ರೈತರೇ ಆಹಾರ ಬೆಳೆಗಳಿಗೆ ಒತ್ತು ಕೊಡಿ: ಜ್ಞಾನೇಶ್ವರ್
KannadaprabhaNewsNetwork | Published : Oct 19 2023, 12:46 AM IST
ರೈತರೇ ಆಹಾರ ಬೆಳೆಗಳಿಗೆ ಒತ್ತು ಕೊಡಿ: ಜ್ಞಾನೇಶ್ವರ್
ಸಾರಾಂಶ
ರೈತ-ಸೈನಿಕರನ್ನು ದೇಶ ಯಾವತ್ತೂ ಮರೆಯಬಾರದು, ಇವರಿಬ್ಬರೇ ನಮ್ಮ ರಕ್ಷಕರು- ಅನ್ನದಾತರು: ಶಾಸಕ ಚನ್ನಬಸಪ್ಪ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ರೈತರು ಹಣದ ಹಿಂದೆ ಬೀಳದೇ, ಆಹಾರ ಬೆಳೆಗಳಿಗೆ ಒತ್ತು ಕೊಡಬೇಕು ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಕೃಷಿಕ ಚಿತ್ರದುರ್ಗದ ಕೆ.ಆರ್. ಜ್ಞಾನೇಶ್ವರ್ ಹೇಳಿದರು. ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಮಹಾನಗರ ಪಾಲಿಕೆ ವತಿಯಿಂದ ದಸರಾ ಅಂಗವಾಗಿ ಆಯೋಜಿಸಿದ್ದ ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಹಣದ ಹಿಂದೆ ಬಿದ್ದಿದ್ದಾರೆ. ಶಿವಮೊಗ್ಗ ಸುತ್ತಮುತ್ತ ಅಡಕೆ ಬೆಳೆದು ರೈತರು ಹಣ ಸಂಪಾದನೆ ಮಾಡಿರುವುದನ್ನು ನೋಡಿ, ನಮ್ಮ ಬಯಲುಸೀಮೆ ರೈತರು ಕೂಡ ನಾವೇನು ಕಡಿಮೆ ಎಂದು ಅಡಕೆ ನಾಟಿ ಮಾಡುತ್ತಿದ್ದೇವೆ. ರಾಗಿ, ಜೋಳ, ಭತ್ತ, ಹೆಸರು, ಹುರುಳಿ ಇವೆಲ್ಲಾ ಬಿಟ್ಟು ಲಾಭದಾಯಕ ಬೆಳೆ ಎಂದು ಅಡಕೆ ಹಿಂದೆ ಬಿದ್ದಿದ್ದಾರೆ ಎಂದರು. ರುಚಿ ಮತ್ತು ಬುದ್ಧಿ ಎರಡೂ ಬದಲಾವಣೆ ಆಗಿರುವುದರಿಂದ ಹಣದ ಹಿಂದೆ ಬಿದ್ದಿದ್ದೇವೆ. ಹಸು ಸಾಕಾಣಿಕೆ ನಿಂತುಹೋಗುತ್ತಿದೆ. ದೇಸಿ ಹಸು ಒಂದು ಅಥವಾ ಅರ್ಧ ಲೀಟರ್ ಹಾಲು ಕೊಡುತ್ತೆ ಅಂತ ಎಚ್‍ಎಫ್-ಜರ್ಸಿ ಹಿಂದೆ ಬಿದ್ದಿದ್ದೇವೆ. ಮನೆಯಲ್ಲಿ ಬೆಳೆದ ಧಾನ್ಯದ ಬೀಜಕ್ಕೆ ಹುಳು ಬೀಳುತ್ತೆ ಅಂತ ಎಲ್ಲ ಮಾರಾಟ ಮಾಡಿ ಸರ್ಕಾರದ ಮುಂದೆ ಕೈಯೊಡ್ಡುತ್ತಿದ್ದೇವೆ. ಈಗ ಕಣವೂ ಇಲ್ಲ, ರಾಶಿ ಪೂಜೆಯೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮೊದಲು ನನ್ನ ಮನೆ, ಕುಟುಂಬಕ್ಕೆ ಬೇಕಾದುದನ್ನು ಬೆಳೆದು ಉಳಿದ್ದನ್ನು ಮಾರಾಟ ಮಾಡಿ. ಬಹುಬೆಳೆ ಬೆಳೆಸುವುದನ್ನು ರೂಢಿ ಮಾಡಿ. ಒಂದೇ ಬೆಳೆ ಬೆಳೆದು ಉಳಿದದ್ದೆಲ್ಲವನ್ನೂ ಹೆಚ್ಚಿನ ದರಕ್ಕೆ ಕೊಂಡು ತರುವುದನ್ನು ನಿಲ್ಲಿಸಿ ಎಂದು ಹೇಳಿದರು. ರೈತರು ತಾವು ಬೆಳೆದ ಬೆಳೆಗಳನ್ನು ತಾವೇ ಮಾರಾಟ ಮಾಡಬೇಕು. ನಮ್ಮ ಬೆಳೆಗೆ ನಾವೇ ದರ ನಿಗದಿ ಮಾಡಬೇಕು. ಸರ್ಕಾರಕ್ಕೆ ದರ ಕೇಳುವುದಲ್ಲ . ಎಪಿಎಂಸಿಗೆ ತರಕಾರಿ ತಗೊಂಡು ಬೆಳಗ್ಗೆ 3 ಗಂಟೆಗೆಲ್ಲಾ ಯಾಕೆ ಬರ್ತೀರಿ? ಬೆಳಗ್ಗೆ 6 ಗಂಟೆಗೆ ಬಂದು ನೀವೇ ಸಂತೆ ಮಾಡಬೇಕು. ಮೊಬೈಲ್ ಇರುವುದು ಕೇವಲ ಯಾವುದೋ ವಾಹನ, ಸ್ಥಳಗಳ ಮುಂದೆ ನಿಂತು ಪೋಟೋ ತೆಗೆದು, ಸ್ಟೇಟಸ್ ಹಾಕುವುದಕ್ಕಲ್ಲ. ನೀವು ಬೆಳೆದಿರುವ ಫಸಲು, ಇಂತದ್ದು ಇದೆ. ದರ ಇಷ್ಟು ಎಂದು ಹಾಕಿ. ನಿಮ್ಮ ಬಳಗದವರಿಗೇ ಮೊದಲು ಮಾರಾಟ ಮಾಡಿ ಎಂದು ಸಲಹೆ ನೀಡಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ರೈತ ಮತ್ತು ಸೈನಿಕರನ್ನು ಯಾವತ್ತೂ ದೇಶ ಮರೆಯಬಾರದು. ಇವರಿಬ್ಬರೇ ನಮ್ಮ ರಕ್ಷಕರು ಮತ್ತು ಅನ್ನದಾತರು. ಆದ್ದರಿಂದಲೇ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಎಂದಿದ್ದಾರೆ ಎಂದು ಸ್ಮರಿಸಿದರು. ರೈತ ಮುಖಂಡರಾದ ಎಚ್.ಆರ್. ಬಸವರಾಜಪ್ಪ ಹಾಗೂ ಕೆ.ಟಿ. ಗಂಗಾಧರ್ ಮಾತನಾಡಿದರು. ಸಮಾರಂಭದಲ್ಲಿ ಶಾಸಕ ರೈತರನ್ನು ಗೌರವಿಸಲಾಯಿತು. ಮೇಯರ್ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್ ಲಕ್ಷ್ಮೀ ಶಂಕರ ನಾಯ್ಕ, ಆಹಾರ ದಸರಾ ಸಮಿತಿ ಅಧ್ಯಕ್ಷೆ ಮೆಹಕ್ ಷರೀಫ್, ಸದಸ್ಯರಾದ ಎಚ್.