ಸಾರಾಂಶ
ಹಾವೇರಿ: ಬೆಳೆವಿಮೆ ಪರಿಹಾರ, ಬೇಡ್ತಿ-ವರದಾ ನದಿ ಜೋಡಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಪ್ರತಿಭಟನೆ 9 ದಿನಕ್ಕೆ ಕಾಲಿಟ್ಟಿದೆ.
ಶನಿವಾರ ಸವಣೂರು ತಾಲೂಕು ರೈತ ಘಟಕ ಪ್ರತಿಭಟನೆಯ ನೇತೃತ್ವ ವಹಿಸಿತ್ತು. ಈ ಧರಣಿ ಸತ್ಯಾಗ್ರಹಕ್ಕೆ ಕ್ರಷರ್ ಮಾಲೀಕರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರ ಅನ್ನದಾತರ ಕುರಿತು ನಿರ್ಲಕ್ಷ್ಯ ತೋರುತ್ತಿರುವುದು ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕ್ರಷರ್ ಮಾಲೀಕರ ಸಂಘಟನೆಯ ಕರಬಸಪ್ಪ ಬಳ್ಳಾರಿ ಮಾತನಾಡಿ, ರೈತರಿಗೆ ಬಹು ಮುಖ್ಯವಾಗಿ ನಮ್ಮ ಹೊಲ ನಮ್ಮ ದಾರಿ ಅತ್ಯವಶ್ಯಕವಾಗಿದೆ. ಆದರೆ, ಇದರ ಬಗ್ಗೆ ಸರ್ಕಾರಗಳು ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಇದರಿಂದ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ. ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು. ಆಳುವ ಸರ್ಕಾರಗಳು ರೈತರನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ದೇಶಕ್ಕೆ ಆಪತ್ತು ಕಾದಿದೆ ಎಂದು ಎಚ್ಚರಿಸಿದರು.
ಸರ್ಕಾರಗಳು ನಿರುಪಯುಕ್ತ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ. ಇದರಿಂದ ರೈತ ಕುಲಕ್ಕೆ, ರೈತ ಕೂಲಿ ಕಾರ್ಮಿಕರಿಗೆ ತುಂಬಲಾರದ ನಷ್ಟ್ಟ ಆಗುತ್ತಿದೆ. ಕೃಷಿ ಕೆಲಸ ಕಾರ್ಯಗಳಿಗೆ ಕಾರ್ಮಿಕರ ಕೊರತೆ ಬೃಹದಾಕಾರವಾಗಿದೆ. ನಿರಂತರವಾಗಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ಎಲ್ಲ ಅನ್ನದಾತರಿಗೆ ಯಾವತ್ತೂ ನಮ್ಮ ಹಾವೇರಿ ಜಿಲ್ಲೆಯ ಕ್ರಷರ್ ಮಾಲಿಕರ ಸಂಘದಿಂದ ನಿರಂತರವಾಗಿ ಎಲ್ಲ ರೀತಿಯ ಸಹಾಯ ಮಾಡಲು ಸಿದ್ಧ ಎಂದು ಘೋಷಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೆರ ಮಾತನಾಡಿ, ರಾಜ್ಯ ಸರ್ಕಾರ ಬೆಳೆ ವಿಮೆ ಹಂಚಿಕೆಯಲ್ಲಿಯೂ ತಾರತಮ್ಯ ನಡೆಸುತ್ತಿದೆ. ನಮ್ಮ ರೈತರಿಂದ ಕಟ್ಟಿಸಿಕೊಂಡ ವಿಮೆಯ ಹಣವನ್ನು ನೈಜವಾಗಿ ಲೆಕ್ಕ ಮಾಡಿ ನಷ್ಟವಾದ ರೈತರಿಗೆ ವಿತರಿಸಲೂ ಸಹ ಮೀನಾಮೇಷ ಎಣಿಸುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತ ಸಂಬಂಧಿಸಿದ ಕಂಪನಿಗಳ ಜೊತೆ ತುರ್ತಾಗಿ ಚರ್ಚಿಸಿ ರೈತರಿಗೆ ಬರಬೇಕಾದ ವಿಮೆ ಮೊತ್ತ ಪಾವತಿಸಲು ಸೂಚನೆ ನೀಡಬೇಕು. ಇನ್ನು ರಾಜ್ಯ ಸರ್ಕಾರದ ಚರ್ಮ ದಪ್ಪ ಆಗಿದ್ದು, ರೈತರ ಅಳಲು ಆಲಿಸುತ್ತಿಲ್ಲ ಎಂದು ಹರಿಹಾಯ್ದರು.
ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲೆಯ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ತಾರತಮ್ಯ ಆಗಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಬೆಳೆವಿಮೆ ಹಣ ಹಾಕದೇ ಬೆಳೆವಿಮೆ ಕಂಪನಿಯವರು ರೈತರಿಗೆ ಅನ್ಯಾಯ ಮಾಡಿದ್ದು, ಕೂಡಲೇ ಜಿಲ್ಲಾಡಳಿತ ಬೆಳೆ ವಿಮೆ ತುಂಬಿಸಿಕೊಂಡ ಕಂಪನಿಯವರನ್ನು ಕರೆಸಿ ಲೆಕ್ಕಾಚಾರ ಮಾಡಿಸಿ, ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಎಚ್. ಮುಲ್ಲಾ, ಮುತ್ತಪ್ಪ ಗುಡಗೇರಿ, ಚನ್ನಪ್ಪ ಮರಡೂರ, ಶಿವಯೋಗಿ ಹೊಸಗೌಡ್ರ, ಶಿವಬಸಪ್ಪ ಗೋವಿ, ಸುರೇಶ ಚಲವಾದಿ, ಗುಡ್ಡನಗೌಡ ಪ್ಯಾಟಿಗೌಡ್ರ, ಮರಿಗೌಡ್ರ ಪಾಟೀಲ, ಸೋಮಣ್ಣ ಜಡೆಗೊಂಡಣ್ಣನವರ, ರವಿ ಅಂಗಡಿ, ನೂರಅಹಮದ್ ಮುಲ್ಲಾ, ಮಲ್ಲೇಶ ಬಾರ್ಕಿ, ಪರುಶು ಗದಿಗೆಣ್ಣನವರ, ಸಿದ್ದಪ್ಪ ಕ್ಯಾಲಕೊಂಡ, ಲಕ್ಷಣ ಕದಂ, ಅಬ್ದುಲ್‌ಖಾದರ್ ಬುಡಂಜಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.