ಕನಕಪುರ: ಮುಂದಿನ ಪೀಳಿಗೆಗೆ ಉತ್ತಮ ಆಹಾರ ದೊರೆಯಲು ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕಿದೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಎಂ.ರುದ್ರೇಶ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಕೆರಳಾಳುಸಂದ್ರದ ಪ್ರಗತಿಪರ ಹಾಗೂ ಸಾವಯವ ಕೃಷಿಕ ಬಿ.ನಾಗರಾಜು ಅವರ ತೋಟದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಆಯೋಜಿಸಿದ್ದ ಮಣ್ಣು ಉಳಿಸಿ ಆಂದೋಲನದಡಿ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಹಿರಿಯರ ಕಾಲದಲ್ಲಿ ಮಕ್ಕಳನ್ನು ಮಠಗಳು, ಸರ್ಕಾರಿ ಶಾಲೆಗಳಲ್ಲೇ ಓದಿಸುತ್ತಿದ್ದರು. ಅವರಿಗೆ ಸಂಸ್ಕಾರದ ಜೊತೆಗೆ ಭೂಮಿ ತಾಯಿ, ಬೇಸಾಯದ ಬಗ್ಗೆ ಅರಿವು ಮೂಡಿಸುತ್ತಿದ್ದರು. ಆದರೆ ಇಂದು ಪೋಷಕರು ತಮ್ಮ ಮಕ್ಕಳು ಮಣ್ಣಿನಲ್ಲಿ ಆಟ ಆಡುವುದಕ್ಕೂ, ಮಳೆಯಲ್ಲಿ ನೆನೆಯುವುದಕ್ಕೂ ಬಿಡದ ಕಾರಣ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇಲ್ಲದಂತಾಗಿದೆ ಎಂದರು.
ಆಧುನಿಕ ಯುಗದಲ್ಲಿ ರೈತರು ಹೆಚ್ಚು ಇಳುವರಿ ಪಡೆಯಲು ರಾಸಾಯನಿಕ, ಕ್ರಿಮಿನಾಶಕಗಳನ್ನು ಹೆಚ್ಚು ಬಳಸುವುದರಿಂದ ಬೆಳೆಯಲ್ಲೂ ವಿಷಕಾರಿ ಅಂಶಗಳು ಸೇರಿ ಆಹಾರದ ಗುಣಮಟ್ಟ ಹಾಗೂ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ನಮ್ಮ ಮುಂದಿನ ಪೀಳಿಗೆಯ ಹಿತ ದೃಷ್ಟಿಯಿಂದ ರೈತರು ಮತ್ತೆ ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಪ್ರಗತಿಪರ ಹಾಗೂ ಸಾವಯವ ಕೃಷಿ ರೈತ ನಾಗರಾಜು ತಮ್ಮ ತೋಟದಲ್ಲಿ ಕೃಷಿ ತರಬೇತಿ ಶಾಲೆ ತೆರೆದು ಮಕ್ಕಳಿಗೆ ಕೃಷಿ ಹಾಗೂ ಭೂಮಿಯ ಫಲವತ್ತತೆ ಬಗ್ಗೆ ಅರಿವು ಮೂಡಿಸಲು ಮುಂದಾಗಬೇಕಾಗಿದೆ ಎಂದು ಹೇಳಿದರು.ಸಾವಯವ ಕೃಷಿಕ ಬಿ.ನಾಗರಾಜು ಮಾತನಾಡಿ, ಇಂದಿನ ಪೋಷಕರು ಮಕ್ಕಳನ್ನು ಇಂಜಿನಿಯರ್, ಡಾಕ್ಟರ್ ಮಾಡುವ ಬದಲು ಉತ್ತಮ ಕೃಷಿಕನನ್ನಾಗಿ ಮಾಡಿದರೆ ನಮ್ಮ ಭೂಮಿ, ನಮ್ಮ ನಾಡು ಉಳಿಯುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಬೇಕಾಗಿದೆ. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಆಹಾರ ಪದಾರ್ಥ ಕಲುಷಿತವಾಗಿ ಕ್ಯಾನ್ಸರ್, ಹೃದಯಾಘಾತದಂತಹ ಕಾಯಿಲೆಗಳು ಹೆಚ್ಚಾಗಿವೆ. ಹೆಣ್ಣು ಮಕ್ಕಳು 8-10 ವರ್ಷಕ್ಕೆ ಋತುಮತಿ ಆಗುತ್ತಿರುವುದು ಬಹಳ ಅಪಾಯಕಾರಿ ಬೆಳವಣಿಗೆ. ರೈತರು ಸಮಾಜದ ಹಿತದೃಷ್ಟಿಯಿಂದ ಸಾವಯವ ಕೃಷಿ ಅಳವಡಿಸಿಕೊಂಡು ಉತ್ತಮ ಹಾಗೂ ಆರೋಗ್ಯಕರ ಬೆಳೆ ಬೆಳೆಯಲು ಮುಂದಾಗುವಂತೆ ಸಲಹೆ ನೀಡಿದರು.
ಸಾವಯವ ಕೃಷಿಕರಾದ ಶಿವರುದ್ರಪ್ಪ, ಲಕ್ಷ್ಮೀನಾರಾಯಣ್, ಇಂಡಿಗೊ ಆಗ್ರೋ ಕೇಂದ್ರದ ಮನೋಹರ್, ಮಾಗಡಿ ಕೃಷಿ ವಿಜ್ಞಾನ ಕೇಂದ್ರದ ಪ್ರಮೋದ್, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ನಾಗನಂದ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಎಸ್.ಆರ್.ನಾಗರಾಜು, ಪ್ರಕಾಶ್, ಬೂದಿಗೂಪ್ಪೆ ಶಿವಲಿಂಗಯ್ಯ, ಮುರಳೀಧರ್, ರಾಮಕೃಷ್ಣ, ಶೇಖರ್, ಮಂಜುನಾಥ್, ಆನಂದ್ ಪೈ, ಮಹಿಳಾ ಮೋರ್ಚಾದ ತಸೀನಾ ಖಾನ್,
ಪವಿತ್ರ, ವರಲಕ್ಷ್ಮಿ ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 01:ಕನಕಪುರ ತಾಲೂಕಿನ ಕೆರಳಾಳುಸಂದ್ರದ ಪ್ರಗತಿಪರ ರೈತ ಬಿ.ನಾಗರಾಜು ಅವರ ತೋಟದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಮಣ್ಣು ಉಳಿಸಿ ಆಂದೋಲನದಡಿ ನೈಸರ್ಗಿಕ ಕೃಷಿ ಕಾರ್ಯಾಗಾರ ನಡೆಯಿತು.