ಸಾರಾಂಶ
ಹಾವೇರಿ: ರೈತ ಬೆಳೆಗೆ ಯಾವ ಸರ್ಕಾರಗಳಿಂದಲೂ ಯೋಗ್ಯ ಬೆಲೆ ಕೊಡಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹ ರೈತರಿಗೆ ಯೋಗ್ಯ ಬೆಲೆ ಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ರೈತರು ಸಹ ಕೂಡ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ನಗರದ ಕೆಇಬಿ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಾವೇರಿ ಜಿಲ್ಲಾ ಹಾಲು ಒಕ್ಕೂಟದ ನೂತನ ಆಡಳಿತ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ರೈತರು ಹಾವೇರಿ ಹಾಲು ಒಕ್ಕೂಟ 50 ಪೈಸೆ ಕಡಿಮೆ ಕೊಟ್ಟರೂ ಖಾಸಗಿಯವರಿಗೆ ಹಾಲು ಕೊಡದೇ ಒಕ್ಕೂಟಕ್ಕೆ ಹಾಲು ಪೂರೈಸುತ್ತೇನೆ ಎಂಬ ಆತ್ಮಸ್ಥೈರ್ಯ ಬೆಳೆಸಿಕೊಂಡಾಗ ಮಾತ್ರ ಒಕ್ಕೂಟ ಉಳಿಯಲು, ಬೆಳೆಯಲು ಸಾಧ್ಯವಾಗುತ್ತದೆ ಎಂದರು.ಹಾಲಿನಲ್ಲಿ ಎಂದಿಗೂ ನೀರು ಹಾಕಬಾರದು. ಯಾರು ಒಳ್ಳೆಯ ಹಾಲು ಪೂರೈಕೆ ಮಾಡುತ್ತಾರೋ ಅವರಿಗೆ ಒಳ್ಳೆಯ ಬೆಲೆ ಕೊಡಿ. ಒಕ್ಕೂಟವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಶೀಘ್ರ ಮೆಗಾ ಡೇರಿ ಪೂರ್ಣಗೊಳಿಸಲಾಗುವುದು ಎಂದರು.ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿದರು. ಹೆಸ್ಕಾಂ ಅಧ್ಯಕ್ಷ ಅಜೀಮಪೀರ ಖಾದ್ರಿ, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ್ ಮಾನೆ, ಯು.ಬಿ. ಬಣಕಾರ, ಪ್ರಕಾಶ ಕೋಳಿವಾಡ, ಯಾಸೀರ್ ಖಾನ್ ಪಠಾಣ, ಎಂ.ಎಂ. ಹಿರೇಮಠ, ಎಸ್.ಎಫ್.ಎನ್. ಗಾಜೀಗೌಡ್ರ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಎಂ.ಎಂ. ಮೈದೂರ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋದಾ ವಂಟಗೋಡಿ, ಕೊಟ್ರೇಶಪ್ಪ ಬಸೇಗಣ್ಣಿ, ಶಶಿಧರ ಯಲಿಗಾರ, ಚಂದ್ರಪ್ಪ ಜಾಲಗಾರ, ಟಾಕನಗೌಡ ಪಾಟೀಲ, ತಿಪ್ಪಣ್ಣ ಸಾತಣ್ಣವರ, ಮಲ್ಲಿಕಾರ್ಜುನ ಬಳ್ಳಾರಿ ಉಪಸ್ಥಿತರಿದ್ದರು. ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು.ಪ್ರಜಾಪಭುತ್ವ ಗಟ್ಟಿಗೊಳಿಸಲು ಸಹಕಾರಿ ರಂಗ ಹೆಚ್ಚು ಸಹಕಾರಿಹಾವೇರಿ: ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಸಹಕಾರಿ ರಂಗ ಹೆಚ್ಚು ಸಹಕಾರಿಯಾಗಿದ್ದು, ಮಹಾರಾಷ್ಟ್ರ ಹಾಗೂ ಗುಜರಾತ್ ರೀತಿಯಲ್ಲಿ ನಮ್ಮಲ್ಲೂ ಸಹಕಾರ ರಂಗ ಸರ್ಕಾರದ ಮೇಲೆ ಹಿಡಿತ ಸಾಧಿಸುವಂತಾಗಬೇಕು. ಹಾಲು ಉತ್ಪಾದಕರ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಿದರೆ ರೈತರ ಆರ್ಥಿಕ ಸ್ಥಿತಿ ಸುಧಾರಣೆ ಸಾಧ್ಯವಾಗುತ್ತದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ಒಕ್ಕೂಟಕ್ಕೆ ಖಾಸಗಿಯವರಿಂದ ಬಹಳಷ್ಟು ಸ್ಪರ್ಧೆ ಇದೆ. ನಮ್ಮ ರೈತರು ಒಗ್ಗಟ್ಟಾಗಿ ಹಾವೇರಿ ಒಕ್ಕೂಟ ನನ್ನದು ಎಂದು ತೀರ್ಮಾನ ಮಾಡಿದರೆ ಹಾಲು ಒಕ್ಕೂಟ ಗಟ್ಟಿಯಾಗಿ ಬೆಳೆಯುತ್ತದೆ. ಇದು ರೈತರ ಆರ್ಥಿಕ ಸ್ಥಿತಿ ಸುಧಾರಣೆ ಮಾಡಲು ಬಹಳ ಉಪಯುಕ್ತವಾಗಿದೆ ಎಂದರು.ಹಾಲು ಉತ್ಪಾದನೆ ಜತೆಗೆ ಇತರ ಉತ್ಪನ್ನ ಮಾಡಿದರೆ ಮಾದರಿ ಹಾಲು ಒಕ್ಕೂಟ ಮಾಡಲು ಸಾಧ್ಯ. ಮೆಗಾ ಡೈರಿಗೆ ₹70 ಕೋಟಿ ಕೊಟ್ಟಿದ್ದೇನೆ. ಆದಷ್ಟು ಬೇಗ ಮೆಗಾ ಡೈರಿ ಕಾರ್ಯ ಆರಂಭಿಸಬೇಕು. ಹಾವೇರಿಗೆ ಮೆಡಿಕಲ್ ಕಾಲೇಜು ಉದ್ಘಾಟನೆಗೆ ಕೇಂದ್ರ ಸಚಿವರು, ಸಿಎಂರನ್ನು ಕರೆಸಲು ತೀರ್ಮಾನಿಸಿದ್ದೇವೆ. ಅದೇ ಸಂದರ್ಭದಲ್ಲಿ ಮೆಗಾ ಡೈರಿ ಉದ್ಘಾಟನೆ ಮಾಡಲು ಪ್ರಯತ್ನ ಮಾಡೋಣ ಎಂದರು.