತ, ಖಾಲಿ ತಟ್ಟೆ, ವಿಷಯ ಬಾಟಲ್‌ ಪ್ರದರ್ಶನ । ಜೆಸ್ಕಾಂ ಕಚೇರಿ ಮುತ್ತಿಗೆ, ರಸ್ತೆ ಸಂಚಾರ ತಡೆ
ವಿಷ ಕುಡಿದು ರೈತ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಗೆ ದಾಖಲು । 10 ತಾಸು ವಿದ್ಯುತ್‌ ಭರವಸೆ ನಂತರ ಹೋರಾಟ ವಾಪಸ್ ಹೋರಾಟದಲ್ಲಿ ಒಣಗಿದ ಭತ್ತ, ಖಾಲಿ ತಟ್ಟೆ, ವಿಷಯ ಬಾಟಲ್‌ ಪ್ರದರ್ಶನ । ಜೆಸ್ಕಾಂ ಕಚೇರಿ ಮುತ್ತಿಗೆ, ರಸ್ತೆ ಸಂಚಾರ ತಡೆ ಕನ್ನಡಪ್ರಭ ವಾರ್ತೆ ರಾಯಚೂರು ಗ್ರಾಮೀಣ ಭಾಗಕ್ಕೆ ವಿದ್ಯುತ್‌ ಸರಬರಾಜಿನಲ್ಲಿ ತೀವ್ರ ಕಡಿತಗೊಳಿಸಿದ ಹಿನ್ನೆಲೆ ಆಕ್ರೋಶಗೊಂಡ ರೈತರು ಸಂಚಾರ ತಡೆ ಮಾಡಿ, ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು. ಇದೇ ವೇಳೆ ರೈತನೊಬ್ಬ ವಿಷವನ್ನು ಕುಡಿದ ಘಟನೆ ನಡೆಯಿತು. ಸಂಜೆ 4 ಗಂಟೆ ತನಕ ಹೋರಾಟ ನಡೆಸಿದ ರೈತರು 10 ತಾಸು ವಿದ್ಯುತ್‌ ಕೊಡುವುದಾಗಿ ಜೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್‌ ಪಡೆದರು. ಸ್ಥಳೀಯ ಜೆಸ್ಕಾಂ ಕಚೇರಿ ಮುಂದೆ ಮಂಗಳವಾರ ಸೇರಿದ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು, ರೈತರು ನೀರಿಲ್ಲದೇ ಬಾಡಿದ ಭತ್ತದ ಬೆಳೆ, ಖಾಲಿ ತಟ್ಟೆ ಹಾಗೂ ವಿಷದ ಬಾಟಲಿ ಪ್ರದರ್ಶಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ಶಾಸಕ ಡಾ.ಶಿವರಾಜ ಪಾಟೀಲ್‌ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಹೋರಾಟದಲ್ಲಿ ಭಾಗವಹಿಸಿ ಬೆಂಬಲಿಸಿದರು. ಜೆಸ್ಕಾಂ ಕಚೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಅಧಿಕಾರಿಗಳು ಕರೆಂಟ್‌ ನೀಡುವುದರ ಬಗ್ಗೆ ಯಾವುದೇ ಖಚಿತ ಭರವಸೆ ನೀಡದೇ ಜಾರಿಕೊಳ್ಳಲು ಮುಂದಾದರು. ಇದರಿಂದಾಗಿ ರೊಚ್ಚಿಗೆದ್ದ ರೈತರು ಕಚೇರಿ ಮುಂಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ವಾಹನಗಳನ್ನು ನಿಲ್ಲಿಸಿ, ಸಾರಿಗೆ ಬಸ್‌ ಮುಂದೆ ಮಲಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಎಚ್ಚೆತ್ತ ಪೊಲೀಸರು ರೈತರನ್ನು ಸಮಾಧಾನ ಪಡಿಸಿದರು. ಈ ವೇಳೆ ಹೋರಾಟ ನಿರತ ರೈತರ ಬಳಿಗೆ ಆಗಮಿಸಿದ ಜೆಸ್ಕಾಂ ಎಸ್‌ಇ ಚಂದ್ರಶೇಖರ ದೇಸಾಯಿ ವಿದ್ಯುತ್‌ ಸರಬರಾಜು ವಿಚಾರವಾಗಿ ಸಂಜೆ 4 ಗಂಟೆಗೆ ಸಭೆ ನಡೆಸಿ ನಿರ್ಧರಿಸುವುದಾಗಿ ತಿಳಿಸಿದರು. ಇದಕ್ಕೂ ಒಪ್ಪದ ರೈತರು ಜೆಸ್ಕಾಂ ಗೇಟನ್ನು ಬಲವಂತವಾಗಿ ತೆರೆದು