ರೈತರನ್ನು ಅತ್ಯಂತ ಗೌರವದಿಂದ ಕಾಣಬೇಕು: ಸತೀಶ್ ಸಲಹೆ

| Published : Feb 08 2025, 12:31 AM IST

ಸಾರಾಂಶ

ಜಗತ್ತಿನಲ್ಲಿ ರೈತಾಪಿ ವರ್ಗವೇ ಅತ್ಯಂತ ಶ್ರೇಷ್ಠ. ಅವರಿಂದಲೇ ಜಗತ್ತಿನ ಹಸಿವು ನೀಗುತ್ತಿದೆ. ರೈತರು ಉತ್ತು ಬಿತ್ತು ಬೆಳೆದು ಆಹಾರೋತ್ಪನ್ನ ಕೊಡದಿದ್ದರೆ, ನಾವು ಯಾರೂ ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ರೈತರನ್ನು ಅತ್ಯಂತ ಗೌರವದಿಂದ ಕಾಣಬೇಕು. ಅವರ ಪರವಾದ ಕಾಳಜಿಯನ್ನು ನಿರಂತರವಾಗಿ ವ್ಯಕ್ತಪಡಿಸಬೇಕು.

ಕನ್ನಡಪ್ರಭ ವಾರ್ತೆ ಹುಣಸೂರು

ಜಗತ್ತಿನಲ್ಲಿ ರೈತಾಪಿ ವರ್ಗವೇ ಅತ್ಯಂತ ಶ್ರೇಷ್ಠ. ಅವರಿಂದಲೇ ಜಗತ್ತಿನ ಹಸಿವು ನೀಗುತ್ತಿದೆ. ರೈತರು ಉತ್ತು ಬಿತ್ತು ಬೆಳೆದು ಆಹಾರೋತ್ಪನ್ನ ಕೊಡದಿದ್ದರೆ, ನಾವು ಯಾರೂ ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ರೈತರನ್ನು ಅತ್ಯಂತ ಗೌರವದಿಂದ ಕಾಣಬೇಕು. ಅವರ ಪರವಾದ ಕಾಳಜಿಯನ್ನು ನಿರಂತರವಾಗಿ ವ್ಯಕ್ತಪಡಿಸಬೇಕು ಎಂದು ಸಾಹಿತಿ, ಶಿಕ್ಷಕ ಟಿ. ಸತೀಶ್ ಜವರೇಗೌಡ ತಿಳಿಸಿದರು.

ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ತಾಲೂಕಿನ ಬೆಂಕಿಪುರ ಗ್ರಾಮದಲ್ಲಿ ನಡೆಯುತ್ತಿರುವ ಎನ್ಎಸ್ಎಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ಯುವ ಸಮುದಾಯ ಮತ್ತು ಗ್ರಾಮೀಣಾಭಿವೃದ್ಧಿ ಕುರಿತು ಅವರು ಮಾತನಾಡಿದರು.

ಕೃಷಿ ಇನ್ನೂ ಉದ್ಯಮದ ಸ್ವರೂಪ ಪಡೆದಿಲ್ಲದ ಕಾರಣ ಲಾಭದಾಯಕವಾಗಿಲ್ಲ. ರೈತರ ಉತ್ಪನ್ನಗಳಿಗೆ ಸೂಕ್ತವಾದ ವೈಜ್ಞಾನಿಕ ಬೆಲೆಯಿಲ್ಲ. ಇದರಿಂದ ಕೃಷಿ ಸಂಸ್ಕೃತಿ ನಾಶವಾಗುತ್ತಿದೆ. ರೈತರಿಗೆ ನ್ಯಾಯಯುತ ಬೆಲೆ ದೊರಕಿಸಿ ಕೊಡಲು ಗ್ರಾಮೀಣ ಯುವ ಸಮುದಾಯ ಗಟ್ಟಿಯಾದ ಹೋರಾಟ ರೂಪಿಸಿ ಬೃಹತ್ ಚಳವಳಿ ಮಾಡಬೇಕು ಎಂದು ಅವರು ಕರೆ ನೀಡಿದರು.

