ಸಾರಾಂಶ
ರೈತ ಹೋರಾಟಗಾರ ಎನ್.ಡಿ. ಸುಂದರೇಶ್ ಸ್ಮರಣಾರ್ಥದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಮತ
ಕನ್ನಡಪ್ರಭ ವಾರ್ತೆ ಸಾಗರಎಲ್ಲ ಹೋರಾಟಗಳಿಗೂ ಸಂಘಟನೆ ಅತಿ ಮುಖ್ಯ. ಪ್ರಸ್ತುತ ರೈತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ, ಅವರ ಬೇಡಿಕೆ ಈಡೇರಿಕೆಗೆ ಸಂಘಟನೆಯ ಮೂಲಕ ಸರ್ಕಾರದ ಎದುರು ಹಕ್ಕೊತ್ತಾಯ ಮಂಡಿಸಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.ರೈತ ಹೋರಾಟಗಾರ ಎನ್.ಡಿ. ಸುಂದರೇಶ್ ಸ್ಮರಣಾರ್ಥ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶಿವಮೊಗ್ಗ ಜಿಲ್ಲಾ ರೈತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೋರಾಟದ ಮೂಲಕವೇ ನಮ್ಮ ಹಕ್ಕುಗಳನ್ನು ದಕ್ಕಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಮನೆಯಲ್ಲಿ ಕುಳಿತರೆ ರೈತರ ಬೇಡಿಕೆಗಳು ಈಡೇರುವುದಿಲ್ಲ ಎಂದು ಹೇಳಿದರು.ಹಿಂದೆ ಸಾಗರದ ನೆಲದಲ್ಲಿ ಕಾಗೋಡು ಚಳವಳಿಯಂತಹ ಹೋರಾಟ ನಡೆದು ಗೇಣಿ ರೈತರಿಗೆ ನ್ಯಾಯ ದೊರಕಿದ ಇತಿಹಾಸವಿದೆ. ಸಂಘಟನೆ ಗಟ್ಟಿಯಾಗಿದ್ದರೆ ಎಂತಹ ಸಮಸ್ಯೆಯನ್ನಾದರೂ ದಿಟ್ಟವಾಗಿ ಎದುರಿಸಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಎಲ್ಲ ಹೋರಾಟಗಳು ತನ್ನ ಮೊನಚನ್ನು ಕಳೆದುಕೊಳ್ಳುತ್ತಿದೆ. ಈ ಕಾರಣಕ್ಕಾಗಿಯೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಮಾತನಾಡಿ, ಗೇಣಿ ಹೋರಾಟದ ಮೂಲಕ ನಾವೆಲ್ಲಾ ಭೂಮಿಹಕ್ಕು ಪಡೆಯಲು ಸಾಧ್ಯವಾಗಿದೆ. ಗೇಣಿ ರೈತರಿಗೆ ಭೂಮಿ ಸಿಗಲು ಕಾಗೋಡು ತಿಮ್ಮಪ್ಪ, ಎಸ್. ಬಂಗಾರಪ್ಪ ಇನ್ನಿತರರು ನಡೆಸಿದ ಕಾಗೋಡು ಚಳವಳಿ ಕಾರಣವಾಗಿದೆ. ಆದರೆ ಈತನಕ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿಹಕ್ಕು ಸಿಗಲಿಲ್ಲ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿರುವ ಪ್ರಕರಣ ನಮ್ಮ ಪರವಾಗಿ ಬರಬಹುದು ಎನ್ನುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ನಾಡಿಗೆ ವಿದ್ಯುತ್ ನೀಡಲು ಸರ್ವಸ್ವವನ್ನು ಕಳೆದುಕೊಂಡ ಕುಟುಂಬಗಳು ಈಗ ತ್ರಿಶಂಕು ಸ್ಥಿತಿ ಎದುರಿಸುತ್ತಿವೆ. ಭೂಮಿಯ ಹಕ್ಕಿಗಾಗಿ ಸರ್ಕಾರದ ಎದುರು ಮಂಡಿಯೂರುವ ಸ್ಥಿತಿ ನಿರ್ಮಾಣವಾಗಿದೆ. ಬಗರ್ಹುಕುಂ ರೈತರು, ಅರಣ್ಯಹಕ್ಕು ವಾಸಿಗಳ ಭೂಹಕ್ಕಿನ ಬಗ್ಗೆ ಗಂಭೀರ ಚರ್ಚೆಯಾಗಬೇಕಾಗಿದೆ. ಶರಾವತಿ, ಚಕ್ರ, ಸಾವೆಹಕ್ಲು ಸೇರಿದಂತೆ ಅನೇಕ ಯೋಜನೆಗಳ ಮುಳುಗಡೆ ಸಂತ್ರಸ್ತರ ಬದುಕಿಗೆ ಸರ್ಕಾರಗಳು ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಸುಂದರ ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ರೈತ ಚಳವಳಿಯ ಹಸಿರು ಹೊತ್ತಿಗೆ ಬಿಡುಗಡೆ ಮಾಡಿದರೆ, ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆನ್ಲೈನ್ ಸದಸ್ವತ್ವ ನೋಂದಾವಣೆಗೆ ಚಾಲನೆ ನೀಡಿದರು.
ರೈತ ಸಂಘಟನೆಯ ಪ್ರಮುಖರಾದ ನೇತ್ರಾವತಿ ಮೈಸೂರು, ಸರೋಜ ಎಂ.ಎಸ್., ಜಯಲಕ್ಷ್ಮೀ ನೇದರವಳ್ಳಿ, ಓಟೂರು ಶಿವಣ್ಣ, ಮಂಜುಳಾ ಕೆ. ಇನ್ನಿತರರು ಹಾಜರಿದ್ದರು. ಎನ್.ಡಿ. ವಸಂತ ಕುಮಾರ್ ಸ್ವಾಗತಿಸಿದರು. ಸತೀಶ್ ಅಂಗಡಿ ವಂದಿಸಿದರು.