ವಿಶ್ವ ರೈತ ದಿನ ಪ್ರಯುಕ್ತ ರೈತರಿಂದ ಹೋರಾಟದ ಸ್ಮರಣೆ

| Published : Dec 24 2023, 01:45 AM IST

ಸಾರಾಂಶ

ವಿಶ್ವ ರೈತ ದಿನದ ಅಂಗವಾಗಿ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ರೈತಸಂಘದ ಕಾರ್ಯಕರ್ತರು ಹಸಿರು ಬೋರ್ಡ್‌ಗೆ ಪೂಜೆ ಸಲ್ಲಿಸಿ ರೈತ ಹೋರಾಟದ ಸ್ಮರಣೆ ಮಾಡಿದರು.

ಬೂಕನಕೆರೆ ನಾಗರಾಜು ನೇತೃತ್ವದಲ್ಲಿ ರೈತ ದಿನಾಚರಣೆ । ಹಸಿರು ಫಲಕಕ್ಕೆ ಪೂಜೆ ಸಲ್ಲಿಸಿದ ರೈತ ಕಾರ್ಯಕರ್ತರು

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿಶ್ವ ರೈತ ದಿನದ ಅಂಗವಾಗಿ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ರೈತಸಂಘದ ಕಾರ್ಯಕರ್ತರು ಹಸಿರು ಬೋರ್ಡ್‌ಗೆ ಪೂಜೆ ಸಲ್ಲಿಸಿ ರೈತ ಹೋರಾಟದ ಸ್ಮರಣೆ ಮಾಡಿದರು.

ತಾಲೂಕು ರೈತಸಂಘದ ಪ್ರಧಾನ ಕಾರ್ಯದರ್ಶಿ ಬೂಕನಕೆರೆ ನಾಗರಾಜು ನೇತೃತ್ವದಲ್ಲಿ ಹಸಿರು ಫಲಕಕ್ಕೆ ಪೂಜೆ ಸಲ್ಲಿಸಿದ ರೈತ ಕಾರ್ಯಕರ್ತರು ಸಿಹಿ ವಿತರಿಸಿ ರೈತ ಹೋರಾಟದ ಘೋಷಣೆಗಳನ್ನು ಕೂಗಿದರು.

ಮುಖಂಡ ಬೂಕನಕೆರೆ ನಾಗರಾಜು ಮಾತನಾಡಿ, ಕರ್ನಾಟಕದಲ್ಲಿನ ರೈತ ಹೋರಾಟದ ಹೆಜ್ಜೆಗಳನ್ನು ಸ್ಮರಿಸಿದರು. ರೈತ ಸಮುದಾಯ ಪಕ್ಷಾತೀತವಾಗಿ ಸಂಘಟಿತರಾಗದಿದ್ದರೆ ಮುಂದಿನ ದಿನಗಳಲ್ಲಿ ರೈತರು ಬಂಡವಾಳಶಾಹಿಗಳ ಮತ್ತು ಕಾರ್ಪೋರೇಟ್ ವಲಯದ ನವ ಭೂ ಮಾಲೀಕರ ಗುಲಾಮರಾಗುವ ಸನ್ನಿವೇಶ ಎದುರಾಗಲಿದೆ ಎಂದು ಎಚ್ಚರಿಸಿದರು.

ರೈತರಿಗೆ ಯಾವುದೇ ಜಾತಿ ಮತ್ತು ಧರ್ಮವಿಲ್ಲ. ನೇಗಿಲು ಹಿಡಿಯುವ ಎಲ್ಲಾ ಕೈಗಳು ಬಲಗೊಳ್ಳಬೇಕು ಎನ್ನುವ ಆಶಯದೊಂದಿಗೆ ರೈತ ಚಳುವಳಿ ಸಾಗುತ್ತಿದೆ. ರಾಜ್ಯದಲ್ಲಿ ಲೇವಿ ಪದ್ಧತಿಯನ್ನು ರದ್ದುಗೊಳಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ರೈತರ ಸಾಲ ಮನ್ನಾ ಮಾಡಿಸಿದೆ ಎಂದರು.

ಕಂದಾಯ ಪಾವತಿಸದ ಕಾರಣ ರೈತರ ಭೂಮಿಯನ್ನು ಬೀಳುಗೆಡುವದಂತೆ ಮಾಡಿದ್ದು ರೈತ ಸಂಘದ ಹೋರಾಟ. ಇಂದಿನ ಎಲ್ಲಾ ರಾಜಕೀಯ ಪಕ್ಷಗಳು ನಾವು ರೈತರ ಪರ ಎಂದು ಹೇಳುತ್ತಲೇ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ರೈತರ ಬದುಕನ್ನು ಕಸಿದುಕೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತ ನಾಯಕರಾದ ದಿ.ಪ್ರೊ.ಎಂ.ಡಿ. ನಂಜುಂಡಸ್ವಾಮಿ ಮತ್ತು ಕೆ.ಎಸ್. ಪುಟ್ಟಣ್ಣಯ್ಯ ಹಾಕಿ ಕೊಟ್ಟಿರುವ ಹೋರಾಟದ ಮಾರ್ಗದಲ್ಲಿ ನಾವೆಲ್ಲರೂ ರೈತ ಚಳವಳಿಯ ಪುನಶ್ಚೇತನಕ್ಕೆ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ಗ್ರಾಮೀಣ ಭಾಗದ ಯುವ ಸಮುದಾಯ ರಾಜಕೀಯ ಪಕ್ಷಗಳ ಹಿಂಬಾಲಕರಾಗಿ ತಿರುಗುವುದನ್ನು ನಿಲ್ಲಿಸಿ, ಹಸಿರು ಚಳವಳಿಗೆ ಪ್ರವೇಶಿಸಬೇಕು. ರೈತ ಸಂಘವನ್ನು ಕಟ್ಟುವ ಮೂಲಕ ರೈತ ಸಮುದಾಯದ ಸ್ವಾಭಿಮಾನವನ್ನು ಎತ್ತಿ ಹಿಡಿಯುವಂತೆ ಕರೆ ನೀಡಿದರು.

ರೈತ ಕಾರ್ಯಕರ್ತರಾದ ಬಿ.ಕೆ. ದಿನೇಶ್, ಮಂಜೇಗೌಡ, ಯೋಗೇಶ್, ವೇಣು ಮತ್ತಿತರರಿದ್ದರು.

----

ಬೂಕನಕೆರೆ ಗ್ರಾಮದಲ್ಲಿ ವಿಶ್ವ ರೈತ ದಿನದ ಅಂಗವಾಗಿ ರೈತಸಂಘದ ಕಾರ್ಯಕರ್ತರು ಹಸಿರು ಬೋರ್ಡ್‌ಗೆ ಪೂಜೆ ಸಲ್ಲಿಸಿದರು.