ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ವರ್ಷ ಪೂರ್ತಿ ಕಷ್ಟಪಟ್ಟು ದುಡಿಯುವ ರೈತರು ತಾವು ಬೆಳೆಯುವ ದವಸ ಧಾನ್ಯಗಳಿಗೆ ಒಂದಷ್ಟು ಆದಾಯ ನೋಡುವುದೇ ಸುಗ್ಗಿ ಸಂಭ್ರಮ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ದೇವಲಾಪುರದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಉದ್ಘಾಟಿಸಿ ಮಾತನಾಡಿ, ನಾಡಿನ ರೈತರಿಗೆ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಇತಿಹಾಸವನ್ನು ಮರೆತರೆ ಜೀವನ ನಡೆಸಲು ಬಹಳ ಕಷ್ಟವಾಗುತ್ತದೆ ಎಂದರು.
ಸಂಕ್ರಾಂತಿ ಹಬ್ಬದ ಮಹತ್ವವನ್ನು ಮುಂದಿನ ಪೀಳಿಗೆಗೆ ಅರ್ಥೈಸುವ ಉದ್ದೇಶದಿಂದ ರೈತರ ಜೊತೆಗೂಡಿ ಸಂಕ್ರಾಂತಿ ಸಂಭ್ರಮ ಆಚರಿಸಬೇಕೆಂಬ ಉದ್ದೇಶದಿಂದ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ಸಹ ಜಾತಿ ಬೇಧ ಮರೆತು ಬಹಳ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬವೆಂದರೆ ಸಂಕ್ರಾಂತಿ ಸುಗ್ಗಿ ಹಬ್ಬ. ಹಳ್ಳಿಗಾಡಿನ ರೈತರು ತಾವು ಬೆಳೆದ ಭತ್ತ, ರಾಗಿ, ಸೇರಿದಂತೆ ದವಸ ಧಾನ್ಯಗಳನ್ನು ಒಟ್ಟುಗೂಡಿಸಿ ಪೂಜೆ ಮಾಡಿ ಮನೆಗೆ ಬೇಕಾದನ್ನು ಶೇಖರಿಸಿ ಉಳಿದನ್ನು ಮಾರಾಟ ಮಾಡುತ್ತಾರೆ. ಬೆಳೆದ ದವಸ ಧಾನ್ಯಗಳಿಗೆ ಉತ್ತಮ ಆದಾಯ ಬರಲಿ ಎಂದು ಪೂಜಿಸುವ ಹಬ್ಬವೇ ಸಂಕ್ರಾಂತಿ ಎಂದರು.
ರೈತರಿಗೆ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಕೃಷಿ ಅಧ್ಯಯನ ಮಾಡಲು ಸಹಕಾರಿಯಾಗುವ ಕೃಷಿ ವಿಶ್ವವಿದ್ಯಾಲಯವನ್ನು ವಿ.ಸಿ.ಫಾರಂ ಆವರಣದಲ್ಲಿ ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರು ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ಪಡೆಯಲು ಜಿಲ್ಲೆಯಿಂದ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯಕ್ಕೆ ತೆರಳಬೇಕಿತ್ತು ಎಂದರು.ಕೃಷಿ ಪ್ರಧಾನವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಕೃಷಿ ವಿಶ್ವ ವಿದ್ಯಾಲಯದ ಅವಶ್ಯಕತೆಯನ್ನು ಮನಗಂಡು ಪ್ರಾರಂಭಿಸಲಾಗುತ್ತಿದೆ. ಕೃಷಿ ವಿಶ್ವ ವಿದ್ಯಾಲಯದಲ್ಲಿ ವಿವಿಧ ರೀತಿಯ ತಳಿಗಳು ಬೆಳೆಗೆ ಬಳಸಬೇಕಿರುವ ರಸಗೊಬ್ಬರ ಸೇರಿದಂತೆ ಪ್ರತಿಯೊಂದು ಮಾಹಿತಿ ಸಂಶೋಧಕರಿಂದ ದೊರಕಲಿದೆ. ಹಾಗಾಗಿ ರೈತರು ಇದನ್ನು ಸದುಪಯೋಗ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಮಾತನಾಡಿ, ಕೃಷಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಚಲುವರಾಯಸ್ವಾಮಿ ಅವರು ಕೃಷಿ ಸಚಿವರಾದ ಒಂದೂವರೆ ವರ್ಷದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಕನಿಷ್ಠ 3 ಬಾರಿ ಭೇಟಿ ಕೊಟ್ಟು ಕೃಷಿ ಅಭಿವೃದ್ಧಿಯ ಕುರಿತು ಹೆಚ್ಚಿನ ಶ್ರಮ ವಹಿಸಿದ್ದಾರೆ. 48 ಲಕ್ಷ ಹೆಕ್ಟೇರ್ ಬಿತ್ತನೆ ಕಾರ್ಯಕ್ಕಾಗಿ 6 ಲಕ್ಷ ಟನ್ ಬಿತ್ತನೆ ಬೀಜವನ್ನು ರೈತರಿಗೆ ಯಾವುದೇ ತೊಂದರೆಯಿಲ್ಲದೇ ಪೂರೈಸಿದ್ದಾರೆ ಎಂದರು.