ಸಾರಾಂಶ
ಶಿರಸಿ: ತಾಲೂಕಿನ ದಾಸನಕೊಪ್ಪದ ಕಾಳಂಗಿ ಸೇವಾ ಸಹಕಾರಿ ಸಂಘದಲ್ಲಿ ನಡೆದ ರೈತರ ಸಭೆಯಲ್ಲಿ ಶೇರು ಸದಸ್ಯರಿಂದ ಹಾಲಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾದೆ. ಬೆಳೆ ಸಾಲ ಕಟ್ಟುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಾಳಂಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಂದ್ರ ಗೌಡ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ನಡೆದಿದ್ದು, ಈ ಹಿಂದೆ ಸಂಘದ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡುವಲ್ಲಿ ವಿಫಲರಾದ ಆರೋಪದ ಮೇಲೆ ರೈತರು ಸಭೆ ಬಹಿಷ್ಕಾರ ಮಾಡಿದ್ದಾಗಿ ತಿಳಿದು ಬಂದಿದೆ. ಕಳೆದ ಕೆಲ ತಿಂಗಳ ಹಿಂದೆ ಸಂಘಕ್ಕೆ ಚುನಾವಣೆ ನಡೆದಿದ್ದು, ಅದರಲ್ಲಿ ಹಾಲಿ ಆಡಳಿತ ಮಂಡಳಿಯವರು ಅಧಿಕಾರಕ್ಕೆ ಬಂದಲ್ಲಿ ಬೆಳೆ ಸಾಲ ಕಟ್ಟುವ ಸಂದರ್ಭದಲ್ಲಿ ರೈತರಿಗೆ ’ಹೊಳ್ಳ - ಬಳ್ಳ ’ ( ಬೆಳೆ ಸಾಲಕ್ಕೆ ಸಂಘದಿಂದ ಹಣ ನೀಡಿ, ಬಳಿಕ ರೈತರಿಂದ ಹಣ ಪಡೆಯುವ ಪ್ರಕ್ರಿಯೆ ) ಮಾಡುವುದಾಗಿ ಗ್ಯಾರೆಂಟಿ ಕಾರ್ಡ್ ನೀಡಿದ್ದರು. ಅದರಲ್ಲಿ ಸಹಿ ಸಹ ಹಾಕಲಾಗಿತ್ತು. ಆದರೆ ಈಗ ಸಂಘದ ಖಾತೆ ಸ್ಥಬ್ತವಾಗಿದ್ದು, ಹೊಳ್ಳ ಬಳ್ಳ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ರೈತರು, ಶೇರು ಸದಸ್ಯರು ಸಭೆಯನ್ನು ಬಹಿಷ್ಕರಿಸಿದರು.
ಇನ್ನು ಬದನಗೋಡ ಗ್ರಾಪಂ ಸದಸ್ಯರೂ ಆಗಿರುವ ರೈತ ಅಕ್ಷಯ ಮಾತನಾಡಿ, ಈ ಹಿಂದೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ಬೆಳೆ ಸಾಲ ತುಂಬಲು ರೈತರಿಗೆ ಹೊಳ್ಳ ಬಳ್ಳ ಅವಕಾಶ ನೀಡುತ್ತಿಲ್ಲ. ಕೇಳಿದಲ್ಲಿ ಸಂಘದ ಖಾತೆ ಸೀಸ್ ಆಗಿದೆ ಎನ್ನುತ್ತಾರೆ. ಹಾಗಿದ್ದಲ್ಲಿ ಸೊಸೈಟಿಯ ನಮ್ಮ ಹಣಕ್ಕೆ ಗ್ಯಾರಂಟಿ ಏನು? ಬೆಳೆ ಸಾಲ ತುಂಬಿದಲ್ಲಿ ನೀಡುತ್ತಾರೆ ಎನ್ನುವುದು ಯಾವ ಗ್ಯಾರಂಟಿ? ಕಾರಣ ನಾವು ಬೆಳೆ ಸಾಲ ತುಂಬುವುದಿಲ್ಲ ಎಂದರು. ಇದಕ್ಕೆ ಹತ್ತಾರು ರೈತರು ಧ್ವನಿಗೂಡಿಸಿದರು.