ಕಚೇರಿ ಆವರಣದೊಳಗೆ ಪ್ರವೇಶಿಸಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಇದನ್ನು ಸಹ ಪೊಲೀಸರು ತಡೆದಿದ್ದರಿಂದ ರೈತರು ಗೇಟಿನ ಮುಂದೆಯೇ ಕುಳಿತು ಬೇಡಿಕೆ ಈಡೇರಿಸಬೇಕು ಎಂದು ಪಟ್ಟು ಹಿಡಿದರು. ತಕ್ಷಣ ಗ್ರಾಮೀಣ ಭಾಗಕ್ಕೆ ಹಿಂದಿನಂತೆ 12 ತಾಸು ವಿದ್ಯುತ್‌ ನಿಡಬೇಕು, ಜಮೀನುಗಳಿಗೆ ಸಮರ್ಪಕ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಆರ್ಟಿಪಿಎಸ್‌, ವೈಟಿಪಿಎಸ್‌ಗಳನ್ನು ಹೊಂದಿರುವ ರಾಯಚೂರು ಗ್ರಾಮೀಣ ಭಾಗದ ಜನರಿಗೆ 12 ತಾಸು ಕರೆಂಟು ನೀಡಲಾಗುತ್ತಿತ್ತು, ಇದೀಗ ಕನಿಷ್ಠ 5 ತಾಸು ಸಹ ವಿದ್ಯುತ್‌ ಸರಬರಾಜು ಆಗುತ್ತಿಲ್ಲ. ಇದರಿಂದಾಗಿ ರೈತರು ಬೆಳೆದ ಭತ್ತ, ಮೆಣಸಿನಕಾಯಿ, ಜೋಳ, ಹತ್ತಿ, ತೋಟಗಾರಿಕೆ ಹಾಗೂ ಕಾಯಿಪಲ್ಲೆ ಬೆಳೆಗಳು ಒಣಗಲಾರಂಭಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದು ಕಡೆ ಮಳೆಯಿಲ್ಲ ಮತ್ತೊಂದು ಕಡೆ ಕಾಲುವೆಗಳಿಗೆ ನೀರಿಲ್ಲ. ಪಂಪ್‌ಸೆಟ್‌ಮುಖಾಂತರ ನೀರು ಹರಿಸಬೇಕು ಎಂದರೆ ಕರೆಂಟ್‌ ಕಣ್ಣಾಮುಚ್ಚಾಲೆಯಿಂದಾಗಿ ಬೆಳೆಗಳಿಗೆ ನೀರು ಹರಿಸುವುದೇ ಎಲ್ಲಿಲ್ಲದ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ಅಳಲು ತೋಡಿಕೊಂಡರು. ಹೋರಾಟದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್‌, ಬಿಜೆಪಿ ಮುಖಂಡರಾದ ತಿಮ್ಮಪ್ಪ ಫಿರಂಗಿ, ಶ್ರೀನಿವಾಸ ರೆಡ್ಡಿ, ತಿಮ್ಮಪ್ಪ ನಾಡಗೌಡ, ರೈತ ಮುಖಂಡರಾದ ಎನ್‌.ಲಕ್ಷ್ಮಣಗೌಡ ಕಡಗಂದೊಡ್ಡಿ, ಜಂಬಣ್ಣ, ಹುಲಿಗೆಪ್ಪ ಜಾಲಿಬೆಂಚಿ, ಅನಿತಾ, ಭೀಮನಗೌಡ ಸೇರಿದಂತೆ ಹತ್ತಾರು ಹಳ್ಳಿಗಳಿಂದ ಆಗಮಿಸಿದ್ದ ರೈತರು ಭಾಗವಹಿಸಿದ್ದರು. - - - 17ಕೆಪಿಆರ್‌ಸಿಆರ್01: ರಾಯಚೂರಿನ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರೈತರು ವಿದ್ಯುತ್‌ನೀಡುವಂತೆ ಬಾಡಿದ ಭತ್ತದ ಬೆಳೆ, ಖಾಲಿ ತಟ್ಟೆ,ವಿಷಯ ಬಾಟಲಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. - - - 17ಕೆಪಿಆರ್‌ಸಿಆರ್‌02ಮತ್ತು03: ರಾಯಚೂರು ನಗರದ ಜೆಸ್ಕಾಂ ಕಚೇರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಸಂಚಾರ ತಡೆ ನಡೆಸಿ ನಂತರ ಕಚೇರಿಗೆ ರೈತರು ಮುತ್ತಿಗೆ ಹಾಕಿದರು. 17ಕೆಪಿಆರ್‌ಸಿಆರ್‌04: ರಾಯಚೂರು ತಾಲೂಕಿನ ಬಾಪೂರ ಗ್ರಾಮದ ರೈತ ತಿಮ್ಮಪ್ಪ ವಿಷ ಕುಡಿಯುತ್ತಿರುವುದು.