ಸಾರಾಂಶ
ಮುಳಗುಂದ: ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಈ ಯೋಜನೆಯ ಸಂಪೂರ್ಣ ಲಾಭವನ್ನು ರೈತರು ಪಡೆದುಕೊಂಡು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಪಟ್ಟಣದ ಶ್ರೀಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠದ ಆವರಣದಲ್ಲಿ ಸೋಮವಾರ ಸಂಜೆ ಜಿಪಂ ಗದಗ, ಕೃಷಿ ಇಲಾಖೆ ಗದಗ ಹಾಗೂ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆ ನೀಲಗುಂದ ಉಪಜಲಾನಯನ ಯೋಜನೆ ಅಡಿಯಲ್ಲಿ ಕೈಗೊಳ್ಳುವ ಕಾಮಗಾರಿಗಳ ಚಾಲನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನೀಲಗುಂದ ಉಪ ಜಲಾಯನಯನ ಯೋಜನೆ ಅಡಿಯಲ್ಲಿ ಶಿರುಂಜ ೨೧.೮೩ ಹೆಕ್ಟೇರ್, ನಬಾಪೂರಕ್ಕೆ ೪೩.೭೭ಹೇ, ಹೊಸೂರು ೫೭೧.೭೫ಹೇ, ಕಣವಿ ೩೮೩.೮೪ ಹೇ, ಹರ್ತಿ ೨೮.೬೪ಹೇ, ಶೀತಾಲಹರಿ ೬೮.೪೩ ಹೇ, ಬಸಾಪೂರ ೧೭೦.೫೧ ಹೇ, ಚಿಂಚಲಿ ೩೫೦.೯೪ ಹೇ, ನೀಲಗುಂದ ೩೭೫.೦೮ಹೇ, ಮುಳಗುಂದ ೩೭೫೪.೨೦ ಹೆಕ್ಟೇರ್‌ನಲ್ಲಿ ಅಂದಾಜು ೧೬ ಕೋಟಿ ವೆಚ್ಚದಲ್ಲಿ ಎಲ್ಲ ವರ್ಗದವರಿಗೂ ವ್ಯತ್ಯಾಸವಿಲ್ಲದೆ ನಿಮ್ಮ ಸರ್ವೇ ನಂ.ಮೇಲೆ ಅವರ ಹೊಲದಲ್ಲಿ ಬದು ನಿರ್ಮಾಣ, ಕೋಡಿ ನಿರ್ಮಾಣ, ರಬಕಲ್ಲು ತಡೆ, ಬೌಲ್ಡರ್ಸ್ ತಡೆ, ಕೃಷಿ ಹೊಂಡ, ನಾಲಾ ದಂಡೆ ಸ್ಥೀರಿಕರಣ ಮಾಡುತ್ತಾರೆ. ತೋಟಗಾರಿಕೆ ಪ್ರದೇಶ ವಿಸ್ತರಣೆ, ಅರಣ್ಯದಲ್ಲಿ ಬದುಗಳ ಮೇಲೆ ಸಸಿ ನೆಡುವುದು, ಬದುಗಳ ಮೇಲೆ ಬೀಜ ಬಿತ್ತನೆ ಸೇರಿ ಸಮಾಜಕ್ಕೆ ನೆಡು ತೋಪಗಳನ್ನು ಮಾಡುತ್ತಾರೆ. ರೈತರು ಸರಿಯಾಗಿ ಈ ಯೋಜನೆ ಅನುಷ್ಠಾನ ಮಾಡಿಕೊಂಡು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಹೊಲ ಇಲ್ಲದ ಕೃಷಿ ಕೂಲಿ ಕಾರ್ಮಿಕರಿಗೆ ಸ್ವ-ಸಹಾಯ ಗುಂಪುಗಳ ಮಾಡಿಕೊಳ್ಳುವ ಮೂಲಕ ಅವರ ಬದುಕು ನಿರ್ಮಾಣ ಮಾಡಿಕೊಳ್ಳೋದಕ್ಕೆ ಇಂದು ಈ ಒಂದು ಕಾರ್ಯಕ್ರಮದ ಮೂಲಕ ಚಾಲನೆ ನೀಡಿದ್ದೇವೆ. ಈ ಯೋಜನೆಯನ್ನು ಅವಧಿಯೊಳಗೆ ರೈತರ ವಿಶ್ವಾಸದೊಂದಿಗೆ ಉತ್ತಮ ದರ್ಜೆ ಕಾಮಗಾರಿಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಮಾತನಾಡಿ, ಇದೊಂದು ವಿಶೇಷವಾದ ಯೋಜನೆಯಾಗಿದ್ದು, ವೈಜ್ಞಾನಿಕ ಆಧಾರದ ಮೇಲೆ ಅನುಷ್ಠಾನ ಮಾಡುತ್ತಿರುವ ಜಲಾನಯನ ಯೋಜನೆ ಕಾರ್ಯಕ್ರಮವಾಗಿದೆ. ಈ ಯೋಜನೆ ಬಗ್ಗೆ ಈಗಾಗಲೇ ಜಾಥಾ, ಬೀದಿ ನಾಟಕಗಳ ಮೂಲಕ ರೈತರ ಒಗ್ಗೂಡಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಯೋಜನಾ ವ್ಯಾಪ್ತಿಗಳಲ್ಲಿ ತಜ್ಞರ ಮೂಲಕ ಮಾಹಿತಿ, ವಿವರಣೆ ನೀಡಲಾಗಿದೆ. ಎಲ್ಲ ರೈತರ ಜಮೀನುಗಳಲ್ಲಿ ಇಳಿಜಾರಿಗೆ ಅಡ್ಡಲಾಗಿ ಬದು ಹಾಕಲಾಗುತ್ತದೆ.ಈ ಯೋಜನೆಯಡಿಯಲ್ಲಿ ಈಗಾಗಲೇ ೩ ಕೆರೆಗಳ ಪುನಶ್ಚೇತನ, ಯೋಜನಾ ವ್ಯಾಪ್ತಿಯ ಶಾಲೆಗಳ ಮೈದಾನಗಳಲ್ಲಿ ೧೦೦ ಸಿಮೆಂಟ್ ಬೆಂಚ್‌ಗಳನ್ನು ಹಾಕಲಾಗಿದೆ, ೫ ಶಾಲೆಗಳಿಗೆ ಆಯ್ದ ಪುಸ್ತಕ ಹಾಗೂ ಕಪಾಟು ವಿತರಣೆ ಮಾಡಿದೆ. ೧ಶಾಲೆಯಲ್ಲಿ ನೀರಿನ ಟ್ಯಾಂಕ್ ಅಳವಡಿಸಿದೆ. ಪಶು ಚಿಕಿತ್ಸಾಲಯಗಳಲ್ಲಿ ಪಶು ಆರೋಗ್ಯ ಶಿಬಿರಗಳ ಆಯೋಜನೆ ಹಾಗೂ ಟ್ರೆವಿಸ್ ಹಾಗೂ ಆಕಳು ಎತ್ತುವ ಸಾಧನ ಅಳವಡಿಸಿದೆ ಎಂದು ವಿವರಿಸಿದರು.
ಈ ವೇಳೆ ಯೋಜನೆಯ ಕರಪತ್ರ ಬಿಡುಗಡೆಗೊಳಿಸಲಾಯಿತು.ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.ಮಹಾಂತೇಶ ನೀಲಗುಂದ, ಕೃಷಿ ನಿರ್ದೇಶಿ ತಾರಾಮಣಿ ಜಿ.ಎಚ್., ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರಗಣ್ಣವರ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ. ನೀಲಗುಂದ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸುಂಕಾಪುರ, ಪಪಂ ಸದಸ್ಯರಾದ ಕೆ.ಎಲ್. ಕರಿಗೌಡ್ರ, ಎನ್.ಆರ್. ದೇಶಪಾಂಡೆ, ಪ್ರಗತಿ ಪರ ರೈತರಾದ ಸಯ್ಯದ್ ಅಲಿ ಶೇಖ, ಬಿ.ಸಿ. ಬಡ್ನಿ, ಪಿ.ಎ. ವಂಟಕರ, ಬಸವರಾಜ ಬಾತಾಖಾನಿ, ಗುರಣ್ಣ ಜವಳಿ, ಚಿಂಚಲಿ ಗ್ರಾಪಂ ಅಧ್ಯಕ್ಷೆ ದೇವಮ್ಮ ಬಂಗಾರಿ, ಎಂ.ಡಿ.ಬಟ್ಟೂರ, ಪಪಂ ಸದಸ್ಯ ಎಸ್.ಸಿ. ಬಡ್ನಿ, ವಿಎಸ್‌ಎಸ್ ಸೂಸೈಟಿ ಅಧ್ಯಕ್ಷ ಬಸವರಾಜ ವಾಲಿ, ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ, ಸಂಜಯ ನೀಲಗುಂದ, ಅಶೋಕ ಸೊನಗೋಜಿ, ವಿಜಯ ನೀಲಗುಂದ, ಹೊನ್ನಪ್ಪ ನೀಲಗುಂದ, ಸೋಮಣ್ಣ ಸುಂಕದ, ಇಒ ಜಿನಗಾ, ಕೃಷಿ ಸಹಾಯಕ ಅಧಿಕಾರಿ ಗುರಿಕಾರ ಸೇರಿದಂತೆ ರೈತ ಮಹಿಳೆಯರು, ರೈತರು ಇದ್ದರು.