ಜಿಲ್ಲೆಯಲ್ಲಿ 1.47ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 1400 ಕೋಟಿ ರು. ಸಾಲ ನೀಡಲಾಗಿದೆ. ಕಳೆದ ವರ್ಷ ಮೈಷುಗರ್ ಪುನಶ್ಚೇತನಕ್ಕೆ 50 ಕೋಟಿ ರು. ಹಣವನ್ನು ನೀಡಲಾಗಿತ್ತು. ಈ ಬಾರಿ ಕಾರ್ಖಾನೆ ಉತ್ತಮವಾಗಿ ನಡೆಯುತ್ತಿದೆ. ಮೈಷುಗರ್ ಪುನಶ್ಚೇತನಕ್ಕೆ ಕಾರಣರಾದ ಹಾಗೂ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸಚಿವ ಚಲುವರಾಯಸ್ವಾಮಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಜಿಲ್ಲೆಯ ಮದ್ದೂರು, ಮಳವಳ್ಳಿ ಹಾಗೂ ಕೊಪ್ಪ ಕೊನೆಯ ಭಾಗದ ಕೃಷಿ ಚಟುವಟಿಕೆಗೆ ನೀರು ತಲುಪಿಸಲು ವಿ.ಸಿ.ನಾಲೆ ಆಧುನೀಕರಣ ಕಾಮಗಾರಿಯನ್ನು 1400 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ 10.48 ಲಕ್ಷ ಸಾರಿಗೆ ಬಸ್‌ಗಳಲ್ಲಿ ಉಚಿತ ಟಿಕೆಟ್ ನೀಡಿ 278 ಕೋಟಿ ರು. ಭರಿಸಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ 4.85 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸಿ 280 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದರು.ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸಂಕ್ರಾಂತಿಯು ಗ್ರಾಮೀಣ ಸೊಗಡನ್ನು ಯುವ ಪೀಳಿಗೆಗೆ ಪರಿಚಯಿಸುವ ಹಬ್ಬ. ಇಂತಹ ಹಬ್ಬವನ್ನು ಮನೆಯಲ್ಲೇ ಕುಳಿತು ನಾಲ್ಕು ಗೋಡೆಗಳ ಮಧ್ಯ ಆಚರಿಸದೇ ಎಲ್ಲರೂ ಒಟ್ಟಿಗೆ ಸೇರಿ ಸಂಭ್ರಮದಿಂದ ಆಚರಿಸುವ ಸಂಪ್ರದಾಯ ರೂಢಿಸಿಕೊಳ್ಳಬೇಕು. ರೈತರಿಗೆ ಶಕ್ತಿ ನೀಡಿ ಕೃಷಿಯಲ್ಲಿ ಸದಾ ಜೊತೆಯಲ್ಲಿರುವ ಗೋವುಗಳನ್ನು ಪೂಜಿಸುವ ಹಬ್ಬವೇ ಮಕರ ಸಂಕ್ರಾಂತಿ ಎಂದರು.
ಮಕರ ಸಂಕ್ರಾಂತಿ ಎಂದರೆ ಮಣ್ಣಿನ, ರೈತರ, ಸುಗ್ಗಿ ಹಾಗೂ ಸಂಭ್ರಮದ ಹಬ್ಬ. ಈ ಹಬ್ಬದ ದಿನದಂದು ರೈತರು ಬೆಳೆದ ಬೆಳೆಗಳನ್ನು ಪೂಜಿಸಿ ಸಂಭ್ರಮಿಸುತ್ತಾರೆ. ಸಂಕ್ರಾಂತಿ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕ. ಈ ಬಾರಿ ಜಿಲ್ಲೆಯಲ್ಲಿ ವಿನೂತನವಾಗಿ ಸಂಕ್ರಾಂತಿ ಸಂಭ್ರಮ ಆಚರಿಸುತ್ತಿರುವುದು ಬಹಳ ಖುಷಿಯ ವಿಚಾರ ಎಂದರು.ಇಂದಿನ ಯುವ ಪೀಳಿಗೆ ಹಾಗೂ ಮಕ್ಕಳು ಹೊಸತನದ ವೇಗದಲ್ಲಿ ಕೃಷಿ, ವಿವಿಧ ಬೆಳೆ, ಗಿಡಗಳ ಪರಿಚಯವೇ ಇಲ್ಲದಂತಾಗಿದ್ದಾರೆ. ಹಾಗಾಗಿ ನಗರ ಪ್ರದೇಶದ ಯುವ ಸಮುದಾಯ ಹಾಗೂ ಮಕ್ಕಳು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಭೇಟಿ ನೀಡುವ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ದೇವಲಾಪುರದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಹಳ್ಳಿಯ ಮಕ್ಕಳಿಗೆ ಮೂಲ ಸೌಲಭ್ಯಗಳ ವಿದ್ಯೆ ಸುಗ್ಗಿಯನ್ನು ಒದಗಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ ಮನವಿ ಮಾಡಿದರು. ಇದಕ್ಕೆ ಸಚಿವರು ಒಪ್ಪಿಗೆ ನೀಡಿದರು.