ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸದಾ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ರೈತರು ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.ತಾಲೂಕಿನ ಹಿರೀಸಾವೆ ಗ್ರಾಮದ ಶ್ರೀ ಚೌಡೇಶ್ವರಿ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಗ್ರಾಮ ಪಂಚಾಯಿತಿ ಹಾಗೂ ಶ್ರೀ ಕಾಲಭೈರವೇಶ್ವರಸ್ವಾಮಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಆದ್ದರಿಂದ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಅನುಕೂಲವಾಗಲಿದೆ. ಪ್ರತಿಯೊಬ್ಬರೂ ಸಹ ವರ್ಷದಲ್ಲಿ ೨ರಿಂದ ೩ ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ತಿಳಿಸಿದರು.
ಆಹಾರ ಪದ್ಧತಿ ಹಾಗೂ ಜೀವನ ಶೈಲಿಯ ಬದಲಾವಣೆಯೇ ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ. ಕೆಲವೆಡೆ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಗೋಬಿ ಸೇರಿ ಇತರೆ ಆಹಾರಗಳಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿರುವುದು ತಿಳಿದುಬಂದಿದೆ. ವ್ಯಾಪಾರ ಮಾಡಿ, ಆದರೆ ಅಪಾಯಕಾರಿ ಅಂಶಗಳಿರುವ ಪದಾರ್ಥಗಳನ್ನು ಬಳಸಬೇಡಿ. ಅದರಿಂದ ಜನ ಸಾಮಾನ್ಯರು ಆರೋಗ್ಯದ ಜೊತೆಗೆ ಪ್ರಾಣ ಕಳೆದುಕೊಳ್ಳುತಿದ್ದಾರೆಂದು ಮನವಿ ಮಾಡಿದರು. ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಿ ಸುಮಾರು ೧೨ ರಿಂದ ೧೪ ಮೆಡಿಸನ್‌ಗಳನ್ನು ಸರ್ಕಾರವು ಬ್ಯಾನ್ ಮಾಡಿದೆ. ತಾಲೂಕು ವ್ಯಾಪ್ತಿಯ ಯಾವುದೇ ಮೆಡಿಕಲ್ ಶಾಪ್ ಗಳಲ್ಲಿ ನಿಷೇಧಿತ ಔಷಧಿ ಹಾಗೂ ಮಾತ್ರೆಗಳ ಮಾರಾಟ ಮಾಡುವುದು ಕಂಡುಬಂದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.ಕಳೆದ ೨ ತಿಂಗಳಿಂದ ಈಚೆಗೆ ಜಿಲ್ಲೆಯಲ್ಲಿ ೫೦ಕ್ಕೂ ಹೆಚ್ಚು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅದರಲ್ಲಿ ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆ ಇದ್ದವರಲ್ಲಿಯೇ ಹೆಚ್ಚು ಕಂಡುಬಂದಿದೆ. ದಯವಿಟ್ಟು ಜನತೆ ೨- ೩ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರ ಜೊತೆಗೆ ಯೋಗ, ಧ್ಯಾನ ಹಾಗೂ ಆಹಾರ ಪದ್ಧತಿ ಅನುಸರಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಎಚ್.ಎ.ಪ್ರಮೋದ್ ಮಾತನಾಡಿ, ಹಣ, ಆಸ್ತಿ ಸಂಪಾದನೆಗಿಂತ ಆರೋಗ್ಯ ಸಂಪಾದನೆ ಮುಖ್ಯ. ಇವತ್ತಿನ ದಿನದಲ್ಲಿ ಹಣ ಗಳಿಸಲು ಹತ್ತಾರು ಮಾರ್ಗಗಳಿವೆ, ಆದರೆ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಪೌಷ್ಠಿಕ ಆಹಾರ ಸೇವನೆ, ಯೋಗ, ಧ್ಯಾನ ಹಾಗೂ ಉತ್ತಮ ದಿನಚರಿ ಅನುಸರಿಸುವುದು ಆಗತ್ಯ ಎಂದರು.ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೩ ರವರೆಗೆ ಆರೋಗ್ಯ ಶಿಬಿರ ಜರುಗಿದ್ದು, ವೈದ್ಯರ ಜೊತೆಗೆ ೪೦ ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಕರ್ತವ್ಯ ನಿರ್ವಹಿಸಿದರು. ಬಿಪಿ, ಷುಗರ್, ಮಂಡಿನೋವು, ಪೈಲ್ಸ್, ಮೂಗು ಮತ್ತು ಗಂಟಲು ಸಮಸ್ಯೆ, ಸ್ತ್ರೀ ರೋಗಗಳು ಸೇರಿ ವಿವಿಧ ತಪಾಸಣೆಗಳು ಜರುಗಿದ್ದು, ೨೮೦ ಕ್ಕೂ ಹೆಚ್ಚು ಜನತೆ ತಪಾಸಣೆ ಮಾಡಿಸಿ ಕೊಂಡರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಬೋರಯ್ಯ, ಮಾಜಿ ಅಧ್ಯಕ್ಷ ಎಚ್.ಈ. ಬೋರಣ್ಣ, ಪಿಎಸಿಸಿಬಿ ಅಧ್ಯಕ್ಷ ಎಚ್.ಜೆ. ಮಹೇಶ್, ನಿರ್ದೇಶಕ ಬಾಬು, ಕಾರ್ಯದರ್ಶಿ ಹರೀಶ್, ಕಸಾಪ ಉಪಾಧ್ಯಕ್ಷ ಗೋವಿಂದರಾಜ್ (ಜೀವಿ), ನಿಕಟ ಪೂರ್ವ ಅಧ್ಯಕ್ಷ ಎಚ್.ಪಿ. ಶಂಕರ್, ಶ್ರೀ ಕಾಲ ಭೈರವೇಶ್ವರಸ್ವಾಮಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವೈದ್ಯರಾದ ಡಾ.ಸುಪ್ರೀತ್, ಡಾ.ಕಿರಣ್, ಪ್ರಮುಖರಾದ ರವಿಕುಮಾರ್, ದಿನೇಶ್, ರವಿ ಇತರರು ಇದ್ದರು.