ಸಾರಾಂಶ
ಯೂರಿಯಾಕ್ಕೆ ಕೃತಕ ಅಭಾವ ಸೃಷ್ಟಿ ಮಾಡಿದರೆ ಕ್ರಮ: ಸುನೀಲ್ ನಾಯ್ಕ
ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿಪಟ್ಟಣದಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ನಾನಾ ಗ್ರಾಮಗಳ ರೈತರು ಶನಿವಾರ ಅಂಗಡಿಗಳ ಮುಂದೆ ಜಮಾಯಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು.ತಾಲೂಕಿನ ಆನೇಕಲ್ ತಾಂಡಾ, ಕಿತ್ನೂರು, ತಂಬ್ರಹಳ್ಳಿ, ಮಾದೂರು, ಚಿಲಗೋಡು, ಮೋರಿಗೇರಿ, ಬನ್ನಿಗೋಳ, ಬಾಚಿಗೊಂಡನಹಳ್ಳಿ, ಹನಸಿ, ವಟ್ಟಮ್ಮನಹಳ್ಳಿ, ವಲ್ಲಬಾಪುರ, ಸೇರಿ ನಾನಾ ಗ್ರಾಮಗಳ ರೈತರು ಅಂಗಡಿಗಳ ಮುಂದೆ ಸರತಿಸಾಲಿನಲ್ಲಿದ್ದರು. ಅಂಗಡಿ ಬಾಗಿಲು ತೆರಯುವ ಮುನ್ನವೇ ೫೦೦ಕ್ಕೂ ಹೆಚ್ಚು ಜನರು ಏಕಕಾಲಕ್ಕೆ ಆಗಮಿಸಿ ಸತತ ನಾಲ್ಕು ಗಂಟೆ ಸಾಲುಗಟ್ಟಿದ್ದರು. ಅಂಗಡಿ ಬಾಗಿಲು ತೆರೆಯುತ್ತಿದ್ದಂತೆ ಏಕಕಾಲಕ್ಕೆ ನೂರಾರು ರೈತರು ನೂಕು ನುಗ್ಗಲು ನಡೆಸಿದರು. ಕೆಲ ರೈತರು ಪರಸ್ಪರ ವಾಗ್ವಾದಕ್ಕಿಳಿದರು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಇದೇ ವೇಳೆ ರೈತರು ಸಮರ್ಪಕ ಗೊಬ್ಬರ ಪೂರೈಸುವಂತೆ ಪಟ್ಟು ಹಿಡಿದರು. ಕೆಲ ಕಾಲ ಗದ್ದಲದ ವಾತಾವರಣ ಏರ್ಪಟ್ಟಿತ್ತು. ಪೊಲೀಸರು ಪ್ರತಿ ರೈತರಿಗೆ ತಲಾ ಒಂದು ಚೀಲ ಗೊಬ್ಬರ ಒದಗಿಸಿ ಸಮಾಧಾನ ಪಡಿಸಿದರು.ಸ್ಥಳಕ್ಕೆ ಸಹಾಯಕ ಕೃಷಿ ನಿರ್ದೇಶಕ ಸುನೀಲ್ ನಾಯ್ಕ ಭೇಟಿ ನೀಡಿ, ಏಕಕಾಲಕ್ಕೆ ಮಳೆಯಾದ ಹಿನ್ನೆಲೆ ೫ ಸಾವಿರ ಟನ್‌ನಷ್ಟು ಯೂರಿಯಾ ಪೂರೈಕೆ ಮಾಡಲಾಗಿದೆ. ರೈತರು ನ್ಯಾನೋ ಯೂರಿಯಾ ಬಳಕೆಗೆ ಮುಂದಾಗಬೇಕು. ಈ ಕುರಿತಂತೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲೆ ೫೦ ಟನ್‌ನಷ್ಟು ಗೊಬ್ಬರ ತಾಲೂಕಿಗೆ ರವಾನೆಯಾಗಲಿದೆ. ರೈತರು ಅನಗತ್ಯವಾಗಿ ಆತಂಕಗೊಳ್ಳುವುದು ಬೇಡ. ಡ್ರೋನ್ ಮೂಲಕ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗುವುದು. ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿಯೂ ಅಧಿಕಾರಿಗಳು ಅಂಗಡಿಗಳ ಭೇಟಿ ನೀಡಿ ಮಾಹಿತಿ ಪರಿಶೀಲನೆ ನಡೆಸಿದ್ದಾರೆ ಎಂದರು.