ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಮತ್ತು ವಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಬಜತ್ತೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಕೃಷಿ ಮಾಹಿತಿ ಕಾರ್ಯಾಗಾರ ನೆರವೇರಿತು.

ಉಪ್ಪಿನಂಗಡಿ: ಕನಿಷ್ಠ ಭೂಮಿಯಲ್ಲಿ ಗರಿಷ್ಠ ಬೆಳೆ ಬೆಳೆಯುವ ಹಂಬಲದೊಂದಿಗೆ ವಿಷಮುಕ್ತ ಆಹಾರ ಬೆಳೆಯುವ ಬದ್ಧತೆಯನ್ನು ಕೃಷಿಕರು ಹೊಂದಬೇಕು. ಸ್ವಾವಲಂಬನೆಯ ಜೊತೆಗೆ ವಿಷಮುಕ್ತ ಆಹಾರಕ್ಕಾಗಿ ಸಮಗ್ರ ಕೃಷಿ ಯೋಜನೆಯನ್ನು ರೂಪಿಸಿಕೊಳ್ಳಬೇಕೆಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಶನಿವಾರ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಮತ್ತು ವಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಬಜತ್ತೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಕೃಷಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹಳೆಯ ಕೃಷಿ ಪದ್ಧತಿ ವ್ಯವಸ್ಥೆಯಿಂದ ಹೊರಬರಲು ಕೃಷಿಕರಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ಅದಕ್ಕಾಗಿ ಕೃಷಿ ಮಾಹಿತಿ ಕಾರ್ಯಾಗಾರ ಹಮ್ಮಿಗೊಂಡಿರುವುದು ಶ್ಲಾಘನೀಯ ಎಂದರು.

ಬಜತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ ಪಿ.ಎನ್. ಮಾತನಾಡಿ, ರೈತರು ಸಮಸ್ಯೆಯನ್ನು ಎದುರಿಸುತ್ತಿದ್ದು, ಒಳಿತಿನ ಸಲುವಾಗಿ ಹಮ್ಮಿಕೊಂಡಿರುವ ಈ ಕಾರ‍್ಯಕ್ರಮ ಕೃಷಿಕರಿಗೆ ಸಹಕಾರಿ ಆಗಲಿದೆ. ನಾವು ಹಟ್ಟಿ ಗೊಬ್ಬರ, ನೈಸರ್ಗಿಕ ಗೊಬ್ಬರಕ್ಕೆ ಹೆಚ್ಚು ಒತ್ತು ಕೊಡುವಂತಾಗಬೇಕು ಎಂದು ಹೇಳಿದರು.

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯುವ ವಿಜ್ಞಾನಿ ಡಾ. ಭವಿಷ್, ಅಡಕೆ ಕೃಷಿಯಲ್ಲಿ ಗೊಬ್ಬರದ ಬಳಕೆ, ಸೂಕ್ಷ್ಮ ಪೋಷಕಾಂಶದ ಸಮಗ್ರ ನಿರ್ವಹಣೆ ಹಾಗೂ ರೋಗಗಳ ಹತೋಟಿ ಬಗ್ಗೆ ಮಾಹಿತಿ ನೀಡಿದರು.ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಯು.ಎಲ್. ಉದಯಕುಮಾರ್, ಸಹಕಾರಿ ಸಂಘದ ವಳಾಲು ಶಾಲೆಯಲ್ಲಿ ಸುಮಾರು ೨೦ ವರ್ಷಗಳಿಗೂ ಅಧಿಕ ಕಾಲ ಸಿಬ್ಬಂದಿಯಾಗಿ ನಿವೃತ್ತಿ ಹೊಂದಿದ ಇಸ್ಮಾಯಿಲ್ ನೀರಕಟ್ಟೆ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಸಹಕಾರಿ ವ್ಯವಸಾಯಿಕ ಸಂಘ ಉಪಾಧ್ಯಕ್ಷ ದಯಾನಂದ ಸರೋಳಿ, ನಿರ್ದೇಶಕರಾದ ಉಮೇಶ್, ರಾಜೇಶ್, ರಾಘವ ನಾಯ್ಕ್, ಗೀತಾ, ಸಂಧ್ಯಾ, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಶ್ರೀರಾಮ, ಸುಂದರ ಕೆ., ಉಪ್ಪಿನಂಗಡಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುಕುಂದ ಬಜತ್ತೂರು, ಸಹಕಾರಿ ಸಂಘದ ನಮಾಜಿ ಅಧ್ಯಕ್ಷ ಯಶವಂತ ಗೌಡ, ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಸೌಕತ್ ಅಲಿ ಅಹಮ್ಮದ್, ನಿತಿನ್, ಹಾಲು ಉತ್ಪಾದಕರ ಸಂಘದ ಕಾರ‍್ಯದರ್ಶಿ ಪದ್ಮಾವತಿ, ಉಪ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಪುಷ್ಪರಾಜ್ ಶೆಟ್ಟಿ, ಪ್ರಮುಖರಾದ ನವೀನ್ ಕುಮಾರ್, ಕಂಗ್ವೆ ವಿಶ್ವನಾಥ ಶೆಟ್ಟಿ, ಹೇರಂಭ ಶಾಸ್ತ್ರಿ, ಜಗದೀಶ್ ರಾವ್ ಮಣಿಕ್ಕಳ ಮತ್ತಿತರರು ಉಪಸ್ಥಿತರಿದ್ದರು.ಸಹಕಾರಿ ವ್ಯವಸಾಯಿಕ ಸಂಘದ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಶೋಭಾ ಸ್ವಾಗತಿಸಿದರು. ವಳಾಲು ಹಾಲು ಉತ್ಪಾದಕರ ಸಂಘ ಅಧ್ಯಕ್ಷ ವಸಂತ ಪಿಜಕ್ಕಳ ವಂದಿಸಿದರು. ಸಂಸ್ಥೆಯ ಪ್ರವೀಣ್ ಆಳ್ವ, ರವೀಶ್ ಕಾರ‍್ಯಕ್ರಮ ನಿರೂಪಿಸಿದರು. ಅಕ್ಷಯ್ ಕುಮಾರ್, ದೇವರಾಜ್ ಸಹಕರಿಸಿದರು.