ರೈತರು ಪ್ರವಾಸೋದ್ಯಮದ ಮಾಲೀಕರಾಗಬೇಕು: ಕೇಶವಮೂರ್ತಿ

| Published : Jan 23 2025, 12:47 AM IST

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರು ಸುಸ್ಥಿರ ಬದುಕು ಕಟ್ಟಿಕೊಳ್ಳುವಂತೆ ಮಾಡುವ ಸಲುವಾಗಿ ಅನೇಕ ಯೋಜನೆ ರೂಪಿಸಿವೆ. ಅದರ ಒಂದು ಭಾಗವೇ ಕೃಷಿ ಪ್ರವಾಸೋದ್ಯಮ. ಇದರ ಮೂಲಕ ರೈತರು ತಮ್ಮ ಸ್ಥಳದ ಮಹಿಮೆ, ಸಂಸ್ಕೃತಿ, ಕಲೆ, ಬೆಳೆ ಮತ್ತು ಆಹಾರ ಪದ್ಧತಿ ಸೇರಿದಂತೆ ಇತ್ಯಾದಿಗಳನ್ನು ಪ್ರವಾಸಿಗರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಣ್ಣ ಮತ್ತು ಮಾಧ್ಯಮ ವರ್ಗದ ರೈತರು ಕೃಷಿ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಮೂಲಕ ಕೃಷಿ ಪ್ರವಾಸೋದ್ಯಮದ ಮಾಲೀಕರಾಗಬೇಕು ಎಂದು ಆಕಾಶವಾಣಿ ಕೃಷಿ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವಮೂರ್ತಿ ಸಲಹೆ ನೀಡಿದರು.

ನಗರದ ಎಂಜಿನಿಯರ್ ಗಳ ಸಂಸ್ಥೆಯಲ್ಲಿ ಜೈಪುರದ ಚರಣಸಿಂಗ್ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆ (ಎನ್.ಐ.ಎ.ಎಂ), ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಮೈಸೂರಿನ ವಿಶ್ವೇಶ್ವರಯ್ಯ ಅಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ‘ಕೃಷಿ ಪ್ರವಾಸೋದ್ಯಮ-ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಹೊಸ ಆಯಾಮ’ ಎಂಬ ಮೂರು ದಿನಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರು ಸುಸ್ಥಿರ ಬದುಕು ಕಟ್ಟಿಕೊಳ್ಳುವಂತೆ ಮಾಡುವ ಸಲುವಾಗಿ ಅನೇಕ ಯೋಜನೆ ರೂಪಿಸಿವೆ. ಅದರ ಒಂದು ಭಾಗವೇ ಕೃಷಿ ಪ್ರವಾಸೋದ್ಯಮ. ಇದರ ಮೂಲಕ ರೈತರು ತಮ್ಮ ಸ್ಥಳದ ಮಹಿಮೆ, ಸಂಸ್ಕೃತಿ, ಕಲೆ, ಬೆಳೆ ಮತ್ತು ಆಹಾರ ಪದ್ಧತಿ ಸೇರಿದಂತೆ ಇತ್ಯಾದಿಗಳನ್ನು ಪ್ರವಾಸಿಗರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕಿದೆ ಎಂದರು.

ಕೃಷಿ ಪ್ರವಾಸೋದ್ಯಮ ಕೃಷಿ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸುತ್ತದೆ. ಸ್ಥಳೀಯವಾಗಿ ಲಭ್ಯವಿರುವ ಕೃಷಿ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುತ್ತದೆ. ಇದು ನಗರಗಳ ಜನರಿಗೆ ಕೃಷಿ ಚಟುವಟಿಕೆಯ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಮಾರುಕಟ್ಟೆ ವಿಸ್ತರಣೆಯೂ ಸಾಧ್ಯವಾಗುತ್ತದೆ. ಆ ಭಾಗದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತದೆ ಎಂದು ಅವರು ಹೇಳಿದರು.

ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದ ಸಾವಯವ ಒಕ್ಕೂಟದ ಅಧ್ಯಕ್ಷ ರಮೇಶ್ ಪಿ. ರಂಗಸಮುದ್ರ ಮಾತನಾಡಿ, ಕೃಷಿ ಪ್ರವಾಸೋದ್ಯಮದ ಪರಿಕಲ್ಪನೆಯು ರೈತರ ಪಾಲಿನ ಆಶಾಕಿರಣ. ಕೃಷಿಯಿಂದಲೇ ಸಂಸ್ಕೃತಿ ಹುಟ್ಟಿರುವುದು. ಆದರೆ ಇಂದು ಕೃಷಿಕರು ಮೂಲ ಸಂಸ್ಕೃತಿ ಮರೆತು ವಲಸೆ ಹೋಗುತ್ತಿದ್ದಾರೆ. ಆಹಾರದ ಮೂಲ ಮರೆತರೆ ಮನುಷ್ಯನ ನಾಶ ಗ್ಯಾರಂಟಿ ಎಂದರು.

ಕೃಷಿ ಪ್ರವಾಸೋದ್ಯಮಕ್ಕೆ ಉಜ್ವಲ ಭವಿಷ್ಯವಿದ್ದು, ಶಿಕ್ಷಣ, ಆರೋಗ್ಯದಂತೆ ಕೃಷಿ ಬಗ್ಗೆಯೂ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.

ಹನೂರು ಶುದ್ಧ ಫಾರ್ಮ್ ನ ಪಿ. ದಯಾನಂದ ಅವರು ಕೃಷಿ ಪ್ರವಾಸೋದ್ಯಮ ಸ್ಥಾಪನೆಯ ಬಗ್ಗೆ ಬೇಕಾದ ಸಿದ್ಧತೆ ಕುರಿತು ಉಪನ್ಯಾಸ ನೀಡಿದರು. ದಯಾನಂದ್ ಅವರು ಕೃಷಿ ಪ್ರವಾಸೋದ್ಯಮಲ್ಲಿ ಮಾಡಿರುವ ಸಾಧನೆ ಗುರುತಿಸಿ ಕೃಷಿ ಸಮ್ಮಾನ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೃಷಿ ಪ್ರವಾಸೋದ್ಯಮಕ್ಕೆ ಸಾಮಾಜಿಕ ಜಾಲತಾಣ ಸದ್ಬಳಕೆ ಕುರಿತು ಕೆ. ಗಣೇಶ್ ಉಪನ್ಯಾಸ ನೀಡಿದರು. ವಿಶ್ವೇಶ್ವರಯ್ಯ ಡೆವಲಪ್ಮೆಂಟ್ ಆರ್ಗನೈಸೇಷನ್ ನಿರ್ದೇಶಕ ಡಿ.ಎನ್. ಹರ್ಷ, ಎಂ. ಕುಮಾರ್ ಹಾಗೂ ಎಂ.ಎಸ್. ಪೂಜಾ ಮೊದಲಾದವರು ಇದ್ದರು.