ನರಗುಂದ: ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದು ತಾಲೂಕು ಸಹಾಯಕ ಕೃಷಿ ಅಧಿಕಾರಿ ಎಂ.ಎಸ್. ಕುಲಕರ್ಣಿ ಹೇಳಿದರು. ಪಟ್ಟಣದ ಕೃಷಿ ಕಚೇರಿ ಆವರಣದಲ್ಲಿ ಶನಿವಾರ 2026 27ನೇ ಸಾಲಿನ ಆತ್ಮ ಯೋಜನೆಯಡಿ ತಾಲೂಕು ಮಟ್ಟದ ರೈತರ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ರೈತರು ಮುಂಗಾರು ಬಿತ್ತನೆಯಲ್ಲಿ ಒಂದೆ ಬೆಳೆ ಬಿತ್ತಿದರೆ ಹಲವಾರು ತೊಂದರೆಗಳು ಆಗುತ್ತವೆ. ಆದ್ದರಿಂದ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು. ಯೂರಿಯಾ ರಸ ಗೊಬ್ಬರದ ಮಿತ ಬಳಕೆಯ ಬಗ್ಗೆ ರೈತರಿಗೆ ಅರಿವು ಮೂಡಿಸುವುದು ಅತಿ ಅವಶ್ಯವಾಗಿದೆ. ಅತಿಯಾದ ಯೂರಿಯಾ ಬಳಕೆಯಿಂದ ಬೆಳೆಗಳ ಮೇಲೆ ದುಷ್ಪರಿಣಾಮ ಆಗುತ್ತದೆ ಎಂದರು.
ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಶಿವಾನಂದ ಸಾಠೆ ಮಾತನಾಡಿ, ಆತ್ಮ ಯೋಜನೆ ಉದ್ದೇಶಗಳು ಮತ್ತು ಅದರ ಮಹತ್ವದ ಬಗ್ಗೆ ತಿಳಿಸಿದರು.ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ಅಧಿಕಾರಿ ತೇಜಸ್ವಿನಿ ಶಿರಿಯಪ್ಪಗೌಡ್ರ ಮಾತನಾಡಿ, ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗಾಗಿ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ವಿವಿಧ ಸಹಾಯಧನ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಹೊಸ ತೋಟ ಸ್ಥಾಪನೆ, ಸೂಕ್ಷ್ಮ, ಹನಿ ನೀರಾವರಿ, ಕೃಷಿ ಯಂತ್ರೋಪಕರಣಗಳು ಹಾಗೂ ಕೊಯ್ಲು ನಂತರದ ನಿರ್ವಹಣೆಗೆ ಸಂಬಂಧಿಸಿದಂತೆ ರೈತರಿಗೆ ಶೇ. 40ರಿಂದ 50ರ ವರೆಗೆ ಸಹಾಯಧನ ನೀಡಲಾಗುತ್ತಿದೆ. ವಿಶೇಷವಾಗಿ ಸೀಬೆ ಸೇರಿದಂತೆ ವಿವಿಧ ಹಣ್ಣು ಬೆಳೆಗಳ ವಿಸ್ತರಣೆ ಮತ್ತು ಉತ್ಪಾದಕತೆ ಹೆಚ್ಚಿಸುವ ಉದ್ದೇಶದಿಂದ ಗಿಡಗಳ ಖರೀದಿ, ನೆಡುವಿಕೆ ಹಾಗೂ ನಿರ್ವಹಣೆಗೆ ಅನುದಾನ ಲಭ್ಯವಿದೆ. ರೈತರು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ತೋಟಗಾರಿಕೆ ಇಲಾಖೆಯ ಕಚೇರಿಗೆ ಭೇಟಿ ನೀಡಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಮಾತನಾಡಿ, ಇಲಾಖೆಯಲ್ಲಿ ದೊರೆಯಬಹುದಾದ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಪ್ರಗತಿಪರ ಕೃಷಿಕ ದುಂಡಯ್ಯ ಹಿರೇಮಠ ಮಾತನಾಡಿ, ಯುವಕರನ್ನು ಕೃಷಿಯತ್ತ ಸೆಳೆಯುವುದು ಇವತ್ತಿನ ಅತಿಮುಖ್ಯ ಕಾರ್ಯವಾಗಿದೆ. ಈ ದಿಸೆಯಲ್ಲಿ ಆತ್ಮ ಯೋಜನೆಯಡಿ ಯುವ ಕೃಷಿಕರಿಗಾಗಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಗತಿಪರ ಕೃಷಿಕ ನಾಗನಗೌಡ ಕಗದಾಳ ಮಾತನಾಡಿ, ರೈತರು ಸಾವಯವ ಕೃಷಿ ಅನುಸರಿಸುವುದು ಅತಿ ಅವಶ್ಯವಾಗಿದೆ. ಈ ದಿಸೆಯಲ್ಲಿ ಇಲಾಖೆಯ ಸಹಯೋಗದಲ್ಲಿ ಸಾವಯವ ಗೊಬ್ಬರಗಳ ತಯಾರಿಕೆ ಮತ್ತು ಅವುಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳ ಬಗ್ಗೆ ತಾಂತ್ರಿಕ ಮಾಹಿತಿ ಒದಗಿಸಲು ವಿನಂತಿಸಿದರು.
ಸಂಕದಾಳ ಗ್ರಾಮದ ಪ್ರಗತಿಪರ ರೈತರಾದ ರುದ್ರಗೌಡ ಲಿಂಗನಗೌಡರ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬೇಕು. ಈ ದಿಸೆಯಲ್ಲಿ ಗೋ ಆಧಾರಿತ ಕೃಷಿ ಅನುಸರಿಸಲು ಕರೆ ನೀಡಿದರು.ಬಸಪ್ಪ ಭಜಂತ್ರಿ, ಮಲ್ಲಿಕಾರ್ಜುನಗೌಡ ಪಾಟೀಲ, ಕಲ್ಮೇಶ ಬನ್ನಪ್ಪನವರ ಮಾತನಾಡಿ, ರೈತರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕೃಷಿ ಪರಿಕರ ಮಾರಾಟಗಾರ ವೆಂಕಟೇಶ ಗುಡಿಸಾಗರ ಮಾತನಾಡಿ, ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಅಗತ್ಯಕ್ಕನುಗುಣವಾಗಿ ಯೂರಿಯಾ ರಸಗೊಬ್ಬರವನ್ನು ಬಳಸಬೇಕು ಮತ್ತು ಇದರ ಜೊತೆಗೆ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಬಳಕೆ ಮಾಡಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಿಬ್ಬಂದಿ ತಾಲೂಕು ಮಟ್ಟದ ರೈತರ ಸಲಹಾ ಸಮಿತಿಯ ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ, ವೀರಣ್ಣ ಹಡಗಲಿ, ಪ್ರವೀಣ ಶಿವನಗೌಡರ, ಗುರುಶಾಂತ ನರಸಾಪೂರ, ನಾಗಪ್ಪ ಬೆನ್ನೂರ, ಸತೀಶ್ ಪಾಟೀಲ, ಶಿವಾನಂದ್ ಸಣಕಲ, ಸೇರಿದಂತೆ ಮುಂತಾದವರು ಇದ್ದರು.