ಹಳ್ಳಿಗಳ ಸಮಗ್ರ ವಿಕಾಸ ಆಗಬೇಕಾದರೆ, ಸ್ಥಳೀಯವಾಗಿ ಯೋಗ್ಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಇದಕ್ಕಾಗಿ ಯುವ ಜನರಲ್ಲಿ ರಾಜಕೀಯ ಪ್ರಜ್ಞೆ ಮತ್ತು ವಿವೇಚನೆ ಇರವುದು ಅಗತ್ಯ. ಚುನಾವಣೆಯಲ್ಲಿ ಭ್ರಷ್ಟರು, ಜಾತಿವಾದಿಗಳು, ಅಯೋಗ್ಯರು ಆಯ್ಕೆಯಾಗದಂತೆ ಎಚ್ಚರ ವಹಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ಪಂದನ ಸಾಂಸ್ಕೃತಿಕ ಪರಿಷತ್ತು ತಾಲೂಕು ಅಧ್ಯಕ್ಷ ಟಿ. ಲೋಕೇಶ್ ಮಾತನಾಡಿ, ಎನ್ಎಸ್ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಶ್ರಮ, ಒಗ್ಗಟ್ಟಿನ ಮನೋಭಾವ ಬೆಳೆಸುತ್ತವೆ. ಜೊತೆಗೆ ಸಂಬಂಧಗಳನ್ನು ಪರಸ್ಪರ ಬೆಸೆಯುತ್ತವೆ ಎಂದು ಹೇಳಿದರು.

ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ, ಎನ್ಎಸ್ಎಸ್ ಶಿಬಿರಾಧಿಕಾರಿ ಎಸ್. ಆನಂದ್, ಸಹ ಶಿಬಿರಾಧಿಕಾರಿ ಧರ್ಮೇಂದ್ರ, ಗ್ರಾಮದ ಯಜಮಾನ ಸಿದ್ದನಾಯಕ ಹಾಗೂ ಉಪನ್ಯಾಸಕರು ಇದ್ದರು.

ಆರ್‌.ಒ ಘಟಕಗಳಲ್ಲಿ ನೀರಿನ ಪರೀಕ್ಷಾ ವರದಿ ಪ್ರದರ್ಶಿಸಿ

ಮೈಸೂರು: ನಗರ ಪಾಲಿಕೆ ವ್ಯಾಪ್ತಿಯ ಖಾಸಗಿ ಆರ್‌.ಒ ಘಟಕಗಳ ನಿರ್ವಾಹಕರು ಪ್ರತಿ ತಿಂಗಳು ನೀರನ್ನು ಪರೀಕ್ಷಿಸಿ, ಅದರ ವರದಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ನಗರ ಪಾಲಿಕೆ ನೀರು ಸರಬರಾಜು ವಿಭಾಗ ಸೂಚಿಸಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನೀರಿನ ಉನ್ನತ ಗುಣಮಟ್ಟ ಮತ್ತು ಸುರಕ್ಷತೆ ಕಾಪಾಡಲು ಆರ್‌.ಒ ಜಲ ಶುದ್ಧೀಕರಣ ಘಟಕಗಳ ಮೂಲ ಜಲ ಮೂಲದ ಮಾದರಿ ಮತ್ತು ಶುದ್ಧೀಕರಿತ ನೀರಿನ ಮಾದರಿಯನ್ನು ಪ್ರತಿ 30 ದಿನಗಳಿಗೊಮ್ಮೆ ಬಿಐಎಸ್‌ ನಿರ್ಮಿತ ನೀರು ಪರೀಕ್ಷಾ ಕೇಂದ್ರ, ಎಂಜಿನಿಯರಿಂಗ್‌ ಕಾಲೇಜು, ಸರ್ಕಾರಿ ಸಂಶೋಧನಾ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ, ಪರೀಕ್ಷಾ ವರದಿಯನ್ನು ತಮ್ಮ ಘಟಕಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಈ ಘಟಕಗಳಲ್ಲಿ ಉಪಯೋಗದಲ್ಲಿರುವ ಎಲ್ಲಾ ಉಪಕರಣಗಳನ್ನು ಬಿಐಎಸ್‌/ ಐಎಸ್‌ಒ ಪ್ರಮಾಣ ಪತ್ರ ಹೊಂದಿರಬೇಕು. ಆರ್‌.ಒ ಘಟಕಗಳ ನಿಯಮಿತ ನಿರ್ವಹಣೆ ಕಡ್ಡಾಯವಾಗಿದೆ. ಈ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದ್ದು, ತಪ್ಪಿದರೆ ಕ್ರಮ ಕೈಗೊಳ್ಳುವುದಾಗಿ ನೀರು ಸರಬರಾಜು ವಿಭಾಗದ ಇಇ ತಿಳಿಸಿದ್ದಾರೆ.