ಸಾರಾಂಶ
ರೈತರು ಸರ್ಕಾರದ ಯೋಜನೆ ಪಡೆದುಕೊಂಡು ತಮ್ಮ ಜಮೀನುಗಳಲ್ಲಿ ಕನಿಷ್ಠ ಒಂದು ಎಕರೆ ನೈಸರ್ಗಿಕ ಕೃಷಿ ಮಾಡಬೇಕು.
ಕಲಘಟಗಿ:
ರೈತರು ಸರ್ಕಾರದ ಯೋಜನೆ ಪಡೆದುಕೊಂಡು ತಮ್ಮ ಜಮೀನುಗಳಲ್ಲಿ ಕನಿಷ್ಠ ಒಂದು ಎಕರೆ ನೈಸರ್ಗಿಕ ಕೃಷಿ ಮಾಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ಮೋಹನ ಕುಮ್ಮಚಗಿ ಹೇಳಿದರು.ತಾಲೂಕಿನ ಸುಳಿಕಟ್ಟಿ ಗ್ರಾಮದಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ವಿಕಾಸ ಯೋಜನೆ ಅಡಿ ನಡೆದ ನೈಸರ್ಗಿಕ ಕೃಷಿ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಚ್.ಬಿ. ಶಿವಪ್ಪ ಮಾತನಾಡಿ, ನೈಸರ್ಗಿಕ ಕೃಷಿಗೆ ಮುಖ್ಯವಾಗಿ ದೇಸಿ ಗೋವು ಬೇಕೇಬೇಕು ಎಂದರು. ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ, ಸುಮಾರು 20 ವರ್ಷಗಳಿಂದ ನೈಸರ್ಗಿಕ ಕೃಷಿ ಮಾಡುತ್ತಿದ್ದು, ಇದರಲ್ಲಿ ನೆಮ್ಮದಿಯ ಜೀವನ ಇದೆ. ಎಲ್ಲರೂ ಆರೋಗ್ಯವಾಗಿ ಇರಬಹುದು. ಆದ್ದರಿಂದ ಎಲ್ಲರೂ ನೈಸರ್ಗಿಕ ಕೃಷಿಯತ್ತ ಮರುಳಬೇಕು ಎಂದು ವಿನಂತಿಸಿದರು.ಯುವ ಸಾವಯವ ಕೃಷಿಕ ಮಾಳಪ್ಪ ಹೂನ್ನಿಹಳ್ಳಿ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಭೂಮಿಯಲ್ಲಿ ಸಾಂಪ್ರದಾಯಿಕ ಕೃಷಿ ಮಾಡಬೇಕು ಎಂದು ಹೇಳಿದರು.
ಗ್ರಾಮದ ಸಾವಯವ ಕೃಷಿಕ ಪರಶುರಾಮ್ ಎತ್ತಿನಗುಡ್ಡ ಮಾತನಾಡಿ, ಸರ್ಕಾರ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುತ್ತಿದ್ದು, ರೈತರು ರಾಸಾಯನಿಕ ಗೊಬ್ಬರ ಬಳಸದೆ, ಜೀವಾಮೃತ, ಗೋ ಕೃಪಾಮೃತ ಸದುಪಯೋಗಪಡಿಸಿಕೊಂಡು ಮುಂದುವರಿಯಬೇಕು ಎಂದು ಮನವಿ ಮಾಡಿದರು. ಕೃಷಿ ಇಲಾಖೆಯ ಶಿವರಾಜ್ ಸ್ವಾಗತಿಸಿದರು. ಬೋಲಾ ಪುಂಡಲೀಕ್ ವಂದಿಸಿದರು. ಗ್ರಾಮದ ಹಿರಿಯರಾದ ಗಣಪತಿ ನಾರ್ವೆಕರ, ಅನಂತ ಗುಂಡಪ್ಪನವರ, ನಿಂಗಪ್ಪ ಪಾಂಡು ಇತರರಿದ್ದರು.