ಸಿ. ಯೋಗೀಶ್, ವಿಶ್ವನಾಥ್, ಸುನೀತಾ ಅಣ್ಣಪ್ಪ, ನಾಗರಾಜ ಕಂಕಾರಿ ಮೊದಲಾದವರು ಉಪಸ್ಥಿತರಿದ್ದರು. - - - ಬಾಕ್ಸ್-1 ರೈತರಿಗಿಂತ ದೊಡ್ಡ ವಿಜ್ಞಾನಿ ಇಲ್ಲ ಕೃಷಿಯ ಪ್ರತಿಯೊಂದು ವಿಚಾರದಲ್ಲಿ ರೈತ ಸಂಶೋಧಕ ಮತ್ತು ವಿಜ್ಞಾನಿ. ಆತನಿಗೆ ಉತ್ತಮ ಪರಿಜ್ಞಾನ ಇರಬೇಕು ಎಂದು ಪ್ರಗತಿಪರ ರೈತ ಜ್ಞಾನೇಶ್ವರ್ ಹೇಳಿದರು. ಯಾವ ಬೆಳೆ, ಯಾವ ಕಾಲಕ್ಕೆ ಅಗತ್ಯ ಎನ್ನುವುದರ ಅರಿವಿರಬೇಕು. ಇಂದಿನ ರೈತ ಮಕ್ಕಳಿಗೆ ಕುಲಸುಬಿನ ಮಹತ್ವವನ್ನು ತಿಳಿಸಿಕೊಡಬೇಕಿದೆ. ಬಹುತೇಕರ ಮಕ್ಕಳಿಗೆ ಕುಲಕಸುಬು ಮತ್ತು ಅದರ ಮಹತ್ವ ಗೊತ್ತಿಲ್ಲ. ಶಾಲೆ, ಗುರುಗಳು, ಪಾಠದ ಹೊರತಾಗಿ ಬೇರೆ ವಿಚಾರದ ಅರಿವಿರುವುದಿಲ್ಲ. ಹೀಗೆ ಮುಂದುವರಿದರೆ ಕೃಷಿ ಸಹಿತ ಎಲ್ಲ ಕುಲಸುಬುಗಳು ಕಷ್ಟಕ್ಕೆ ಸಿಲುಕಲಿವೆ ಎಂದರು. ರೈತರು ಸಾಂಪ್ರದಾಯಿಕ ಕೃಷಿ ಬಿಟ್ಟು ಹಣಕ್ಕೆ ಮಾರು ಹೋಗಬೇಡಿ. ರೈತ ಕಣ್ತೆರೆಯುವ ಕಾಲ ಎದುರಾಗಿದೆ. ರೈತರನ್ನು ಒಡೆಯುವ ಕೆಲಸವೂ ಇನ್ನೊಂದೆಡೆ ನಡೆಯುತ್ತಿದೆ. ರೈತ ಕಣ್ತೆರೆದರೆ ಜಗತ್ತು ಕಣ್ಣು ತೆರೆಯುತ್ತದೆ ಜ್ಞಾನೇಶ್ವರ್ ಅಭಿಪ್ರಾಯಪಟ್ಟರು. - - - ಬಾಕ್ಸ್-2 ದೇಸಿ ಸೊಗಡಿನಿಂದ ಕಂಗೊಳಿಸಿದ ರೈತ ದಸರಾ ಮೆರವಣಿಗೆ ಶಿವಮೊಗ್ಗ ದಸರಾ ಮಹೋತ್ಸವ ಅಂಗವಾಗಿ ನಗರದಲ್ಲಿ ಬುಧವಾರ ನಡೆದ ರೈತ ದಸರಾ ಕಾರ್ಯಕ್ರಮ ಗ್ರಾಮೀಣ ಸೊಗಡನ್ನು ಬಿಂಬಿಸುವ ಮೂಲಕ ಎಲ್ಲರ ಗಮನ ಸೆಳೆಯಿತು. ಶೃಂಗಾರಗೊಂಡ ಟ್ರ್ಯಾಕ್ಟರ್, ಎತ್ತಿನಗಾಡಿಗಳು ಮೆರವಣಿಗೆಯ ಕೇಂದ್ರ ಬಿಂದುವಾಗಿದ್ದು, ಸೈನ್ಸ್ ಮೈದಾನದಿಂದ ಕುವೆಂಪು ರಂಗಮಂದಿರದವರೆಗೆ ಸಾಗಿದ ರೈತ ದಸರಾ ಮೆರವಣಿಗೆಯಲ್ಲಿ ಎತ್ತಿನ ಗಾಡಿಗಳು ನೋಡುಗರ ಗಮನ ಸೆಳೆದವು. ಜೊತೆಗೆ ಡೊಳ್ಳು ಕುಣಿತ ಸೇರಿದಂತೆ ಹಲವು ಕಲಾ ಪ್ರಕಾರಗಳು ಮೆರವಣಿಗೆಗೆ ರಂಗು ನೀಡಿದ್ದವು. ಎತ್ತಿನ ಗಾಡಿಗಳಲ್ಲಿ ರೈತ ನಾಯಕರಾದ ಎಚ್.ಆರ್. ಬಸವಾರಜಪ್ಪ, ಕೆ.ಟಿ.ಗಂಗಾಧರ್, ಶಾಸಕ ಎಸ್.ಎನ್.