ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ರಾಜ್ಯದ ರೈತರಿಗೆ,ಕೃಷಿ ಕಾರ್ಮಿಕರಿಗೆ ಕಾಂಗ್ರೆಸ್ ಸರ್ಕಾರ ಕೃಷಿ ಪದ್ಧತಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಪರಿಚಯಿಸುತ್ತಿದ್ದು, ರೈತರು ಈ ಕೃಷಿ ಪದ್ಧತಿ ಅಳವಡಿಸಿಕೊಂಡು ಜೀವನ ಮಟ್ಟ ಸುಧಾರಿಸಿಕೊಳ್ಳುವಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಕರೆ ನೀಡಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆಯಿಂದ ಗುಣ ನಿಯಂತ್ರಣ ಮತ್ತು ಆತ್ಮ ಯೋಜನೆಯಡಿ 2025- 26ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರೈತರು ವ್ಯವಸಾಯದಲ್ಲಿ ಹೆಚ್ಚು ರಾಸಾಯನಿಕ ಗೊಬ್ಬರ ಬಳಸದೇ ಸಾಂಪ್ರದಾಯಿಕ ಗೊಬ್ಬರ ಬಳಸಿ ಹೆಚ್ಚು ಲಾಭದ ಬೆಳೆಗಳನ್ನು ಬೆಳೆಯಬೇಕು. ಭೂಮಿಯ ಫಲವತ್ತತೆ ಕಾಪಾಡಲು ಮಣ್ಣನ್ನು ಸಕಾಲಕ್ಕೆ ಪರೀಕ್ಷೆಗೆ ಒಳಪಡಿಸಬೇಕು. ಮಾಗಿ ಉಳುಮೆ ಹಾಗೂ ಗೋಡು ಒಡೆಯುವ ಪದ್ಧತಿ ಕಣ್ಮರೆಯಾಗಿದ್ದು, ಕೃಷಿಗೆ ಸಂಬಂಧಿಸಿದಂತೆ ಹಿರಿಯರ ಮಾರ್ಗದರ್ಶನ ಪಡೆದು ಹೆಚ್ಚು ಲಾಭದಾಯಕ ಕೃಷಿ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಬೇಕು ಎಂದರು.
ತಾಲೂಕಿನಲ್ಲಿ ಅಧಿಕ ಮಳೆ ಬೀಳುತ್ತಿದ್ದು, ಕಳೆದ ವರ್ಷ 138 ಮಿ.ಮೀ. ಮಳೆ ಬಂದಿತ್ತು. ಮಳೆ ವ್ಯತ್ಯಾಸವಾದರೆ ರೈತರಿಗೆ ಹೆಚ್ಚು ಅನಾನುಕೂಲವಾಗುತ್ತದೆ. ಪ್ರಸ್ತುತ ವ್ಯವಸಾಯ ಅತ್ಯಂತ ದುಬಾರಿಯಾಗಿದೆ. ದೇಶಕ್ಕೆ ಅನ್ನ ಒದಗಿಸುವ ರೈತರು ಆರ್ಥಿಕವಾಗಿ ಸದೃಢರಾಗಬೇಕು. ಖುಷ್ಕಿ ಬೇಸಾಯ ಸಹ ರೈತರಿಗೆ ಲಾಭದಾಯಕವಾಗಿಲ್ಲ, ಸರ್ಕಾರ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಎಷ್ಟೇ ರಿಯಾಯಿತಿ ನೀಡಿದರೂ ಅದು ಕಡಿಮೆಯೇ, ತಾಲೂಕಿನಲ್ಲಿ ಈವರೆಗೂ ಬಿತ್ತನೆ ಬೀಜದ ಕೊರತೆ ಕಂಡು ಬಂದಿಲ್ಲ ಎಂದರು.ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ನಮ್ಮ ಯುಪಿಎ ಸರ್ಕಾರ ರೈತರ 72 ಸಾವಿರ ಕೋಟಿ ರು. ಸಾಲಮನ್ನಾ ಮಾಡಿತ್ತು. ಸಿಎಂ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಮಾಡಿದ್ದು, ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ರೈತರ ಸಾಲಮನ್ನಾ ಮಾಡುವ ಮೂಲಕ ರೈತರ ,ಕೃಷಿಕರ ಪರ ಕೆಲಸ ಮಾಡಿದ್ದರು. ಆದರೆ ಈಗಿನ ಎನ್‌ಡಿಎ ಸರ್ಕಾರ 16 ಲಕ್ಷ ಕೋಟಿ ರು. ರೈತರ ಸಾಲ ಮನ್ನಾ ಮಾಡಲು ಮುಂದಾಗುತ್ತಿಲ್ಲ, ಬದಲಾಗಿ ವಿವಿಧ ಕಂಪನಿಗಳ ಸಾಲ ಮನ್ನಾ ಮಾಡುವ ಮೂಲಕ ದೇಶದ ಆರ್ಥಿಕತೆ ದಿವಾಳಿಯಾಗಿಸುತ್ತಿದ್ದಾರೆ ಎಂದು ಸಚಿವ ರಾಜಣ್ಣ ಕಿಡಿಕಾರಿದರು.
ಗ್ರಾಮೀಣರ ಬದುಕು ಹಸನಾಗಬೇಕು. ರೈತರ ಮಕ್ಕಳು ವಿದ್ಯಾವಂತರಾದಾಗ ಕುಟುಂಬಗಳ ಜೀವನಮಟ್ಟ ಸುಧಾರಣೆಯಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಎಸಿ ಗೋಟೂರು ಶಿವಪ್ಪ, ಡಿವೈಎಸ್‌ಪಿ ಮಂಜುನಾಥ್, ತಹಸೀಲ್ದಾರ್ ಶಿರಿನ್ ತಾಜ್, ಉಪ ಕೃಷಿ ಸಹಾಯಕ ನಿರ್ದೇಶಕ ಚಂದ್ರಕುಮಾರ್, ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಕೆಪಿಸಿಸಿ ಸದಸ್ಯ ಎಂ.ಎಸ್.ಮಲ್ಲಿಕಾರ್ಜುನಯ್ಯ, ಆದಿನಾರಾಯಣರೆಡ್ಡಿ, ರಂಗಶ್ಯಾಮಣ್ಣ, ತುಮುಲ್ ನಿರ್ದೇಶಕ ಬಿ.ನಾಗೇಶ್ ಬಾಬು, ಕೃಷಿಕ ಸಮಾಜದ ಅಧ್ಯಕ್ಷ ರಮೇಶ್ ಸೇರಿ ಫಲಾನುಭವಿಗಳು ಇದ್ದರು.