ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಹಂಗಳಪುರ ಗ್ರಾಮದ ಬಳಿ ರೈತರೊಬ್ಬರ ಕಬ್ಬಿನ ತೋಟದಲ್ಲಿ ಚಿರತೆ ಮರಿಯೊಂದು ಕಾಣಿಸಿಕೊಂಡಿದ್ದು, ಗ್ರಾಮದ ರೈತರು ರಕ್ಷಿಸಿ ಅರಣ್ಯ ಇಲಾಖೆಗೆ ನೀಡಿದ್ದಾರೆ.ಗ್ರಾಮದ ಸಿದ್ದಲಿಂಗಪ್ಪ ಅವರ ಕಬ್ಬಿನ ತೋಟದಲ್ಲಿ ಕಬ್ಬು ಕಟಾವು ಮಾಡುವ ಸಮಯದಲ್ಲಿ ಚಿರತೆ ಮರಿ ಕಂಡಿದ್ದು, ರೈತರು ಹಾಗೂ ಕಾರ್ಮಿಕರು ಮರಿಯನ್ನು ಹಿಡಿದು ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಚಿರತೆ ಮರಿಯನ್ನು ಗುಂಡ್ಲುಪೇಟೆ ಪಶು ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ.
ಚಿರತೆ ಮರಿ ರಕ್ಷಿಸಿದ ರೈತರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಚಿರತೆ ಮರಿಗಳ ಕಳೆದ ವರ್ಷದಲ್ಲೂ ನಮ್ಮೂರಿನ ಕಬ್ಬಿನ ತೋಟದಲ್ಲೇ ಸಿಕ್ಕಿವೆ. ಆದರೂ ನೀವು ಚಿರತೆ ಸೆರೆ ಹಿಡಿದಿಲ್ಲ ಎಂದು ಆರೋಪಿಸಿದರು.ಕೂಡಲೇ ಚಿರತೆ ಹಿಡಿಯಬೇಕು ಹಾಗೂ ಬೋನು ಇರಿಸಬೇಕು ಎಂದು ರೈತರು ಆಗ್ರಹಿಸಿದಾಗ ಆರ್‌ಎಫ್ ಒ ಶಿವಕುಮಾರ್ ಚಿರತೆ ಮರಿ ಸಿಕ್ಕದ ಕಬ್ಬಿನ ತೋಟದಲ್ಲಿ ಬೋನು ಇರಿಸಿದ್ದು, ಸಿಬ್ಬಂದಿ ಕೂಂಬಿಂಗ್ ನಡೆಸುವುದಾಗಿ ಭರವಸೆ ನೀಡಿದ್ದಾರೆ.ಬಾಕ್ಸ್
ಬೇರ್ಪಟ್ಟ ತಾಯಿ ಜೊತೆ ಮರಿ ಚಿರತೆ ಸೇರಿಸಲು ಪ್ರಯತ್ನ:ಗುಂಡ್ಲುಪೇಟೆ ತಾಲೂಕಿನ ಹಂಗಳಪುರ ಗ್ರಾಮದ ಬಳಿ ರೈತರೊಬ್ಬರ ಕಬ್ಬಿನ ತೋಟದಲ್ಲಿ ತಾಯಿಯಿಂದ ಬೇರ್ಪಟ್ಟ ಚಿರತೆ ಮರಿ ಮತ್ತೆ ತಾಯಿ ಜೊತೆ ಸೇರಿಸಲು ಭಾನುವಾರ ಸಂಜೆಯೇ ಬೋನಿಗೆ ಚಿರತೆ ಮರಿ ಇರಿಸಿ ಕಾದು ನೋಡುತ್ತೇವೆ ಎಂದು ಆರ್‌ಎಫ್‌ಒ ಶಿವಕುಮಾರ್ ತಿಳಿಸಿದರು. ಕನ್ನಡಪ್ರಭದೊಂದಿಗೆ ಮಾತನಾಡಿ, ತಾಯಿ ಚಿರತೆ ಇನ್ನಿತರ ಮರಿಗಳನ್ನು ಬೇರೆಡೆ ಸ್ಥಳಾಂತರಿಸಿದೆ. ಈ ಮರಿ ಸ್ಥಳಾಂತರಿಸುವ ಮುನ್ನ ಬೇರ್ಪಟ್ಟಿರುವ ಸಾಧ್ಯತೆ ಇರುವ ಕಾರಣ ಭಾನುವಾರ ಸಂಜೆ ಮತ್ತೆ ಚಿರತೆ ಮರಿ ಇಟ್ಟು ಕ್ಯಾಮೆರಾ ಅಳವಡಿಸಲಾಗುವುದು. ಇದು ಗಂಡು ಮರಿಯಾಗಿದೆ. ಅಲ್ಲದೆ ಇನ್ನೂ ಒಂದು ತಿಂಗಳು ಆಗಿಲ್ಲ. ಹಾಗಾಗಿ ತಾಯಿ ಚಿರತೆ ಜೊತೆ ಸೇರಿಸಲು ಅರಣ್ಯ ಇಲಾಖೆ ಪ್ರಯತ್ನ ನಡೆಸುತ್ತಿದೆ ಎಂದರು.
ಬದುಕುಳಿದ ಮರಿ ಚಿರತೆ, ತಪ್ಪಿದ ಅನಾಹುತ:ಹಂಗಳಪುರ ಗ್ರಾಮದ ಬಳಿ ಕಬ್ಬಿನ ತೋಟದಲ್ಲಿ ಕಬ್ಬು ಕಟಾವು ಯಂತ್ರದಿಂದ ಮಾಡಿಸಲಾಗುತ್ತಿತ್ತು. ಸಣ್ಣ ಮರಿ ಏನಾದರೂ ಯಂತ್ರದ ಬಾಯಿಗೆ ಸಿಲುಕಿದ್ದರೆ ಚಿರತೆ ಮರಿ ಬಲಿಯಾಗುತ್ತಿತ್ತು. ಸದ್ಯ ಚಿರತೆ ಮರಿ ಕಬ್ಬು ಕಟಾವು ಮಾಡುವ ಯಂತ್ರದ ಬಳಿಯಿದ್ದ ಟ್ರ್ಯಾಕ್ಟರ್‌ಗೆ ಕಬ್ಬು ತುಂಬುತ್ತಿದ್ದ ಕಾರ್ಮಿಕ ನೋಡಿದ ಕಾರಣ ಚಿರತೆ ಮರಿ ಬಲಿಯಾಗುವುದು ತಪ್ಪಿದೆ ಎಂದು ಹಂಗಳಪುರದ ರೈತ ಶಿವಕುಮಾರ್ ಹೇಳಿದ್ದಾರೆ.