ಚನ್ನಬಸಪ್ಪ ಸತಃ ಗಾಡಿಯನ್ನು ಚಲಾಯಿಸಿದರು. ನೂರಾರು ಮಂದಿ ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು. ನಗರದ ಸೈನ್ಸ್ ಮೈದಾನದಲ್ಲಿ ರೈತ ಜಾಥಾಕ್ಕೆ ರೈತ ದಸರಾ ಸಮಿತಿ ಅಧ್ಯಕ್ಷೆ ಮೆಹಖ್ ಶರೀಫ್ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ರೈತರು ಮಳೆ ಇಲ್ಲದೆ ಸಂಕಟದಲ್ಲಿದ್ದಾರೆ. ಅದರೂ ಕೂಡ ದಸರಾ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಅವರ ಸಂಕಷ್ಟಗಳು ಬೇಗನೆ ದೂರವಾಗಬೇಕು. ರೈತರು ಸಂತೋಷವಾಗಿದ್ದಾಗ ಮಾತ್ರ ದೇಶ ಸುಭಿಕ್ಷವಾಗಿರುತ್ತದೆ ಎಂದರು. ಪಾಲಿಕೆಯ ಅಧಿಕಾರಿ ಡಿ.ನಾಗೇಂದ್ರ ಮಾತನಾಡಿ, ರೈತರು ಈ ದೇಶದ ಬೆನ್ನೆಲುಬು. ಇಂದು ರೈತ ದಸರಾಕ್ಕೆ ಚಾಲನೆ ನೀಡುತ್ತಿದ್ದೇವೆ. ಕುವೆಂಪು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಗುವುದು. ರೈತ ಜಾಥಾದಲ್ಲಿ ಎತ್ತಿನ ಗಾಡಿಗಳು ಭಾಗವಹಿಸಿರುವುದು ಆಕರ್ಷಣೀಯವಾಗಿದೆ ಎಂದರು. ಈ ಸಂದರ್ಭದಲ್ಲಿ ಮೇಯರ್ ಎಸ್. ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ್ ನಾಯಕ್, ಸದಸ್ಯರಾದ ಅನಿತಾ ರವಿಶಂಕರ್, ಇ.ವಿಶ್ವಾಸ್, ಧೀರರಾಜ್ ಹೊನ್ನವಿಲೆ, ಆರ್.ಸಿ. ನಾಯ್ಕ, ಎನ್. ಗೋವಿಂದಪ್ಪ ಸೇರಿದಂತೆ ಪಾಲಿಕೆ ಅಧಿಕಾರಿಗಳು, ರೈತ ಮುಖಂಡರು ಭಾಗವಹಿಸಿದ್ದರು. - - - -18ಎಸ್‌ಎಂಜಿಕೆಪಿ02: ರೈತ ದಸರಾ ಕಾರ್ಯಕ್ರಮವನ್ನು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಚಿತ್ರದುರ್ಗದ ಕೆ.ಆರ್. ಜ್ವಾನೇಶ್ವರ್ ಉದ್ಘಾಟಿಸಿದರು. - - - -18ಎಸ್‌ಎಂಜಿಕೆಪಿ03: ಶಿವಮೊಗ್ಗ ದಸರಾ ಅಂಗವಾಗಿ ಸೈನ್ ಮೈದಾನದಿಂದ ಕುವೆಂಪು ರಂಗಮಂದಿರವರೆಗೆ ಹಮ್ಮಿಕೊಂಡಿದ್ದ ರೈತ ದಸರಾ ಮೆರವಣಿಗೆಯಲ್ಲಿ ರೈತ ನಾಯಕರಾದ ಎಚ್.ಆರ್. ಬಸವರಾಜಪ್ಪ, ಕೆ.ಟಿ.ಗಂಗಾಧರ್, ಶಾಸಕ ಎಸ್.ಎನ್. ಚನ್ನಬಸಪ್ಪ ಎತ್ತಿನ ಗಾಡಿ ಚಲಾಯಿಸಿದರು.