ರೈತರು ಮಣ್ಣಿನ ಆರೋಗ್ಯ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಿ :ಬಾಳೇಕಾಯಿ ಶಿವನಂಜಯ್ಯ

| Published : Feb 16 2025, 01:45 AM IST

ಸಾರಾಂಶ

ಕೃಷಿ ಕ್ಷೇತ್ರದ ಆರಂಭಿಕ ಬಿಕ್ಕಟ್ಟು ನಾವು ಬೆಳೆಯುವ ಮಣ್ಣಿನಲ್ಲಿಯೇ ಅಡಗಿದೆ. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ನಮ್ಮ ಮಣ್ಣು ಸತ್ವ ಕಳೆದುಕೊಂಡಿರುವುದೇ ಕೃಷಿ ಕ್ಷೇತ್ರ ಸೋಲಲು ಮೊದಲ ಕಾರಣ. ನಾವು ಬೆಳೆದ ಬೆಳೆಗಳು ಆರೋಗ್ಯಕರ ಮತ್ತು ಹೆಚ್ಚು ಇಳುವರಿ ನೀಡಬೇಕಾದರೆ ಮಣ್ಣು ಜೀವಂತವಾಗಿರಬೇಕು ಎಂದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಣ್ಣು, ನೀರು ಮತ್ತು ಬೆಳಕಿನ ನೈಸರ್ಗಿಕ ಕ್ರಿಯೆಗಳ ಮೇಲೆ ಕೃಷಿ ನಿಂತಿದೆ. ರೈತರು ಮಣ್ಣಿನ ಆರೋಗ್ಯ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಹಜ ಕೃಷಿ ತಜ್ಞ ಚಿಕ್ಕನಾಯಕನಹಳ್ಳಿಯ ಬಾಳೇಕಾಯಿ ಶಿವನಂಜಯ್ಯ ಕರೆ ನೀಡಿದರು.

ಪಟ್ಟಣದ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ಮಾಜಿ ಸ್ಪೀಕರ್ ದಿ.ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಪ್ರಸ್ತುತ ಕೃಷಿ ಬಿಕ್ಕಟ್ಟುಗಳು ಮತ್ತು ಪರಿಹಾರಗಳನ್ನು ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.

ಕೃಷಿ ಕ್ಷೇತ್ರದ ಆರಂಭಿಕ ಬಿಕ್ಕಟ್ಟು ನಾವು ಬೆಳೆಯುವ ಮಣ್ಣಿನಲ್ಲಿಯೇ ಅಡಗಿದೆ. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ನಮ್ಮ ಮಣ್ಣು ಸತ್ವ ಕಳೆದುಕೊಂಡಿರುವುದೇ ಕೃಷಿ ಕ್ಷೇತ್ರ ಸೋಲಲು ಮೊದಲ ಕಾರಣ. ನಾವು ಬೆಳೆದ ಬೆಳೆಗಳು ಆರೋಗ್ಯಕರ ಮತ್ತು ಹೆಚ್ಚು ಇಳುವರಿ ನೀಡಬೇಕಾದರೆ ಮಣ್ಣು ಜೀವಂತವಾಗಿರಬೇಕು ಎಂದರು.

ಕೃಷಿ ಕ್ಷೇತ್ರ ಸಮೃದ್ಧವಾಗಲು ಬೆಳೆಯುವ ಮಣ್ಣಿನಲ್ಲಿ ಎಲ್ಲಾ ಬಗೆಯ ಜೀವಾಣುಗಳು ಜೀವಂತವಾಗಿರಬೇಕು. ರಾಸಾಯನಿಕ ಕೃಷಿ ಭೂಮಿ ಫಲವತ್ತತೆಯನ್ನು ಧ್ವಂಸಗೊಳಿಸಿದ್ದು, ನೈಸರ್ಗಿಕ ಕೃಷಿಯ ಮೂಲಕ ನಾವು ನಮ್ಮ ಮಣ್ಣನ್ನು ಮರು ಜೀವಗೊಳಿಸಬೇಕಾಗಿದೆ ಎಂದು ತಿಳಿಸಿದರು.

ಮಣ್ಣಿ ಜೊತೆಗೆ ನಾವು ನಮ್ಮ ಸುತ್ತಲಿನ ವಾತಾವರಣವನ್ನು ಹಾಳು ಮಾಡಿದ್ದೇವೆ. ಸೂರ್ಯನ ಕಿರಣಗಳು ಸೇರಿ ನಮ್ಮ ಸುತ್ತಲಿನ ವಾತಾವರಣವೂ ಚೆನ್ನಾಗಿದ್ದಾಗ ಮಾತ್ರ ನಾವು ಉತ್ತಮ ಇಳುವರಿ ಪಡೆದು ಲಾಭದಾಯಕ ಕೃಷಿಕರಾಗಲು ಸಾಧ್ಯ. ಸಹಜ ಕೃಷಿಯಲ್ಲಿ ಮಣ್ಣಿನ ಜೀವಂತಿಕೆಗೆ ಮದ್ದಿದೆ ಎಂದು ಹೇಳಿದರು.

ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಮದ್ದೂರು ತಾಲೂಕು ಗೊಳೂರುದೊಡ್ಡಿಯ ಸಾವಯವ ಕೃಷಿಕ ಸಿ.ಸಿ.ಕೃಷ್ಣ, ನೀರಾವರಿ ಪ್ರದೇಶದಲ್ಲಿ ಸಾವಯವ ಕೃಷಿ ಕುರಿತು ಮಾತನಾಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಸರ್ಕಾರದಿಂದ ರೈತರಿಗೆ ಸಿಗುವ ಸವಲತ್ತುಗಳನ್ನು ತಿಳಿಸಿದರು. ಗ್ರಾಮೀಣ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಎಂ.ನಾಗರಾಜೇಗೌಡ ಬ್ಯಾಂಕುಗಳಿಂದ ರೈತರಿಗೆ ಸಿಗುವ ಸವಲತ್ತುಗಳನ್ನು ತಿಳಿಸಿದರು.

ಇದೇ ವೇಳೆ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ ತಾಲೂಕಿನಿಂದ ನಿರ್ದೇಶಕರಾಗಿ ಆಯ್ಕೆಯಾದ ಡಾಲು ರವಿ ಮತ್ತು ಎಂ.ಬಿ.ಹರೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಎನ್.ಕೇಶವಮೂರ್ತಿ, ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೇಹೊಸಹಳ್ಳಿ ಜವರಾಯಿಗೌಡ, ಗೌರವಾಧ್ಯಕ್ಷೆ ಇಂದಿರಮ್ಮ ಕೃಷ್ಣ, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಅಂ.ಚಿ ಸಣ್ಣಸ್ವಾಮೀಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಐಚನಹಳ್ಳಿ ಶಿವಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕೃಷ್ಣ ಅಭಿಮಾನಿಗಳು ಉಪಸ್ಥಿತರಿದ್ದರು.